ಆರೋಗ್ಯ ಇಲಾಖೆ, ಪಿಡಿಒ ಹುದ್ದೆ ನೇಮಕಾತಿಗೆ ಎರಡು ದಿನದಲ್ಲಿ ಚಾಲನೆ
ಕನ್ನಡಪ್ರಭ ವಾರ್ತೆ, ಗದಗ, ಸೆ. 27
ಹೈದ್ರಾಬಾದ್ ಕರ್ನಾಟಕ 371 (ಜೆ) ಗೆ ಸಂಬಂಧಿಸಿದಂತೆ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆ ತೆರವುಗೊಳಿಸಲಾಗಿದ್ದು, ಆರೋಗ್ಯ ಇಲಾಖೆ ಮತ್ತು ಪಿಡಿಒ ಹುದ್ದೆಗಳ ನೇಮಕಾತಿಗೆ 2 ದಿನಗಳಲ್ಲಿ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ನಗರದ ಕನಕ ಭವನದಲ್ಲಿ ಶುಕ್ರವಾರ ನಡೆದ ದಿ. ದೇವರಾಜು ಅರಸು ಅವರ 98ನೇ ಜಯಂತ್ಯುತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೈ.ಕ. 371 (ಜೆ) ಗೆ ಸಂಬಂಧಿಸಿದಂತೆ ಈ ಭಾಗದ ಜನತೆಗೆ ಮೀಸಲಾತಿ ಕಲ್ಪಿಸಬೇಕಾಗಿದ್ದರಿಂದ ರಾಜ್ಯದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಲಾಗಿತ್ತು. ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ ಕೂಡಲೇ ನೇಮಕಾತಿ ಪಕ್ರಿಯೆ ನಡೆಸುವ ಅಗತ್ಯತೆ ಇತ್ತು. ಹೀಗಾಗಿ, ಸೆ. 26ರಂದು ಬೆಂಗಳೂರಿನಲ್ಲಿ ಹೈ.ಕ. 371 (ಜೆ) ನಿರ್ಣಯಗಳ ಅನುಷ್ಠಾನದ ಸಚಿವ ಸಂಪುಟದ ಉಪಸಮಿತಿ ಸಭೆ ನಡೆಸಿ ಆರೋಗ್ಯ ಇಲಾಖೆ ಮತ್ತು ಪಿಡಿಒ ಹುದ್ದೆಗಳ ನೇಮಕಾತಿ ನಡೆಸಲು ನಿರ್ಧರಿಸಿ ತಡೆಹಿಡಿಯಲಾಗಿದ್ದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಲಾಗಿದೆ.
ಸಚಿವ ಸಂಪುಟದ ಉಪಸಮಿತಿ ನಿರ್ಣಯ ಕುರಿತು ಸಿಎಂ ಸಿದ್ದರಾಮಯ್ಯನವರ ಜತೆಗೆ ಸಹ ಚರ್ಚಿಸಲಾಗಿದೆ. ಇದಕ್ಕೆ ಸಿಎಂ ಅಸ್ತು ನೀಡಿದ್ದು, ಕೂಡಲೇ ನೇಮಕ ಪ್ರಕ್ರಿಯೆ ನಡೆಯಲಿದೆ.
3 ಕಡೆ ಪ್ರಾದೇಶಿಕ ಕಾರ್ಯಾಲಯ: ಗ್ರಾಮೀಣಾಭಿವೃದ್ಧಿ ತರಬೇತಿ ಕೇಂದ್ರದ ಪ್ರಾದೇಶಿಕ ಕಚೇರಿಗಳನ್ನು ಶೀಘ್ರದಲ್ಲಿಯೇ 3 ಕಡೆಗಳಲ್ಲಿ ಸ್ಥಾಪಿಸಲಾಗುವುದು. ರಾಜ್ಯದ ಗುಲ್ಬರ್ಗ, ಮಂಗಳೂರು ಮತ್ತು ಧಾರವಾಡದಲ್ಲಿ ಕಚೇರಿ ತೆರೆಯಲು ನಿರ್ಧರಿಲಾಗಿದ್ದು, ಪ್ರಸ್ತುತ ವರ್ಷದಿಂದಲೇ ಈ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಈಗಾಗಲೇ, ಧಾರವಾಡದಲ್ಲಿ ಕಚೇರಿ ಸ್ಥಾಪನೆಗಾಗಿ 2 ಕಡೆಗಳಲ್ಲಿ ಸ್ಥಳ ಗುರುತಿಸಲಾಗಿದೆ. ವಾರದಲ್ಲಿ ಸ್ಥಳ ಅಂತಿಮಗೊಳಿಸಲಾಗುವುದು. ಒಂದು ವೇಳೆ ಕಚೇರಿ ಕಾರ್ಯಾರಂಭಕ್ಕೆ ವಿಳಂಬವಾದರೆ, ಸೂಕ್ತವಾದ ಬಾಡಿಗೆ ಕಟ್ಟಡ ಪಡೆದು ಕಚೇರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

