ಗದಗ: ಸಮಸ್ಯೆಗಳ ಅನುರಣನ
ಕನ್ನಡಪ್ರಭ ವಾರ್ತೆ, ಗದಗ, ಏ. 13
ಗದಗ ಜಿಲ್ಲೆ ಎಂದರೆ ಸಮಸ್ಯೆಗಳ ಸರಮಾಲೆ. ಅವುಗಳನ್ನು ನಿವಾರಿಸುತ್ತೇವೆ, ಅಭಿವೃದ್ಧಿ ಮಾಡುತ್ತೇವೆ ಎಂಬುದು ಪ್ರತಿ ಚುನಾವಣೆಯ ಮಂತ್ರ. ಈ ಬಾರಿಯೂ ಅದೇ ಪುನರಾವರ್ತನೆ. ಚುನಾವಣೆ ಸಂದರ್ಭದಲ್ಲಿ ಹೇಳುವ ಅಭಿವೃದ್ಧಿ ಮಾತುಗಳನ್ನು ಗೆದ್ದ ಮೇಲೆ ರಾಜಕಾರಣಿಗಳು ಮರೆಯುವುದೇಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಜಿಲ್ಲಾ ಕೇಂದ್ರವಾದ ಗದಗ-ಬೆಟಗೇರಿ ನಗರದಲ್ಲಿ 2.50 ಲಕ್ಷ ಜನ ವಾಸಿಸುತ್ತಿದ್ದು, ಕುಡಿವ ನೀರಿನ ಸಮಸ್ಯೆ ಪೆಡಂಭೂತದಂತೆ ಕಾಡುತ್ತಿದೆ. ಬೇಸಿಗೆಯಲ್ಲಿ 20ರಿಂದ 30 ದಿನಗಳಿಗೊಮ್ಮೆ ನೀರು ತೊಟ್ಟಿಕ್ಕುತ್ತದೆ. ಅಧಿಕಾರಕ್ಕೆ ಬಂದರೆ, ಸಮೃದ್ಧ ನೀರು ಕೊಡುತ್ತೇವೆ ಎಂದಿದ್ದ ಪಕ್ಷಗಳೀಗ ತಾಂತ್ರಿಕ ತೊಂದರೆಯ ನೆಪ ಒಡ್ಡುತ್ತಿವೆ. ಹಿಂದೆ ಅಧಿಕಾರ ನಡೆಸಿದ ಪಕ್ಷ ರು. 98 ಕೋಟಿ ವೆಚ್ಚದಲ್ಲಿ 2ನೇ ಹಂತದ ಯೋಜನೆ ಅನುಷ್ಠಾನಗೊಳಿಸಿದ್ದು, ಅದನ್ನು ಅನುಷ್ಠಾನ ಮಾಡಲಾಗದೆ, ನೀರಿನ ಸಮಸ್ಯೆ ಶಾಶ್ವತವಾಗಿದೆ.
8 ಗ್ರಾಮಗಳಲ್ಲಿ ಬಹಿಷ್ಕಾರ ಚಿಂತನೆ: ಕುಡಿವ ನೀರಿನ ಸಮಸ್ಯೆ ಜಿಲ್ಲೆಯ ಎಲ್ಲ ಗ್ರಾಮ, ಪಟ್ಟಣಗಳನ್ನು ತೀವ್ರವಾಗಿ ಕಾಡುತ್ತಿದೆ. ಜಿಲ್ಲೆಯ 87 ಗ್ರಾಪಂ ಕುಡಿವ ನೀರಿಗೆ ಅವಲಂಬಿಸಿರುವುದು ಕೊಳವೆಬಾವಿ. ವಿದ್ಯುತ್ ಸಮಸ್ಯೆ ಬೇರೆ. ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದರೂ ಗಮನವಿಲ್ಲ. ಜಿಲ್ಲೆಯ 8 ಗ್ರಾಮಗಳ ಜನತೆ ಮೂಲ ಸೌಲಭ್ಯ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ರಾಜಕಾರಣಿಗಳು ಅಭಿವೃದ್ಧಿ ಮಾಡಿದ್ದರೆ ಸಾರ್ವಜನಿಕರೇಕೆ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದರು?
ಹೊಸ ಯೋಜನೆಗಳಿಲ್ಲ: ಗದಗ ಗರಿಷ್ಠ ಪ್ರಮಾಣದಲ್ಲಿ ಈರುಳ್ಳಿ ಬೆಳೆಯುವ ಜಿಲ್ಲೆ. ಜಿಲ್ಲಾ ಕೇಂದ್ರದಲ್ಲಿ ಮಹಾರಾಷ್ಟ್ರ ರಾಜ್ಯದ ಮಾದರಿಯಲ್ಲಿ ಬೃಹತ್ ಈರುಳ್ಳಿ ಶೈತ್ಯಾಗಾರ ನಿರ್ಮಿಸಬೇಕು ಎನ್ನುವ ರೈತರ ಬೇಡಿಕೆ ಬಾಕಿ ಉಳಿದಿದೆ. ಪುಷ್ಪೋದ್ಯಮವನ್ನೇ ನಂಬಿರುವ ಸಾವಿರಾರು ರೈತ ಕುಟುಂಬಳಿದ್ದು, ಅವರಿಗೆ ಅನುಕೂಲ ಕಲ್ಪಿಸಲೂ ಚಿಂತಿಸಿಲ್ಲ. ಎರಡು ಬದಿಗಳಲ್ಲಿ ಮಲಪ್ರಭಾ ಹಾಗೂ ತುಂಗಭದ್ರಾ ನದಿ ಹರಿಯುತ್ತಿದ್ದರೂ ಗದಗ ಶಾಶ್ವತ ಬರಪೀಡಿತ ಜಿಲ್ಲೆಯಾಗಿದೆ. ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರಗಳು ಜವಾಬ್ದಾರಿಯಿಂದ ವರ್ತಿಸಿಲ್ಲ. ಮತ್ತೆ ಮತ್ತೆ ಅದೇ ಸಮಸ್ಯೆಗಳು ಪ್ರಸ್ತಾಪ ಆಗುತ್ತಿವೆ. ಹಾಗಾದರೆ, ಈವರೆಗೆ ಜನಪ್ರತಿನಿಧಿಗಳು ಮಾಡಿದ್ದಾದರೂ ಏನು?
ಸಮಸ್ಯೆಗಳು ಹತ್ತಾರು
1. ಜಿಲ್ಲೆಯಿಂದ ಪ್ರತಿ ವರ್ಷ ಸಾವಿರಾರು ಕಾರ್ಮಿಕರು ಗುಳೆ ಹೋಗುತ್ತಾರೆ. ಅದನ್ನು ತಪ್ಪಿಸಲು ಏಕೆ ಸಾಧ್ಯವಾಗಲಿಲ್ಲ?
2. ಕುಡಿವ ನೀರಿನ ಸಮಸ್ಯೆ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆದಿಲ್ಲವೇಕೆ?
3. ಅಧಿಕಾರಕ್ಕೆ ಬಂದ ತಕ್ಷಣ ಖುದ್ದಾಗಿ ಅವಳಿ ನಗರದ ನೀರು ಪೂರೈಕೆ ವ್ಯವಸ್ಥೆಗೆ ಕಾಯಕಲ್ಪ ನೀಡಲು ಹೊರಟಿದ್ದಿರಿ. ಈಗ ಅದನ್ನು ಸ್ಥಗಿತಗೊಳಿಸಿದ್ದೇಕೆ?
4. ಜಿಲ್ಲೆಯ 3 ಗ್ರಾಮಗಳಿಗೆ ಇಂದಿಗೂ ಬಸ್ ಸೌಕರ್ಯವಿಲ್ಲ. ಎರಡು ಗ್ರಾಮಗಳಿಗೆ ಸಂಪರ್ಕ ರಸ್ತೆ ಸಮರ್ಪಕವಾಗಿಲ್ಲ.
5. ಮೂರು ತಾಲೂಕುಗಳ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಅತಿಯಾದ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಆ ಜನರ ಜೀವದ ಬಗ್ಗೆ ನಿಮಗೇಕೆ ಕಾಳಜಿ ಇಲ್ಲ?
6. ಪ್ರಮುಖ ನೀರಾವರಿ ಯೋಜನೆಗಳಾದ ಸಿಂಗಟಾಲೂರು ಹಾಗೂ ಕಳಸಾ-ಬಂಡೂರಿ ರೈತ ರ ಪಾಲಿಗೆ ಗಗನ ಕುಸುಮವಾಗಿದ್ದು ಏಕೆ?
7. ನದಿ ಪಾತ್ರದಲ್ಲಿ ವ್ಯಾಪಕವಾದ ಮರಳು ಮಾಫಿಯಾ ತಲೆ ಎತ್ತಿದ್ದು, ಇದರಲ್ಲಿ ಅಧಿಕಾರಿಗಳು, ಮುಖಂಡರು ಶಾಮೀಲಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಿಲ್ಲವೇಕೆ?
8. ಜಿಲ್ಲೆಯಲ್ಲಿ ಪದೇ ಪದೇ ಟಿಸಿಗಳು ಸುಡುತ್ತಿದ್ದು, ರೈತರ ಪಂಪ್ಸೆಟ್ಗೆ ಆಗುವ ಹಾನಿ ಕೇಳೋರ್ಯಾರು?
9. ಸರ್ಕಾರಿ ಹಾಸ್ಟೆಲ್ಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಗಮನಿಸುತ್ತಿಲ್ಲವೇಕೆ?
10. ಅವಳಿ ನಗರದಲ್ಲಿ ಸ್ವಚ್ಛತೆ, ಒಳಚರಂಡಿ ಯೋಜನೆ ಸಂಪೂರ್ಣ ನೆಲಕಚ್ಚಿದೆ.
11. ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ನಡೆದ ಭ್ರಷ್ಟಾಚಾರ ಪರಿಶೀಲಿಸುವ ಧೈರ್ಯ ಇಲ್ಲವೇ?
12. ತಾಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ಸಂಪರ್ಕ ರಸ್ತೆಗಳ ಸುಧಾರಣೆ ಯಾವಾಗ?
13. ಜಿಂಕೆ ಹಾವಳಿ ಶಾಶ್ವತ ಪರಿಹಾರ ಕಂಡು ಕೊಳ್ಳಲು ಅದೇಕೆ ಸಾಧ್ಯವಾಗಿಲ್ಲ?
14. ಕಪ್ಪತ್ತಗುಡ್ಡ ಭಾಗದಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣವೇಕಿಲ್ಲ?
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

