ಮಂಗಗಳ ಚೆಲ್ಲಾಟ, ಜನತೆಗೆ ಸಂಕಟ
ಕನ್ನಡಪ್ರಭ ವಾರ್ತೆ, ಗದಗ, ಸೆ. 26
ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಕಪ್ಪುಮುಖದ ಮಂಗಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ.
ಈ ಸಮಸ್ಯೆ ಕೋಟುಮಚಗಿ ಗ್ರಾಮಕ್ಕಷ್ಟೇ ಅಲ್ಲ, ತಾಲೂಕಿನ ಹಲವು ಗ್ರಾಮಗಳಲ್ಲಿಯೂ ಈ ಮಂಗಗಳ ಹಾವಳಿ ತೀವ್ರ ಸ್ವರೂಪ ಪಡೆಯುತ್ತಿದೆ. ಅರಣ್ಯದಲ್ಲಿರಬೇಕಾದ ವಾನರ (ಮಂಗಗಳು) ಸೈನ್ಯ ಈಗ ಗ್ರಾಮಗಳ, ಜನನಿಬಿಡ ಪ್ರದೇಶಗಳತ್ತ ಮುಖಮಾಡಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ಮಂಗಗಳು ನಿತ್ಯ ಮನೆಯ ಮಾಳಿಗೆ ಮೇಲೆ ಕುಳಿತು ಚಿಕ್ಕ ಮಕ್ಕಳ ಮೇಲೆ ಎರಗುತ್ತಿವೆ. ಕೆಲವು ಮಂಗಗಳು ಮನೆಯೊಳಗೆ ನುಗ್ಗಿ ಮನೆಯ ವಸ್ತುಗಳನ್ನು ಹೊತ್ತೊಯ್ಯುತ್ತಿವೆ. ಮಂಗಗಳು ಕಾಡು ತೊರೆದು ಇಂದು ನಾಡಿಗೆ ಬರುತ್ತಿರುವುದು ನೋವಿನ ಸಂಗತಿ. ಇದಕ್ಕೆ ಪ್ರಮುಖ ಕಾರಣ ಕಾಡಿನಲ್ಲಿ ಪ್ರಾಣಿಗಳಿಗೆ ಬೇಕಾದ ಅಗತ್ಯ ಪ್ರಮಾಣದ ಆಹಾರ ದೊರಕದೇ ಇರುವುದರಿಂದ ಆಹಾರವನ್ನರಸಿ ನಾಡಿಗೆ ಬರುತ್ತಿವೆ. ಕೋತಿಗಳು ಗ್ರಾಮಗಳಲ್ಲಿ ಬಂದು ಜನರಿಗೆ ಹಲವು ರೀತಿಯ ತೊಂದರೆಯನ್ನುಂಟು ಮಾಡುತ್ತಿವೆ. ದಿನಬೆಳಗಾದರೆ ಸಾಕು ಮನೆಯ ಮಾಳಿಗೆಯ ಮೇಲಿರುವ ಮಂಗಗಳನ್ನು ಓಡಿಸುವುದೇ ಇಲ್ಲಿನ ಜನರಿಗೆ ಒಂದು ಉದ್ಯೋಗವಾಗಿಬಿಟ್ಟಿದೆ.
ಕಪ್ಪು ಮುಖದ ಮಂಗಗಳು: ಈ ಹಿಂದೆ ಹೆಚ್ಚು ಕೆಂಪು ಮೋತಿಯ ಮಂಗಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿರುವುದನ್ನು ಕೇಳಿರಬಹುದು. ಆದರೆ, ಈಗ ಕರಿ ಮೋತಿಯ ಮಂಗಗಳೂ ಜನರಿಗೆ ಹೆಚ್ಚಿನ ತೊಂದರೆ ಕೊಡುತ್ತಿವೆ. ಮನೆಯಲ್ಲಿ ಒಬ್ಬರೇ ಇರುವ ಹಾಗಿಲ್ಲ. ತಂಡೋಪ ತಂಡವಾಗಿ ಬರುವ ಮಂಗಗಳು ಮನೆಯೊಳಗೆ ನುಗ್ಗಿ ವಸ್ತುಗಳನ್ನು ಒಯ್ಯುತ್ತವೆ. ಕೆಲವು ಮಂಗಗಳು ಚಿಕ್ಕ ಮಕ್ಕಳ ಕೈಯಲ್ಲಿ ಏನಾದರೂ ವಸ್ತುಗಳು ಕಂಡಲ್ಲಿ ಅವುಗಳನ್ನು ಕಸಿದುಕೊಂಡು ಹೋಗುತ್ತಿವೆ. ಇದರಿಂದಾಗಿ ಹಲವು ಮಕ್ಕಳಿಗೆ ಗಾಯಗಳಾಗುತ್ತಿವೆ.
ಮಂಗಗಳ ತಂಡ: ಸುಮಾರು 15-20 ಮಂಗಗಳಂತೆ 5-6 ತಂಡಗಳು ಗ್ರಾಮದಲ್ಲಿಯೇ ಠಿಕಾಣಿ ಹೂಡಿವೆ.
ಮಂಗಗಳು ಮಾಳಿಗೆಯಿಂದ ಮಾಳಿಗೆಗೆ ಜಿಗಿಯುವ ಸಂದರ್ಭದಲ್ಲಿ ಹಲವು ಮನೆಗಳ ಹಂಚುಗಳು ಒಡೆದು ಹೋಗಿವೆ. ಇನ್ನು ಕೆಲವರ ಮನೆಯ ತಗಡುಗಳು ಮುರಿದುಹೋಗಿವೆ. ಈ ಕರಿ ಮೋತಿಯ ಮಂಗಗಳಿಂದಾಗಿ ಗ್ರಾಮಸ್ಥರಿಗೆ ಹಲವು ರೀತಿಯ ತೊಂದರೆಯಾಗುತ್ತಿದ್ದರೂ ಅರಣ್ಯ ಇಲಾಖೆ ಈ ಮಂಗಗಳ ಹಿಡಿಯುವ ಕಾರ್ಯಕ್ಕೆ ಮುಂದಾಗದೇ ಇರುವುದು ಅರಣ್ಯ ಇಲಾಖೆಯು ಸಾರ್ವಜನಿಕರ ಮೇಲಿಟ್ಟಿರುವ ಕಾಳಜಿ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ.
- ಅಜೀಜಅಹ್ಮದ ಬಳಗಾನೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

