ಗದಗ

ಹಾವೇರಿ: 45,665 ಮತದಾರರು ಹೆಚ್ಚಳ

Published On :

ಹಾವೇರಿ: ಪ್ರಸಕ್ತ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಕೈಗೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 45,665 ಮತದಾರರ ಹೆಸರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದೆ.
ಇದರಿಂದ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 15,57,815 ಜನರು ಮತ ಚಲಾಯಿಸುವ ಹಕ್ಕು ಪಡೆದುಕೊಂಡಂತಾಗಿದೆ. 2009ರ ಚುನಾವಣೆಯಲ್ಲಿ 13,55,528 ಮತದಾರರಿದ್ದರು. ಅಂದರೆ ಕಳೆದ ಚುನಾವಣೆಗಿಂತ ಈ ಬಾರಿ ಸುಮಾರು 2 ಲಕ್ಷ ಜನರು ಮತದಾನದ ಹಕ್ಕು ಪಡೆದುಕೊಂಡಿದ್ದು, ಯುವ ಮತದಾರರ ಸಂಖ್ಯೆ ಕ್ಷೇತ್ರದಲ್ಲಿ ಹೆಚ್ಚಿದೆ. ಕ್ಷೇತ್ರ ಮರು ವಿಂಗಡಣೆಗೂ ಮುನ್ನ ಅಂದರೆ 2004ರ ಚುನಾವಣೆಯಲ್ಲಿ 12,03,671 ಮತದಾರರಿದ್ದರು. ಈ ಸಲದ ಚುನಾವಣೆಯಲ್ಲಿ 15.57 ಲಕ್ಷ ಮತದಾರರು ಹಕ್ಕು ಪಡೆದುಕೊಂಡಿದ್ದು, ಯುವ ಮತದಾರರು ಫಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ.
ಪರಿಷ್ಕರಣೆ ಪೂರ್ಣ: ಲೋಕಸಭೆ ಚುನಾವಣೆಯು ಏ. 17ರಂದು ನಡೆಯಲಿದ್ದು, ಈಗಾಗಲೇ ಜಿಲ್ಲಾಡಳಿತ ಮತದಾನ ಕಾರ್ಯಕ್ಕಾಗಿ ಸಕಲ ಸಿದ್ಧತೆ ನಡೆಸಿದೆ. ಚುನಾವಣಾ ಸಿಬ್ಬಂದಿಗೆ ಮೊದಲ ಹಂತದ ತರಬೇತಿ ಪೂರ್ಣಗೊಳಿಸಿದ್ದು, ಮತದಾರರ ಅಂತಿಮ ಪಟ್ಟಿ ಪರಿಷ್ಕರಣೆ ಪ್ರಕ್ರಿಯೂ ಮುಗಿದಿದೆ. ಕಳೆದ ಮಾರ್ಚ್‌ನಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಅಂತಿಮ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊಸದಾಗಿ 45,665 ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.
ಕ್ಷೇತ್ರದ ಒಟ್ಟು ಮತ 15.57 ಲಕ್ಷ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೂ ಮುನ್ನ 15,12,151 ಮತದಾರರಿದ್ದರು. ಈಗ ಅದು 15,57,815 ಆಗಿದೆ. ಅದೇ ರೀತಿ ಪುರುಷ ಹಾಗೂ ಮಹಿಳಾ ಮತದಾರರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಸದ್ಯ 8,06,339 ಪುರುಷ, 7,51,399 ಮಹಿಳಾ ಹಾಗೂ ಲೈಂಗಿಕ ಅಲ್ಪಸಂಖ್ಯಾತರು 77 ಇದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಮತಗಳಲ್ಲೂ ಏರಿಕೆಯಾಗಿದ್ದು, ಈ ಹಿಂದೆ 53 ಇತರೆ ಮತಗಳಿದ್ದವು. ಪರಿಷ್ಕರಣೆ ತರುವಾಯ ಇತರೆ ಮತಗಳ ಸಂಖ್ಯೆ 77ಕ್ಕೆ ಏರಿದೆ. ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ 307299 ಪುರುಷ, 2,96,944 ಮಹಿಳಾ ಹಾಗೂ 36 ಇತರೆ ಮತದಾರರು ಸೇರಿದಂತೆ ಒಟ್ಟು 6,04,279 ಮತದಾರರಿದ್ದಾರೆ. ಹಾವೇರಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ 4,99,040 ಪುರುಷ, 4,54,455 ಮಹಿಳಾ ಹಾಗೂ 41 ಇತರೆ ಸೇರಿದಂತೆ ಒಟ್ಟು 9,53,536 ಮತದಾರರಿದ್ದಾರೆ. ಒಟ್ಟು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 8,06,339 ಪುರುಷ, 7,51,399 ಮಹಿಳಾ ಹಾಗೂ 77 ಇತರೆ ಸೇರಿದಂತೆ ಒಟ್ಟು 15,57,815 ಮತದಾರರಿದ್ದಾರೆ.
ಕ್ಷೇತ್ರವಾರು ಮತದಾರರು: ಶಿರಹಟ್ಟಿ-99603 ಪುರುಷ, 94074 ಮಹಿಳೆ ಹಾಗೂ 5 ಇತರೆ ಸೇರಿದಂತೆ 1,93,682 ಮತದಾರರಿದ್ದಾರೆ. ಗದಗ-1,01,595 ಪುರುಷ ಹಾಗೂ 99,407 ಮಹಿಳಾ, ಇತರೆ 18 ಸೇರಿದಂತೆ 201020 ಮತದಾರರಿದ್ದಾರೆ. ರೋಣ-1,06,101 ಪುರುಷ, 1,03,463 ಮಹಿಳಾ ಹಾಗೂ 13 ಇತರೆ ಸೇರಿದಂತೆ 209577 ಮತದಾರರಿದ್ದಾರೆ. ಹಾನಗಲ್ಲ-96,076 ಪುರುಷ, 85,361 ಮಹಿಳಾ, ಇತರೆ 5 ಸೇರಿದಂತೆ 1,81,442 ಮತದಾರರಿದ್ದಾರೆ. ಹಾವೇರಿ-1,08,376 ಪುರುಷ, 98,534 ಮಹಿಳೆ, 10 ಇತರೆ ಸೇರಿದಂತೆ ಒಟ್ಟು 2,06,740 ಮತದಾರರಿದ್ದಾರೆ. ಬ್ಯಾಡಗಿ-98,171 ಪುರುಷ, 90,081 ಮಹಿಳಾ, 7 ಇತರೆ ಸೇರಿದಂತೆ 1,88,259 ಮತದಾರರಿದ್ದಾರೆ. ಹಿರೇಕೆರೂರ-88,137 ಪುರುಷ, 79,693 ಮಹಿಳಾ, 6 ಇತರೆ ಸೇರಿದಂತೆ 1,67,836 ಮತದಾರರಿದ್ದಾರೆ. ರಾಣಿಬೆನ್ನೂರ-1,08,280 ಪುರುಷ, 1,00,966 ಮಹಿಳಾ ಹಾಗೂ ಇತರೆ 13 ಸೇರಿದಂತೆ ಒಟ್ಟು 209259 ಮತದಾರರಿದ್ದಾರೆ.
ಸಿಬ್ಬಂದಿಗೆ ತರಬೇತಿ: ಪ್ರಸಕ್ತ ಲೋಕಸಭಾ ಚುನಾವಣೆಗೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಭಾರತ ಚುನಾವಣಾ ಆಯೋಗದದಿಂದ ಸುಧಾರಿತ ಹಾಗೂ ಹೆಚ್ಚು ಸುರಕ್ಷತಾ ವ್ಯವಸ್ಥೆ ಇರುವ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಆದ್ದರಿಂದ ಸಿಬ್ಬಂದಿಗೆ ಈ ಕುರಿತು ತರಬೇತಿ ನೀಡಲಾಗುತ್ತಿದೆ. ಈ ಮತಯಂತ್ರಗಳು ಸ್ವತ-ತಪಾಸಣೆ ಮಾಡುವ ತಂತ್ರಾಂಶ ಹೊಂದಿದೆ. ಅಗತ್ಯವಿದ್ದಲ್ಲಿ ಒಂದು ಕಂಟ್ರೋಲ್ ಯೂನಿಟ್‌ಗೆ 29 ಬ್ಯಾಲೆಟ್ ಯೂನಿಟ್ ಜೋಡಿಸುವ ವ್ಯವಸ್ಥೆಯಿದ್ದು, ಬ್ಯಾಲೆಟ್ ಯೂನಿಟ್‌ಗೆ ಬ್ಯಾಟರಿ ಅಳವಡಿಸುವ ಸೌಲಭ್ಯವಿದೆ. ಮತದಾನದ ವೇಳೆ ಸಣ್ಣ ದೋಷ ಕಂಡುಬಂದರೂ ಅದನ್ನು ಕಂಟ್ರೋಲ್ ಯೂನಿಟ್ ಮಾಹಿತಿ ನೀಡುತ್ತದೆ. ಮತಯಂತ್ರದ ಸುರಕ್ಷತೆಗಾಗಿ ಡೆಸ್ಟ್ರೋಯಬಲ್ ಕೀ ಹಾಗೂ ಬ್ಯಾಲೆಟ್ ಯೂನಿಟ್‌ಗಳಿಗೆ ಟ್ಯಾಂಪರ್ ಪ್ರೂಫ್ ಅಳವಡಿಸಲಾಗಿದೆ. ಆದ್ದರಿಂದ ಈ ಬಗ್ಗೆ ಚುನಾವಣಾ ಪ್ರಕ್ರಿಯೆಗೆ ನಿಯೋಜಿತವಾಗಿರುವ ಸಿಬ್ಬಂದಿಗೆ ತರಬೇತಿ ನೀಡುವ ಕಾರ್ಯ ನಡೆದಿದೆ. ಮತದಾರರ ಸಂಖ್ಯೆ ಹೆಚ್ಚಾದರೂ ಮತಗಟ್ಟೆ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಹಾಯಕ ಚುನಾವಣಾಧಿಕಾರಿ ಶಶಿಧರ ಕುರೇರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.