ಗದಗ

ವಿವಿ ಹೆಸರಲ್ಲಿ ವಂಚನೆ: ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ರೋಣ, ಸೆ. 24
ಎಂಬಿಎ, ಬಿಬಿಎ, ಎಂಎ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರಮಾಣ ಪತ್ರವನ್ನು ರಾಜ್ಯದ ವಿವಿಧ ವಿಶ್ವವಿದ್ಯಾಲಯದಿಂದ ಕೊಡಿಸುವುದಾಗಿ ಜನತೆಯನ್ನು ನಂಬಿಸಿ ಲಕ್ಷಾಂತರ ರು.ಗಳಿಗೂ ಹೆಚ್ಚು ಹಣ ವಸೂಲಿ ಮಾಡಿ ಈಗ ಪರಾರಿಯಾಗಿದ್ದಾರೆ ಎಂದು ವಂಚನೆಗೊಳಗಾದ ಜನತೆ ಆಕ್ರೋಶಗೊಂಡ ಪಟ್ಟಣದ ಜನನಿ ಕರಿಯರ್ ಅಕಾಡೆಮಿ ಕಚೇರಿಗೆ ಮಂಗಳವಾರ ಬೀಗ ಜಡಿದು ಪ್ರತಿಭಟಿಸಿದರು.
ವಂಚನೆಗೊಳಗಾದ ಬಸವಣ್ಣೆವ್ವ ಕಾಡಗಿಮಠ ಮತ್ತು ಶಿವಾನಂದ ಕೋಟನ್ನವರ ಮಾತನಾಡಿ, ಪಟ್ಟಣದ ಸ್ಟೇಟ್ ಬ್ಯಾಂಕ್ ಹತ್ತಿರದ ಪೂಜಾರ ಕಾಂಪ್ಲೆಕ್ಸ್‌ನಲ್ಲಿ ಜನನಿ ಕರಿಯರ್ ಅಕಾಡೆಮಿ ರೋಣ, ಜನನಿ ಡಿಸ್ಟನ್ಸ್ ಎಜುಕೇಶನ್ ಸೆಂಟರ್ ಎಂಬ ಹೆಸರಿನ ಸಂಸ್ಥೆಯಿಂದ ಮೋಸವಾಗಿದೆ. ಸಂಸ್ಥೆಯ ಮುಖ್ಯಸ್ಥ ತಾಲೂಕಿನ ಇಟಗಿ ಗ್ರಾಮದ ಪ್ರಭು ಹೊರಪೇಟಿ ಎಂಬುವರು ಮೋಸ ಮಾಡಿದ್ದಾರೆ. 50ಕ್ಕೂ ಹೆಚ್ಚು ಜನರಿಗೆ ತಲಾ ರು. 5ರಿಂದ 15 ಸಾವಿರ ವಸೂಲಿ ಮಾಡಲಾಗಿದೆ. ಇದೊಂದು ಉತ್ತಮ ಸಂಸ್ಥೆ ಎಂದು ತಿಳಿದು ಪ್ರವೇಶ ಪಡೆದಿದ್ದೇವೆ. ಈಗ ಈ ರೀತಿ ನಂಬಿಸಿ ಮೋಸ ಮಾಡುತ್ತಾರೆ ಎಂದು ಆರೋಪಿಸಿದರು.
ಇಂತಿಷ್ಟು ಕೋರ್ಸ್‌ಗೆ ಇಂತಿಷ್ಟು ಹಣವೆಂದು ನಿಗದಿಪಡಿಸಿದ್ದಾರೆ. ಹಣ ಕೊಟ್ಟ ಕುರಿತು ರಶೀದಿ ಕೊಡಿ ಎಂದು ಕೇಳಿದರೆ ಬಿಳಿ ಹಾಳಿಯಲ್ಲಿ ಬರೆದು ಕೊಟ್ಟಿದ್ದಾರೆ. ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂದು 8 ತಿಂಗಳಿನಿಂದ ಕೇಳುತ್ತಿದ್ದೇವೆ. ವಿಶ್ವವಿದ್ಯಾಲಯದವರ ದಿನಾಂಕ ಇನ್ನೂ ನಿಗದಿಪಡಿಸಿಲ್ಲ. ಮುಂದಿನ ತಿಂಗಳು ನಡೆಯಬಹುದು ಎಂದು ಹೇಳುತ್ತಲೇ ಬಂದಿದ್ದಾನೆ. ಈಗ ಮಾತ್ರ ರಾಗ ಬದಲಾಯಿಸಿದ್ದು, ನನಗೆ ಮೋಸವಾಗಿದೆ ನೀವು ಕೊಟ್ಟ ಹಣವನ್ನು ವಾಪಸ್ ಕೋಡುತ್ತೇನೆ ಎಂದು ಹೇಳಿ ಈಗ ನಾಪತ್ತೆಯಾಗಿದ್ದಾನೆ. ಈ ಹಿಂದೆ ಕೆಲವರಿಗೆ ಪದವಿ, ಸ್ನಾತಕೋತ್ತರ ಪ್ರಮಾಣ ಪತ್ರ ಕೊಡಿಸಿದ್ದಾರೆ. ಅವುಗಳು ನಕಲಿಯೇ, ಅಸಲಿಯೇ ತಿಳಿಯದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿರುವ ಕೋರ್ಸ್‌ಗಳು: ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಎ, ಬಿಎಸ್‌ಸಿ, ಬಿಕಾಂ, ಎಂಬಿಎ, ಬಿಎಸ್‌ಡಬ್ಲ್ಯೂ, ಬಿಸಿಎ, ಎಂಬಿಎ, ಎಂಸಿಎ, ಎಕಾಂ, ಡಿ.ಫಾರ್ಮ್, ಬಿ.ಫಾರ್ಮ್, ಎಂ.ಫಾರ್ಮ್, ಬಿಎಚ್‌ಎಂಎಸ್, ಎಂಎ, ಎಂಎಸ್‌ಡಬ್ಲ್ಯೂ, ಬಿ.ಟೆಕ್, ಎಂ.ಟೆಕ್, ಪಿಜಿ ಡಿಪ್ಲೊಮಾ ಹಾಗೂ ಪಿಎಚ್‌ಡಿ ಪದವಿಗಳಿಗೆ ದೂರ ಶಿಕ್ಷಣದ ಮೂಲಕ ಪ್ರಮಾಣ ಪತ್ರವನ್ನು ಕೋಡಿಸಲಾಗುವುದು ಎಂದು ನಾಮಫಲಕದಲ್ಲಿ ಬರೆಯಿಸಲಾಗಿದೆ.
ವಂಚಿಸಿದ ವ್ಯಕ್ತಿ: ತಾಲೂಕಿನ ಇಟಗಿ ಗ್ರಾಮದ ಪ್ರಭು ಹೊರಪೇಟಿ ಎಂಬುವರು ಕಳೆದ ಒಂದು ವರ್ಷದಿಂದ ಪಟ್ಟಣದಲ್ಲಿ ಜನನಿ ಕರಿಯರ್ ಅಕಾಡೆಮಿ ಸೆಂಟರ್ ಮೂಲಕ ವಿವಿಧ ಪದವಿ ಕೋರ್ಸ್‌ಗಳ ಪ್ರಮಾಣ ಪತ್ರವನ್ನು ರಾಜ್ಯದ ಮಾನ್ಯತೆ ಪಡೆದ ವಿವಿಯಿಂದ ಕೋಡಿಸಲಾಗುವುದು ಎಂದು ನಂಬಿಸಿ ವಂಚಿಸಿದ್ದಾನೆ. 50ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ. ಒಂದೊಂದು ಕೋರ್ಸ್‌ಗೆ ರು. 5 ರಿಂದ 15 ಸಾವಿರ ವಸೂಲಿ ಮಾಡಿದ್ದಾನೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕ್ರಮ ಕೈಗೊಂಡಿಲ್ಲ: ಈ ಕುರಿತು ಈ ಹಿಂದೆಯೇ ಈಗಾಗಲೇ ಪೊಲೀಸ್ ಠಾಣೆಗೆ ತಿಳಿಸಲಾಗಿದ್ದು, ವಂಚನೆ ಮಾಡುತ್ತಿರುವ ವ್ಯಕ್ತಿಯನ್ನು ಕರೆಯಿಸಿ ವಿಚಾರಿಸಲಾಗುವುದು. ಅಥವಾ ಲಿಖಿತ ದೂರ ನೀಡಿದಲ್ಲಿ ವಂಚನೆ ಮಾಡಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ, ಈವರೆಗೂ ವಂಚನೆ ಮಾಡಿದ ಪ್ರಭು ಹೊರಪೇಟಿ ಎಂಬುವನನ್ನು ಕರೆಯಿಸಿ ವಿಚಾರಣೆ ಮಾಡಿರುವುದಿಲ್ಲ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳ ಕ್ರಮಕ್ಕೆ ಮುಂದಾಗಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.