ಗದಗ

ಐತಿಹಾಸಿಕ ಕೋಟೆ ಅಕ್ರಮಗಳ ನೆಲೆ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಸೆ. 29
ಗಜೇಂದ್ರಗಡ ಭಾಗವನ್ನಾಳಿದ ಮರಾಠ ಸಾಮ್ರಾಟ ಅರಸರ ಧೈರ್ಯ, ಶೌರ್ಯ ಹಾಗೂ ಸಾಹಸಗಳ ಪ್ರತೀಕದಂತಿರುವ ಪಟ್ಟಣದ ಗುಡ್ಡದ ಮೇಲಿರುವ ಐತಿಹಾಸಿಕ ಕೋಟೆಗಳು ಸೂಕ್ತ ನಿರ್ವಹಣೆ ಇಲ್ಲದೆ ನಿಧಿಕಳ್ಳರ, ಅಕ್ರಮ ಕಲ್ಲು ಗಣಿಗಾರಿಕೆ ಜತೆ ದಿನೇ ದಿನೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮರಾಠರು ವಿಸ್ತರಿಸಿದ ಸಾಮ್ರಾಜ್ಯದ ಸಾಮಂತರಾದ ಘೋರ್ಪಡೆಯವರು ಈ ಪ್ರದೇಶವನ್ನು ಕೇಂದ್ರ ಕಾರ್ಯ ಸ್ಥಾನವನ್ನಾಗಿಸಿಕೊಂಡು 27 ಪರಗಣಿ ಜಹಾಗೀರದಾರಿಕೆ ಹೊಂದಿದ್ದರು. ಅಂದರೆ, ಗಜೇಂದ್ರಗಡದಿಂದ ರಾಯಚೂರ, ಕೊಪ್ಪಳ, ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರವರೆಗೂ ಇವರ ಆಡಳಿತ ವಿಸ್ತರಣೆಗೊಂಡಿತ್ತು.
ಆದರೆ, ಸಂಬಂಧಿಸಿದ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಕಾಲಗರ್ಭ ಸೇರುವ ಆತಂಕ ಜನರಲ್ಲಿ ಮನೆ ಮಾಡಿದೆ. ಮಹತ್ವದ ಐತಿಹಾಸಿಕ ಹಿನ್ನೆಲೆಯ ಪರಂಪರೆಯುಳ್ಳ ಬೃಹದಾಕಾರದ ಬೆಟ್ಟದ ಕೆಲ ಭಾಗಗಳು ದುಷ್ಕರ್ಮಿಗಳ ಕಿಡಿಗೇಡಿತನದಿಂದಾಗಿ ಭಗ್ನವಾಗಿರುವುದು ಖೇದಕರ. ಜತೆಗೆ ಅಕ್ರಮ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣವಾಗಿರುವುದು ಇತಿಹಾಸಕಾರರನ್ನು ಕೆರಳಿಸುವಂತೆ ಮಾಡಿದೆ.
ಹಾಳಾಗುತ್ತಿರುವ ಅದ್ಭುತ ನೈಪುಣ್ಯತೆ: ಮರಾಠ ಸಾಮಾಂತ ಅರಸರು ತಮ್ಮ ಆಡಳಿತ ವ್ಯಾಪ್ತಿಯ ನೆಲ, ಜಲ, ಜೊತೆ ವೈರಿಗಳಿಂದ ಸಂರಕ್ಷಿಸಿಕೊಳ್ಳಲು ನಿರ್ಮಿಸಿರುವ ಕೋಟೆಗಳಲ್ಲಿನ ವಾಸ್ತು ಶಿಲ್ಪದ ಕಲಾ ಕೌಶಲ್ಯತೆ ಇಂದಿನ ಆಧುನಿಕ ವಿಜ್ಞಾನ ತಂತ್ರಜ್ಞಾನದಿಂದ ನಿರ್ಮಿಸಲು ಸಾಧ್ಯವಾಗದಂತಹ ನೈಪುಣ್ಯತೆಯ ಬೃಹದಾಕಾರದ ಒರಟು ಶಿಲೆಗಳಿಂದ ನಿರ್ಮಿಸಿದ ಬೃಹತ್ ಕೋಟೆಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಆದರೆ, ದುರಾದೃಷ್ಟ ಎಂಬಂತೆ ಅಂದು ಯಾವುದೇ ಯಾಂತ್ರಿಕ ಸೌಲಭ್ಯ ಇಲ್ಲದೆ ಬೆಟ್ಟದಲ್ಲಿ ನಿರ್ಮಿಸಿರುವ ಐತಿಹಾಸಿಕ ಪರಂಪರೆಯ ಸಂಪತ್ತು ಮಾನವನ ದುರಾಸೆಗೆ ಅವಸಾನದ ಅಂಚಿನತ್ತ ಸಾಗುತ್ತಿರುವುದು ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಕೋಟೆಯೊಳಗಿನ ಭಾವೈಕ್ಯತೆ ದೇಗುಲಗಳು: ಮರಾಠ ಸಾಮಂತರ ದೊರೆಗಳಾದ ಘೋರ್ಪಡೆ ವಂಶಜರು ಬೆಟ್ಟದ ಮೇಲೆ ವಿಭಿನ್ನ ವಿನ್ಯಾಸಗಳೊಂದಿಗೆ ನಿರ್ಮಿಸಿರುವ ಕೋಟೆಯಲ್ಲಿ ವಾಸ್ತುಶಿಲ್ಪಕ್ಕೆ ನೀಡಿದಷ್ಟೆ ಮಹತ್ವವನ್ನು ಸರ್ವ ಧರ್ಮೀಯರ ಧಾರ್ಮಿಕ ಭಾವೈಕ್ಯತೆಗೆ ಆದ್ಯತೆ ನೀಡಿದ್ದಾರೆ ಎಂಬುದಕ್ಕೆ ಅಲಂಕೃತವಾದ ಕೋಟೆಯಲ್ಲಿನ ಮಹಾಲಕ್ಷ್ಮೀ ಮಂದಿರ, ಹಜರತ್ ಮೆಹಬೂಬ ಸುಬಾನಿ ದರ್ಗಾ ಜತೆ ವೀರಾಂಜನೇಯ ದೇಗುಲಗಳು ಇಂದಿಗೂ ಸರ್ವ ಧರ್ಮೀಯರನ್ನು ಬೆಸೆಯುತ್ತಿವೆ.
ನಿಧಿಗಳ್ಳರ ಕಾಟ: ಕಾಲಕ್ರಮೇಣ ನಿಧಿಗಳ್ಳರ ಹಾವಳಿಗೆ ಕೆಲ ದೇಗುಲಗಳ ಮೂರ್ತಿಗಳು ಭಗ್ನಾವೇಷಗೊಂಡಿವೆ. ನೈಸರ್ಗಿಕ ಚಿಲುಮೆಯಂತ್ತಿದ್ದ ಅಕ್ಕ ತಂಗಿಯರ ಹೊಂಡ, ಹುಲಿಯ ಹೊಂಡಗಳಿದ್ದು, ಕಳ್ಳಭಟ್ಟಿ ಸಾರಾಯಿ ದಂಧೆಕೋರರ ತಾಣವಾಗಿ ಮಾರ್ಪಟ್ಟಿವೆ. ಅಂದು ಮದ್ದು ಗುಂಡುಗಳಿಂದ ಶೇಖರಣೆಗೊಂಡಿದ್ದ ಕೋಣೆಗಳು ಇಂದು ಬಾವಲಿಗಳ ತಾಣವಾಗಿ ಮಾರ್ಪಟ್ಟಿವೆ. ಈ ಕೊಠಡಿ ಬಳಿಯ ಪ್ರಾಚೀನ ನಂದಿ ಸ್ಮಾರಕ ನೆಲಕಚ್ಚುವ ಹಂತ ತಲುಪಿದೆ. ಇದು ಸಂಬಂಧಪಟ್ಟ ಇಲಾಖೆಯ ಬೇಜವಾಬ್ದಾರಿಕೆಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಘೋರ್ಪಡೆ ವಂಶಜರ ಸುಪರ್ದಿಯಲ್ಲಿದ್ದ 27 ಪರಗಣಿ (27 ಜಿಲ್ಲೆ) ಆ ಸ್ಥಾನದ ಜಹಗೀರದಾರಿಕೆಯನ್ನು 1954ರಲ್ಲಿ ಅಂದಿನ ಬಾಂಬೆ ಸರ್ಕಾರ ಸರಂಜಾಮು ಆ್ಯಕ್ಟ್ ಪ್ರಕಾರ ಘೋರ್ಪಡೆಯವರಿಂದ ದಕ್ಷಿಣಕಾಶಿ ಕಾಲಕಾಲೇಶ್ವರ, ಸಂಡೂರಿನ ಕುಮಾರೇಶ್ವರ ಹಾಗೂ ಪಟ್ಟಣದ ಆದಿಶಕ್ತಿ ಹಿರೇ ದುರ್ಗಾದೇವಿ ದೇಗುಲಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡಿತ್ತು. ತದನಂತರದಲ್ಲಿ ಐತಿಹಾಸಿಕ ಕೋಟೆ ಸ್ಮಾರಕಗಳನ್ನು ಸಂರಕ್ಷಿಸುವ ಜತೆ ನಮ್ಮ ವಂಶಜರಿಗೆ ಸರ್ಕಾರದಿಂದ ಸೂಕ್ತ ಪರಿಹಾರ, ರಕ್ಷಣೆ ನೀಡುತ್ತೇವೆ ಎನ್ನುವ ಭರವಸೆಯ ಮಾತು ಈಡೇರದಿರುವುದು ನೋವುನ್ನುಂಟುಮಾಡಿದೆ.
ಟ ಕೀರ್ತಿ ಪ್ರತಾಪಸಿಂಹ ಘೋರ್ಪಡೆ
ಘೋರ್ಪಡೆ ವಂಶಸ್ಥರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.