ಸುದ್ದಿ ಸಂಕ್ಷೇಪ
ಅಂಚೆ ಮತಪತ್ರ ಸೌಲಭ್ಯ
ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಚುನಾವಣಾ ಕರ್ತವ್ಯ ನಿರತ ಮತಗಟ್ಟೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಕೆಎಸ್ಆರ್ಟಿಸಿ ಚಾಲಕ, ನಿರ್ವಾಹಕರು, ಸೆಕ್ಟರ್ ಅಧಿಕಾರಿಗಳು, ಫ್ಲಾಯಿಂಗ್ ಸ್ಕ್ವಾಡ್ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮತದಾನ ದಿನದಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅಂಚೆ ಮತಪತ್ರ ಅಥವಾ ಚುನಾವಣಾ ಕರ್ತವ್ಯದ ಪ್ರಮಾಣಪತ್ರದ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ. ಮಂಜುನಾಥ ನಾಯಕ ತಿಳಿಸಿದ್ದಾರೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹೊರಗಡೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಅಂಚೆ ಮತಪತ್ರ ಪಡೆಯಲು ನಮೂನೆ-12ರಡಿ ಮತ್ತು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಳಗಡೆ ನಿಯೋಜಿತ ಚುನಾವಣಾ ಸಿಬ್ಬಂದಿ ನಮೂನೆ-12 ಎ ಭರ್ತಿ ಮಾಡಿ, ಚುನಾವಣಾ ಆದೇಶ ಮತ್ತು ಎಪಿಕ್ ಕಾರ್ಡಿನ ನಕಲು ಪ್ರತಿಗಳನ್ನು ಲಗತ್ತಿಸಿ ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಅಂಚೆ ಮತಪತ್ರ ಅಥವಾ ಚುನಾವಣಾ ಕರ್ತವ್ಯ ಪ್ರಮಾಣಪತ್ರ (ಇಡಿಸಿ) ಪಡೆದು ಮತದಾನ ಹಕ್ಕನ್ನು ಚಲಾಯಿಸಲು ಒದಗಿಸಿರುವ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುಪಿಎ ಅಧಿಕಾರಕ್ಕೆ ಬಂದರೆ ಮಹಾದಾಯಿ ಯೋಜನೆಗೆ ಒತ್ತು
ನರಗುಂದ: ಕೇಂದ್ರದಲ್ಲಿ ಯುಪಿಎ ಸರ್ಕಾರ 2 ಅವಧಿಯಲ್ಲಿ ದೇಶದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಪ್ರಸಕ್ತ ಚುನಾವಣೆಯಲ್ಲಿ ಯುಪಿಎ ಬಹುಮತದಿಂದ ಅಧಿಕಾರಕ್ಕೆ ಬಂದರೆ ಈ ಭಾಗದ ಮಹಾದಾಯಿ ಯೋಜನೆಗೆ ಒತ್ತು ನೀಡಲಾಗುವುದು ಎಂದು ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಅಜಯಕುಮಾರ ಸರನಾಯಕ ಹೇಳಿದರು. ಬುಧವಾರ ಪಟ್ಟಣದ ಸೋಮಪುರ ಮಾರುತೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದ ನಂತರ ಗಾಂಧಿ ಚೌಕ್ನಲ್ಲಿ ಜರುಗಿದ ಬಹಿರಂಗ ಸಭೆಯುದ್ದೇಶಿಸಿ ಮಾತನಾಡಿದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಬಹುಮತದಿಂದ ಅಧಿಕಾರಕ್ಕೆ ಬಂದರೆ ಈ ಭಾಗದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಮಹಾದಾಯಿ ಯೋಜನೆಗೆ ಒತ್ತು ನೀಡಿ ಈ ಭಾಗದ ರೈತರಿಗೆ ಸಮರ್ಪಕ ನೀರು ಕಲ್ಪಿಸಲು ಪ್ರಾಮಾಣಿಕನಾಗಿ ಶ್ರಮಿಸುವೆ. ಈ ಬಾರಿ ದೇಶದಲ್ಲಿ ನರೇಂದ್ರ ಮೋದಿ ಗಾಳಿ ಬೀಸುತ್ತಿದೆ ಎಂದು ಬಿಜೆಪಿಯವರು ಜನತೆಯನ್ನು ಮರಳು ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯದ ಜನತೆ ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ನೀಡಿ ಬಿಜೆಪಿ ನಾಯಕರನ್ನು ಮನೆಗೆ ಕಳಿಸಲಿದ್ದಾರೆ. ಅದೇ ರೀತಿ ಈ ಲೋಕಸಭಾ ಚುನಾವಣೆಯಲ್ಲಿಯೂ ಜನತೆ ಕಾಂಗ್ರೆಸ್ ಪರ ನಿಂತು ಏ. 17ರಂದು ಜರುಗಲಿರುವ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸುವಂತೆ ಕೋರಿದರು. ಶಾಸಕ ಬಿ.ಆರ್. ಯಾವಗಲ್, ವಿಠಲ ಶಿಂದೆ, ಎಫ್.ವೈ. ದೊಡಮನಿ, ಡಿ.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭ ರಾಜು ಕಲಾಲ, ಎಸ್.ಡಿ. ಕೊಳ್ಳಿ, ಪುರಸಭೆ ಸದಸ್ಯ ಸಿ.ಬಿ. ಪಾಟೀಲ, ನಾಗಪ್ಪ ನವಲಗುಂದ, ವೆಂಕರಡ್ಡಿ ದೇವರಡ್ಡಿಯವರ, ರಫೀಕ್ ಧಾರವಾಡ, ಶಂಕರ ಬಡಿಗೇರ, ದ್ಯಾಮಣ್ಣ ಸವದತ್ತಿ, ಎಂ.ಎಂ. ಮುಳ್ಳೂರ ಇತರರಿದ್ದರು.
ಮತದಾನ ದಿನದಂದು ಕಾರ್ಮಿಕರಿಗೆ ವೇತನ ಸಹಿತ ರಜೆ
ಹಾವೇರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನದ ದಿನವಾದ ಏ. 17ರಂದು ರಾಜ್ಯ ಸರ್ಕಾರಗಳ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆಗಳಿಗೆ, ಸರ್ಕಾರಿ ಹಾಗೂ ಖಾಸಗಿ (ಅನುದಾನಿತ ಮತ್ತು ಅನುದಾನ ರಹಿತ) ಶಿಕ್ಷಣ ಸಂಸ್ಥೆಗಳಿಗೆ, ಔಧ್ಯಮಿಕ ಸಂಸ್ಥೆಗಳ ಮತ್ತು ಇನ್ನಿತರ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇನ್ನಿತರೆಡೆ ಕಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಎಲ್ಲ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಸರ್ಕಾರದ ಅಧೀನ ಕಾರ್ಯದರ್ಶಿ ಮುನಿರಾಜು ಅವರು ಆದೇಶ ಹೊರಡಿಸಿದ್ದಾರೆ.
ಎಚ್ಡಿಕೆ ಜನಪರ ಯೋಜನೆ:ಜೆಡಿಎಸ್ಗೆ ವರದಾನ
ಹಾನಗಲ್ಲ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ 20 ತಿಂಗಳ ಅವಧಿಯ ಆಡಳಿತದ ಜನಪರ ಯೋಜನೆಗಳು ಲೋಕಸಭಾ ಚುನಾವಣೆಯ ಹಾವೇರಿ ಕ್ಷೇತ್ರದ ಅಭ್ಯರ್ಥಿ ರವಿ ಮೆಣಸಿನಕಾಯಿ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಜಾತ್ಯತೀತ ಜನತಾ ದಳದ ಯುವ ಘಟಕದ ಜಿಲ್ಲಾಧ್ಯಕ್ಷ ಉಮೇಶ ತಳವಾರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜೆಡಿಎಸ್ ಪರ ಬೆಂಬಲ ವ್ಯಕ್ತವಾಗುತ್ತಿದೆ. ಇದುವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿರುತ್ತಿದ್ದರು. ಹೀಗಾಗಿ ಮತದಾರರಿಗೆ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಅನಿವಾರ್ಯತೆ ಎದುರಾಗಿತ್ತು. ಆದರೆ, ಇದೀಗ ತೃತೀಯ ರಂಗವಾದ ಜೆಡಿಎಸ್ನ ಅಭ್ಯರ್ಥಿ ಹಾವೇರಿ ಜಿಲ್ಲೆಯಲ್ಲಿ ಕಣಕ್ಕಿಳಿದಿದ್ದು, ಮತದಾರರಿಗೆ ಮೂರನೇಯವರನ್ನು ಆಯ್ಕೆ ಮಾಡಲು ಅವಕಾಶ ದೊರೆತಂತಾಗಿದೆ. ಮಾಜಿ ಸಂಸದ ಬಿ.ಎಂ. ಮೆಣಸಿನಕಾಯಿ ಅವರ ಆಡಳಿತಾವಧಿಯಲ್ಲಿ ಮಾಡಿದ ಸಾಧನೆ ಕೂಡಾ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

