ವಂಚಕನಿಂದ ಹಣ ನೀಡುವ ಭರವಸೆ
ಕನ್ನಡಪ್ರಭ ವಾರ್ತೆ, ರೋಣ, ಸೆ. 25
ವಿವಿಧ ವಿಶ್ವವಿದ್ಯಾಲಯಗಳ ಮೂಲಕ ಎಂಬಿಎ, ಬಿಬಿಎ, ಎಂಎ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಪ್ರಮಾಣಪತ್ರ ನೀಡುವುದಾಗಿ ನಂಬಿಸಿ, ಲಕ್ಷಾಂತರ ಹಣ ಪಂಗನಾಮ ಹಾಕಿದ ವ್ಯಕ್ತಿ ಕುರಿತು 'ಕನ್ನಡಪ್ರಭ'ದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಬುಧವಾರ ಆರೋಪಿಯು ಕೆಲವರಿಗೆ ಚೆಕ್ ನೀಡಿದ್ದಾನೆ.
ಪಟ್ಟಣದಲ್ಲಿನ ಜನನಿ ಕರಿಯರ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥ ಪ್ರಭುರಾಜ ಹೊರಪೇಟಿಗೆ ವಂಚನೆಗೊಳಗಾದವರು ಪೋನ್ ಮೂಲಕ ಸಂಪರ್ಕಿಸಿ, ಹಣ ಹಾಗೂ ಪ್ರವೇಶಕ್ಕೆ ಸಲ್ಲಿಸಿದ್ದ ಝೆರಾಕ್ಸ್ ಪ್ರತಿಗಳನ್ನು ಮರಳಿ ಕೊಡುವಂತೆ ಒತ್ತಾಯಿಸಿದ್ದಾರೆ. ನನಗೂ ಒಬ್ಬರು ಮೋಸ ಮಾಡಿದ್ದಾರೆ. ನಿಮ್ಮ ಹಣವನ್ನು ಖಂಡಿತಾ ವಾಪಸ್ ಕೊಡುತ್ತೇನೆ ಎಂದು ಕೆಲವರಿಗೆ ಭರವಸೆ ನೀಡಿದ್ದಾನೆ. ಇನ್ನೂ ಕೆಲವರಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ರೋಣ ಶಾಖೆಯ ಚೆಕ್ ನೀಡಿದ್ದಾನೆ.
ವರದಿ ಪ್ರಕಟವಾಗುತ್ತಿದ್ದಂತೆ 'ಕನ್ನಡಪ್ರಭ' ಪ್ರತಿನಿಧಿಯನ್ನು ಸಂಪರ್ಕಿಸಿದ ಅನೇಕರು ನಮಗೂ ಮೋಸವಾಗಿದೆ. ನಾವು ಇಂತಿಷ್ಟು ಹಣವನ್ನು ಕಟ್ಟಿದ್ದೇವೆ. ನಮಗೂ ಅಧಿಕೃತ ರಶೀದಿ ನೀಡಿರುವುದಿಲ್ಲ. ಪರೀಕ್ಷೆ ದಿನಾಂಕ ಕೇಳಿದರೆ ಪೂರ್ಣ ಹಣ ಸಂದಾಯ ಮಾಡಿದರೆ ಮಾತ್ರ ಪರೀಕ್ಷೆಗೆ ಕುಳ್ಳಿರಿಸಲಾಗುವುದು ಎಂದು ಪೂರ್ಣ ಹಣವನ್ನು ತುಂಬಿಸಿಕೊಂಡಿದ್ದಾನೆ. ಕಳೆದ 6-7 ತಿಂಗಳಿನಿಂದ ಕೇಳುತ್ತಲೇ ಬಂದಿದ್ದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ನಮ್ಮದು ಬಡತನದ ಕುಟುಂಬ, ನಾನು ಕೂಲಿ ಮಾಡಿ ಹಣ ಕಟ್ಟಿದ್ದೇನೆ. ಹೊಲ ಬಡ್ಡಿಯಲ್ಲಿ ಹಾಕಿ ಹಣ ಕಟ್ಟಿದ್ದೇನೆ. ನೌಕರಿಯಲ್ಲಿನ ಸಂಬಳವನ್ನು ಕಟ್ಟಿದ್ದೇನೆ ಎಂದು ಅನೇಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬ್ಯಾಂಕ್ನಲ್ಲಿ ಹಣವಿಲ್ಲ: ವರದಿ ಪ್ರಕಟವಾಗುತ್ತಿದ್ದಂತೆ ಪ್ರಭುರಾಜ ಹೊರಪೇಟಿ ಪಟ್ಟಣದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ 64099197700 ಸಂಖ್ಯೆಯ ಎಸ್ಬಿ ಖಾತೆಯಿಂದ ಸುಮಾರು 10ಕ್ಕೂ ಹೆಚ್ಚು ಜನರಿಗೆ ಬುಧವಾರ ರು. ಎರಡು ಸಾವಿರದಿಂದ ರು. 10 ಸಾವಿರವರೆಗೆ ಚೆಕ್ ಕೊಟ್ಟಿದ್ದಾನೆ. ಜನರು ಈ ಕುರಿತು ಬ್ಯಾಂಕ್ನಲ್ಲಿ ಹೋಗಿ ವಿಚಾರಿಸಲಾಗಿ, ಹೊರಪೇಟಿ ಎಂಬುವರ ಖಾತೆಯಲ್ಲಿ ಕೇವಲ ರು. 450 ಮಾತ್ರ ಇದೆ. ಅಲ್ಲದೇ ಚೆಕ್ ಬರೆಯುವಾಗ ಚೆಕ್ನಲ್ಲಿ ನಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಬರೆದಿದ್ದಾನೆ. ಹೀಗೇಕೆ ಎಂದು ಕೇಳಿದರೆ ನಾನೇನು ಮಾಡಲಿ, ಸದ್ಯಕ್ಕೆ ನನ್ನ ಹತ್ತಿರ ಹಣವಿಲ್ಲ ಎಂದು ಸಮಜಾಯಿಷಿ ನೀಡುತ್ತಾನೆ ಎಂದು ವಂಚನೆಗೊಳಗಾದ ಸಿದ್ಧಲಿಂಗಯ್ಯ ನಂದಿಕೋಲಮಠ, ಬಸವರಾಜ ನಂದಿಕೋಲಮಠ, ಬಸವಣ್ಣೆವ್ವ ಕಾಡಗಿಮಠ ತಿಳಿಸಿದರು.
ಪರೀಕ್ಷೆ ನಡೆಸಿದ್ದಾರಂತೆ: 6 ತಿಂಗಳ ಹಿಂದೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ತಾಲೂಕಿನ ಇಟಗಿ ಗ್ರಾಮದ ಗೋಡೌನ್ (ಉಗ್ರಾಣ) ಒಂದರಲ್ಲಿ ನಡೆಸಿ ಪರೀಕ್ಷೆಯನ್ನು ಬರೆಯಿಸಿದ್ದಾರೆ. ಈವರೆಗೂ ಯಾವುದೇ ಮಾರ್ಕ್ಸ್ ಕಾರ್ಡ್ಗಳನ್ನು ವಿತರಿಸಿಲ್ಲ. ಇಂದಲ್ಲ, ನಾಳೆ ಬಂದೇ ಬರುತ್ತದೆ ಎಂದು ಹೇಳುತ್ತಲೇ ಬಂದಿದ್ದಾನೆ ಎಂದು ವಂಚನೆಗೊಳಗಾದವರು ಅಸಮಾಧಾನ ಹೊರಹಾಕಿದರು.
ವಂಚನೆಗೊಳಗಾದವರು: ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಬಸವರಾಜ ನಂದಿಕೋಲ ಎಂಬುವರು ಬಿಎ ಪ್ರವೇಶಕ್ಕಾಗಿ ರು. 2 ಸಾವಿರ ಕಟ್ಟಿದ್ದಾರೆ. ಪಟ್ಟಣದ ಸಂಗಪ್ಪ ಹುನಗುಂದ ಎಂಬುವರು ಎಂಎ ಇಂಗ್ಲಿಷ್ಗಾಗಿ ರು. 5 ಸಾವಿರ, ವಿಜಯಲಕ್ಷ್ಮೀ ಕಾಡಗಿಮಠ ಎಂಬುವರು ಎಂಎ ಇಂಗ್ಲಿಷ್ಗಾಗಿ ರು. 5500, ಸುಮಂಗಲಾ ಸಂಗನಾಳ ಎಂಬುವರು ಬಿಎ ಪದವಿಗಾಗಿ ರು. 7000, ಅರವಿಂದ ಮಡಿವಾಳರ ಎಂಬುವರು ಎಂಬಿಎಗೆ ರು. 13 ಸಾವಿರ ಹೀಗೆ ವಂಚನೆಗೊಳಗಾದವರ ದೊಡ್ಡ ಪಟ್ಟಿಯೇ ಇದೆ.
- ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

