ಉ.ಕ. ಏಳು ಕ್ಷೇತ್ರಗಳಲ್ಲಿ ಗೆಲವು: ಪ್ರಭಾಕರ ಕೋರೆ
ಗದಗ: ಉತ್ತರ ಕರ್ನಾಟಕ ಭಾಗದಲ್ಲಿರುವ 7 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಗದಗ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚಿನ ಚುನಾವಣೆಗಳಲ್ಲಿ ಈ ಭಾಗದ ಜನತೆ ಬಿಜೆಪಿ ಕೈ ಬಿಟ್ಟಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಹಲವಾರು ಕ್ಷೇತ್ರಗಳಲ್ಲಿ ನಾವು ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದೇವೆ. ಅದಕ್ಕೆ ನಮ್ಮಲ್ಲಿ ಉಂಟಾಗಿದ್ದ ಗೊಂದಲವೂ ಕಾರಣವಾಗಿತ್ತು. ಈಗ ಅದೆಲ್ಲ ಮುಗಿದ ಅಧ್ಯಾಯ. ಒಗ್ಗಟ್ಟಿನಿಂದ ಎಲ್ಲರೂ ಚುನಾವಣೆ ಎದುರಿಸುತ್ತಿದ್ದೇವೆ. ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದ್ದು, ಯುವ ಸಮುದಾಯ ಮೋದಿ ಅವರ ಆಡಳಿತವನ್ನು ಮೆಚ್ಚಿದೆ. ಅದು ನಮಗೆ ವರವಾಗಲಿದೆ ಎಂದರು. ಗಡಿ, ಮಹಿಳೆ ಹಾಗೂ ಆರ್ಥಿಕ ಸುರಕ್ಷತೆ ದೇಶದಲ್ಲಿ ಮಾಯವಾಗಿದೆ. ಶೇ. 60ರಷ್ಟು ಉದ್ಯಮಗಳು ಸ್ಥಗಿತಗೊಂಡಿವೆ. ನಿರುದ್ಯೋಗ ಸಮಸ್ಯೆ ಯುವ ಪೀಳಿಗೆಯನ್ನು ವ್ಯಾಪಕವಾಗಿ ಕಾಡುತ್ತಿದೆ. ಮೋದಿ ಮಾದರಿಯ ಕುರಿತು ಮಾತನಾಡುವ ಕಾಂಗ್ರೆಸ್ ನಾಯಕರೇ ಗುಜರಾತ್ಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ದಿ ಕಾರ್ಯಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಗುಜರಾತ್ನಲ್ಲಿ ನಿರ್ಮಿಸಿದ 6 ಸರ್ವಋತು ಬಂದರುಗಳಿಂದಲೇ ದೇಶದ ಶೇ. 30ರಷ್ಟು ರಫ್ತು ಮತ್ತು ಆಮದು ನಡೆಯುತ್ತಿದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಗಮನಿಸಲಿ ಎಂದರು.
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಸಿ.ಎಸ್. ಮುತ್ತಿನ ಪೆಂಡಿಮಠ, ಮೋಹನ ಲಿಂಬಿಕಾಯಿ, ಶಂಕ್ರಣ್ಣ ಮುನವಳ್ಳಿ, ಎಸ್.ವಿ. ಸಂಕನೂರ, ಈಶಣ್ಣ ಮುನವಳ್ಳಿ, ಎಂ.ಎಂ. ಹಿರೇಮಠ ಕಾಂತಿಲಾಲ ಬನ್ಸಾಲಿ, ರಾಜು ಕುರುಡಗಿ, ಶ್ರೀಪತಿ ಉಡುಪಿ, ರಾಜು ಹೊಂಗಲ, ಶ್ರೀನಿವಾಸ ಹುಬ್ಬಳ್ಳಿ, ಬಸವರಾಜ ಶೀರಿ ಹಾಜರಿದ್ದರು.
ಸಿಎಂ ಗಮನಿಸಲಿ: ಸಿಎಂ ಸಿದ್ದರಾಮಯ್ಯ ಮೋದಿಯೂ ನನ್ನಂತೆ ಓರ್ವ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಆದರೆ, ಮೋದಿ ಬಗ್ಗೆ ದೇಶಾದ್ಯಂತ ಜನ ಏಕೆ ಮಾತನಾಡುತ್ತಾರೆ? ದೇಶದಲ್ಲಿ ಹಲವಾರು ರಾಜ್ಯಗಳಿವೆ. ಅಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖ್ಯಮಂತ್ರಿಗಳಿದ್ದಾರೆ. ಆದರೆ, ಯಾರೂ ಅವರ ಬಗ್ಗೆ ಮಾತನಾಡುತ್ತಿಲ್ಲ. ಕೇವಲ ಮೋದಿ ಬಗ್ಗೆಯೇ ಏಕೆ ಚರ್ಚೆಯಾಗುತ್ತಿದೆ? ಎನ್ನುವುದನ್ನು ಸಿದ್ದರಾಮಯ್ಯ ಗಮನಿಸಬೇಕಿದೆ. ಅವರೇಕೆ ಒಂದು ರಾಜ್ಯದ ಸಿಎಂ ಆಗಿ, ನೇರವಾಗಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಣೆಯಾದರು ಎನ್ನುವುದನ್ನು ಗಮನಿಸಿ, ಮಾತನಾಡಲಿ ಎಂದು ಕೋರೆ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

