ಗದಗ

ಸಂಗೀತ ಆಸ್ವಾದಿಸುವ ಗುಣ ಎಲ್ಲರೂ ಬೆಳೆಸಿಕೊಳ್ಳಬೇಕು

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 29
ಕರ್ನಾಟಕ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತ ಎಂಬುದು ಸಂಗೀತ ಕ್ಷೇತ್ರದ ಎರಡು ಕಣ್ಣುಗಳಿದ್ದಂತೆ, ಆದರೆ ಪ್ರಭೇದಗಳು ಮಾತ್ರ ಬೇರೆ-ಬೇರೆಯಾಗಿದ್ದರೂ ಸಂಗೀತದಿಂದ ದೊರೆಯುವ ಅನುಭೂತಿ ಮಾತ್ರ ಒಂದೆ ಆಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ತರ್ಲಗಟ್ಟಿ ಹೇಳಿದರು.
ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಶನಿವಾರ ಕರ್ನಾಟಕ ಗಾನಕಲಾ ಪರಿಷತ್ತು, ರಾಮಕೃಷ್ಣ ವಿವೇಕಾನಂದ ಆಶ್ರಮ, ಕೆ.ಎಚ್. ಪಾಟೀಲ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡ 44ನೇ ಹಿರಿಯ ಸಂಗೀತ ವಿದ್ವಾಂಸರ ಹಾಗೂ 26ನೇ ಯುವಸಂಗೀತ ವಿದ್ವಾಂಸರ ರಾಜ್ಯ ಮಟ್ಟದ ಸಮ್ಮೇಳನದ ವಿದ್ವತ್ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.  
ಸೃಷ್ಟಿಯ ಆಕಾರದಲ್ಲಿ ಸಂತ ತ್ಯಾಗರಾಜರ ಕಲ್ಪನೆ ಮಹತ್ವದ ಪಾತ್ರವಹಿಸುತ್ತದೆ. ಭಾರತೀಯ ಸಂಗೀತದಲ್ಲಿ ಸತ್ಯ, ದಯೆ, ಜ್ಞಾನ, ಕ್ಷಮೆ ಸೇರಿದಂತೆ 7 ಸ್ವರಗಳ ಕಲ್ಪನೆ ಬೆರೆತಾಗ ಮಾತ್ರ ಉತ್ತಮ ಸಂಗೀತಗಾರ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಸಂಗೀತ ಕೇಳುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಹಾಗಾಗಿ ಸಂಗೀತವನ್ನು ಎಲ್ಲರೂ ಆಸ್ವಾದಿಸುವ ಗುಣ ಬೆಳೆಸಿಕೊಳ್ಳಬೇಕು. ಪ್ರಸ್ತುತ ಸಂಗೀತ ಸಮ್ಮೇಳನ ಕರ್ನಾಟಕ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತ ಎಂಬ 2 ಕವಲುಗಳನ್ನು ಬೆಸೆಯುವಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ಮೂಲಕ ಸಂಗೀತದ ಎರಡು ಕವಲುಗಳು ಸಮ್ಮಿಳಿತಗೊಂಡಂತಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗದಗ ಕ್ಷೇತ್ರ ಪರಿಚಯದ ಬಗ್ಗೆ ಜಿ.ಕೆ. ಜಮಾದಾರ ಮಾತನಾಡಿ, ಭೌಗೋಳಿಕ, ಭೌತಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಗದಗ ಜಿಲ್ಲೆಯ ಉನ್ನತ ಸಾಧನೆ ಸಾಧಿಸಿದೆ. ಕನ್ನಡ ಸಾಹಿತ್ಯದ ಸಾರಸ್ವತ ಲೋಕಕ್ಕೆ ಹಾಗೂ ಸಾಹಿತ್ಯ ಶ್ರೀಮಂತಿಕೆಗೆ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ದಿನಗಳಲ್ಲಿ ಜಿಲ್ಲೆಯ ಸಾಧನೆ ಅಗ್ರಗಣ್ಯವಾಗಿದೆ. ಸ್ವಾತಂತ್ರ್ಯ ನಂತರದ ದಿನಮಾನಗಳಲ್ಲಿ ಮೈಸೂರು ಪ್ರಾಂತ್ಯಕ್ಕೆ ಸೇರ್ಪಡೆಯಾಗಿದ್ದ ಗದಗ ಜಿಲ್ಲೆ ಕರ್ನಾಟಕ ಏಕೀಕರಣಕ್ಕೆ ಅದ್ವಿತೀಯ ಕೊಡುಗೆ ನೀಡಿದೆ.
ಕುಮಾರವ್ಯಾಸ ಸಾಹಿತ್ಯ ಕೃಷಿಗೆ ಪ್ರೇರಣೆ ನೀಡಿದ ಈ ಭೂಮಿ, ಭೀಮಸೇನ ಜೋಷಿಯಂತಹ ಮಹಾನ್ ಸಾಧಕನನ್ನು ನಾಡಿಗೆ ಪರಿಚಯಿಸಿದೆ. ಪಂಪ, ರನ್ನ, ದುರ್ಗಸಿಂಹ, ಅಜಗಣ್ಣ, ನಯಸೇನ ನಂತಹ ಸಾಹಿತ್ಯ ರತ್ನಗಳಿಗೆ ವೇದಿಕೆ ಕಲ್ಪಿಸಿದ ಕೀರ್ತಿ ಈ ಮಣ್ಣಿಗಿದೆ. ಈ ನಿಟ್ಟಿನಲ್ಲಿ ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿಗಳಿಗೆ ನಾಡಿನ ಸಂಗೀತ ಕ್ಷೇತ್ರದ ಶ್ರೀಮಂತಿಕೆ ಕಾರಣವಾಗಿದೆ. ಸಹಕಾರ, ಕ್ರೀಡೆ, ಕೈಗಾರಿಕೆ ಕ್ಷೇತ್ರದಲ್ಲಿಯೂ ಜಿಲ್ಲೆ ಅಪಾರ ಸಾಧನೆ ಗೈದಿದೆ. ಇತ್ತೀಚಿನ ದಿನಗಳಲ್ಲಂತೂ ಸಂಗೀತ, ಸಾಹಿತ್ಯ, ನಾಟಕದಂತಹ ಹತ್ತು-ಹಲವಾರು ಕ್ಷೇತ್ರದಲ್ಲಿ ಲೆಕ್ಕಸಿಗದಷ್ಟು ಪ್ರತಿಭೆಗಳು ಈ ನೆಲದಲ್ಲಿ ಕ್ರಾಂತಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷೆ ಡಾ. ಎಚ್.ಎಸ್.ಅನಸೂಯ ಕುಲಕರ್ಣಿ, ಯುವ ಸಂಗೀತ ವಿದ್ವಾಂಸರ ಸಮ್ಮೇಳನ ಅಧ್ಯಕ್ಷ ಎಲ್.ವಿ. ಮುಕುಂದ, ಗಾನಕಲಾ ಪರಿಷತ್ ಅಧ್ಯಕ್ಷ ಆರ್.ಕೆ. ಪದ್ಮನಾಭ, ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀ, ವೀರೇಶಾನಂದ ಸರಸ್ವತಿ ಶ್ರೀಗಳು, ಮಾಜಿ ಶಾಸಕ ಡಿ.ಆರ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.