ಜನಸಾಮಾನ್ಯರಿಂದ ಸಂಗೀತ ಲೋಕ ದೂರ
ಕನ್ನಡಪ್ರಭ ವಾರ್ತೆ, ಗದಗ, ಸೆ. 27
ತಂತ್ರಜ್ಞಾನದ ಅಭಿವೃದ್ಧಿಯ ಕಾಲದಲ್ಲಿ ಸಂಗೀತ ಲೋಕ ಜನಸಾಮಾನ್ಯರಿಂದ ದೂರವಾಗುತ್ತಿರುವುದು ವಿಷಾದದ ಸಂಗತಿಯಾಗಿದ್ದು, ಜನಸಾಮಾನ್ಯನಿಗೆ ಸಂಗೀತ ಸ್ವಾದ ಅನುಭವ ತಲುಪಿಸುವಲ್ಲಿ ಸಂಗೀತ ಕ್ಷೇತ್ರ ವಿಫಲವಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಕರ್ನಾಟಕ ಗಾನಕಲಾ ಪರಿಷತ್ತು, ರಾಮಕೃಷ್ಣ ವಿವೇಕಾನಂದ ಆಶ್ರಮ, ಕೆ.ಎಚ್. ಪಾಟೀಲ ಪ್ರತಿಷ್ಠಾನ ಸಂಯುಕ್ತವಾಗಿ ಶುಕ್ರವಾರ ಉಭಯ ಗಾನ ವಿಶಾರದ ಡಾ. ಪಂಡಿತ ಪುಟ್ಟರಾಜ ಗವಾಯಿ ನಾದಮಂಟಪ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ 44ನೇ ಹಿರಿಯ ಸಂಗೀತ ವಿದ್ವಾಂಸರ ಮತ್ತು 26ನೇ ಯುವ ಸಂಗೀತ ವಿದ್ವಾಂಸರ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಂಗೀತ ಇಂದು ಸಮಾಜದಲ್ಲಿ ಶೇ. 10ರಷ್ಟು ಜನರಿಗೆ ಮಾತ್ರ ತಲುಪಿದ್ದು, ಸಂಗೀತ ದಿಗ್ಗಜರಿಂದ ಸಂಗೀತದ ಭಕ್ತಿರಸ ಹರಿಸುವ ಕಾರ್ಯ ನಿರಂತರವಾಗಿ ಸಮಾಜದ ಜನರಲ್ಲಿ ತಪ, ಧ್ಯಾನದ ಮಾದರಿಯಲ್ಲಿ ಅಳವಡಿಕೆಯಾಗಿ ಜನಸಾಮಾನ್ಯರ ಬದುಕಿನಲ್ಲಿ ನೆಮ್ಮದಿ ತರುವ ಕಾರ್ಯ ಸಮ್ಮೇಳನದಲ್ಲಿ ಜರುಗಬೇಕಿದೆ. ಜಗತ್ತಿಗೆ ಶ್ರೇಷ್ಠ ಸಂಗೀತಗಾರರನ್ನು ನೀಡಿದ ಸತ್ವಯುತ ಅವಳಿ ನಗರದಲ್ಲಿ ಜರುಗುತ್ತಿರುವ ಸಮ್ಮೇಳನ ಸಂಗೀತ ಪ್ರೇಮಿಗಳಲ್ಲಿ ಹೊಸತನ ಮೂಡಿಸಲು ಆದ್ಯತೆ ನೀಡಲಿ ಎಂದರು.
44ನೇ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷೆ ಡಾ. ಎಚ್.ಎಸ್.ಅನಸೂಯಾ ಕುಲಕರ್ಣಿ ಮಾತನಾಡಿ, ಭಾರತೀಯ ಸಂಗೀತ ಒಂದು ಮಹಾಸಾಗರವಾಗಿದ್ದು, ವೇದಕಾಲದಿಂದಲೂ ಶಿಲ್ಪಕಲಾ ಶಾಸ್ತ್ರ, ಶಿಲಾ ಶಾಸನಗಳ ಮೂಲಕ ಸಂಗೀತ ಪಂಡಿತರು ಸಂಗೀತದ ದಿವ್ಯತೆಯನ್ನು ಸಾರಿ ಹೇಳಿದ್ದಾರೆ. ಸಂಗೀತದಲ್ಲಿ ಸಮೋಲ್ಲಾಸಕರ ಧಾತುಗಳು ದೈವಸಾಕ್ಷಾತ್ಕಾರದ ಮಜಲುಗಳಿವೆ. ಶಾಸ್ತ್ರೀಯತೆ ಮತ್ತು ಪಾರಂಪರಿಕ ಹಾಗೂ ಸಾಂಪ್ರದಾಯಿಕತೆಯನ್ನು ಎತ್ತಿ ಹಿಡಿಯುವ ಆಯಾಮಗಳಿವೆ ಎಂದರು.
26ನೇ ಯುವ ಸಂಗೀತ ವಿದ್ವಾಂಸರ ಸಮ್ಮೇಳನಾಧ್ಯಕ್ಷ ವಿದ್ವಾನ್ ಎಲ್.ವಿ.ಮುಕುಂದ ಮಾತನಾಡಿ, ಶಾಸ್ತ್ರೀಯ ಸಂಗೀತ ಜನಸಾಮಾನ್ಯನಿಗೆ ಮಾನಸಿಕ ಬದಲಾವಣೆ ತರಲು ಮತ್ತು ದೈಹಿಕ ಸ್ಥಿತಿ ಉತ್ತಮಗೊಳ್ಳಲು ಒಳ್ಳೆಯ ಸಾಧನವಾಗಿದೆ. ಸಂಗೀತದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಏಕಾಗ್ರತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದ್ದು, ಸಮಾಜದಲ್ಲಿ ಸಂಗೀತ ಕ್ಷೇತ್ರದ ಕುರಿತು ಒಲವು ಮೂಡುವ ಕಾರ್ಯ ನಿರಂತರವಾಗಿ ಸಾಗಬೇಕಿದೆ ಎಂದರು.
ಗುಳೇದಗುಡ್ಡದ ಮಾಜಿ ಶಾಸಕ ಎಸ್.ಜಿ. ನಂಜಯ್ಯಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನದ ನೆನಪಿನ ಸಂಚಿಕೆಯನ್ನು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶ್ವರಾನಂದ ಸರಸ್ವತಿ ಶ್ರೀಗಳು ಬಿಡುಗಡೆಗೊಳಿಸಿದರು. ಸಾನ್ನಿಧ್ಯವನ್ನು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು, ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ವಹಿಸಿದ್ದರು. ನರಗುಂದ ಶಾಸಕ ಬಿ.ಆರ್. ಯಾವಗಲ್, ಡಾ. ಬಿ.ಎಫ್. ದಂಡಿನ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಡಿ.ಆರ್.ಪಾಟೀಲ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕರ್ನಾಟಕ ಗಾನಕಲಾ ಪರಿಷತ್ನ ಅಧ್ಯಕ್ಷ ಆರ್.ಕೆ.ಪದ್ಮನಾಭ ಸ್ವಾಗತಿಸಿದರು. ಎನ್.ಎ. ಜಯರಾಮರಾವ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

