ಗದಗ

ನೋಟಾ ಕುತ್ತು?

Published On :

ಕನ್ನಡಪ್ರಭ ವಾರ್ತೆ, ಗದಗ. ಏ. 16
ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸಲು ನನಗೆ ಆಸಕ್ತಿ ಇಲ್ಲ. ಆದರೆ, ಮತದಾನದ ಹಕ್ಕು ಕಳೆದುಕೊಳ್ಳುವ ಮನಸ್ಸಿಲ್ಲ ಎನ್ನುವವರಿಗೆ ಚುನಾವಣಾ ಆಯೋಗ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ನೋಟಾ ಕಾಯ್ದೆ ಜಾರಿಗೆ ತಂದಿದೆ.
ಈ ಕುರಿತು ತಿಂಗಳಿಂದ ಸಾಕಷ್ಟು ಪ್ರಚಾರವನ್ನೂ ಮಾಡಿದೆ. ಆದರೆ, ನೋಟಾ ಕೂಡ ಮತ್ತೊಬ್ಬ ಅಭ್ಯರ್ಥಿ ಎಂದು ಭಾವಿಸಿ, ಬಟನ್ ಒತ್ತಿಬಿಡುವ ಸಾಧ್ಯತೆ ಇರುವುದರಿಂದ, ಹಲವು ಮತಗಳನ್ನು ಕಳೆದುಕೊಳ್ಳುವ ಭೀತಿ ಅಭ್ಯರ್ಥಿಗಳನ್ನು ಕಾಡುತ್ತಿದೆ. ಪಕ್ಷಗಳ ಮುಖಂಡರಲ್ಲಿ ಈಗ ಇದೇ ಚರ್ಚೆಯ ವಿಷಯ.
ಏನು ಚರ್ಚೆ ನಡೆಯುತ್ತಿದೆ?: ಯಾವ ಅಭ್ಯರ್ಥಿಯೂ ಅರ್ಹರಲ್ಲ ಎನ್ನುವ ವಿಚಾರ ಎಷ್ಟು ಜನರ ಮನಸ್ಸಿನಲ್ಲಿದೆ ಎಂಬುದನ್ನು ತಿಳಿಯಲು 'ನೋಟಾ' ಬಹುದೊಡ್ಡ ಸಾಧನ. ಇದೂ ಮತದಾನದಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ನಿರ್ದಿಷ್ಟ ಸಂಖ್ಯೆಯಲ್ಲಿ ನೋಟಾ ಚಲಾವಣೆಯಾದರೆ, ಆ ಕ್ಷೇತ್ರದಲ್ಲಿ ಮರು ಚುನಾವಣೆ ಘೋಷಿಸುವ ಅವಕಾಶವೂ ಇದೆ. ಈಗ ರಾಜ್ಯ ಮಟ್ಟದಿಂದ ಬೂತ್ ಮಟ್ಟದ ವರೆಗೂ ಈ ಕುರಿತೇ ಗಂಭೀರ ಚರ್ಚೆ ನಡೆಯುತ್ತಿದೆ. ನೋಟಾ ಎಲ್ಲಿ ತಮಗೆ ಬರಬೇಕಾದ ಮತಗಳಿಗೆ ಕತ್ತರಿ ಹಾಕುತ್ತದೋ ಎಂಬ ಆತಂಕವೂ ಕಾಡುತ್ತಿದೆ. ಈ ವರೆಗೆ, ಕಣದಲ್ಲಿರುವ ಯಾವ ಅಭ್ಯರ್ಥಿಯೂ ಯೋಗ್ಯರಲ್ಲ ಎಂದು ಮತದಾರನಿಗೆ ಅನ್ನಿಸಿದರೆ, ಒಂದೋ ಪರವಾಗಿಲ್ಲ ಎನಿಸಿದ ವ್ಯಕ್ತಿಗೆ ಮತ ಹಾಕುತ್ತಿದ್ದರು. ಇಲ್ಲವೇ ಮತಗಟ್ಟೆ ಅಧಿಕಾರಿಗಳಿಂದ ಮತ ನಿರಾಕರಣೆ ಪತ್ರ ಕೇಳಿ ಪಡೆದು, ಸಹಿ ಹಾಕಿ ಬರಲು ಅವಕಾಶವಿತ್ತು. ನೋಟಾ ಬಗ್ಗೆ ಮತದಾರರಿಗೆ ಸ್ಪಷ್ಟ ತಿಳಿವಳಿಕೆ ಇರಬೇಕು ಎಂದು ಆಯೋಗ ಬಯಸಿದರೆ, ಅದು ಹೆಚ್ಚು ಜನರಿಗೆ ತಿಳಿಯುವುದೇ ಬೇಡ ಎಂದು ಪಕ್ಷಗಳು ಆಶಿಸುತ್ತಿವೆ.
ಅನಕ್ಷರಸ್ಥರಿಗೆ ಸಮಸ್ಯೆಯೇ?: ಈ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಕೆಲ ಪಕ್ಷಗಳ ನಾಯಕರು ನೋಟಾ ಅನಕ್ಷರಸ್ಥರಿಗೆ ಸಮಸ್ಯೆಯಾಗಲಿದೆ. 2011ರ ಜನಗಣತಿ ಆಧಾರದಲ್ಲಿ ರಾಜ್ಯದ ಒಟ್ಟು ಮತದಾರರ ಶೇ. 23ರಷ್ಟು ಅನಕ್ಷರಸ್ಥರಿದ್ದಾರೆ. ಇವರೆಲ್ಲ ಮತದಾನದ ವೇಳೆ ಗೊಂದಲಕ್ಕೆ ಒಳಗಾಗಬಹುದು.  ಆದರೆ, ನೋಟಾ ಬಗ್ಗೆ ತಿಳಿವಳಿಕೆ ಇಲ್ಲದ ವ್ಯಕ್ತಿ, ಅದೂ ಒಬ್ಬ ಅಭ್ಯರ್ಥಿಯ ಹೆಸರೆಂದು ತಿಳಿದು ಬಟನ್ ಒತ್ತಿದರೆ ಎಂಬ ಆತಂಕ ಕಾಡುತ್ತಿದೆ. ಹೆಸರು ಓದಲಾಗದ ಅಥವಾ ಚಿಹ್ನೆ ಗುರುತಿಸಲಾಗದ ವ್ಯಕ್ತಿಗಳಿಗೆ ಮೇಲಿನಿಂದ ಅಥವಾ ಕೆಳಗಿನಿಂದ ಇಷ್ಟನೇ ಬಟನ್ ಒತ್ತಿ ಎಂದು ಮತದಾರರಿಗೆ ಕಾರ್ಯಕರ್ತರು ಹೇಳಿರುತ್ತಾರೆ. ಹೀಗಾಗಿ, 'ನೋಟಾ' ಅಭ್ಯರ್ಥಿಗಳಿಗೆ ಸಂಕಟ ತಂದಿದೆ ಎಂದಿದ್ದಾರೆ.
   ಕಾರ್ಯಕರ್ತರಿಗೆ ತಲೆನೋವು
ರಾಜ್ಯಾದ್ಯಂತ ಮತದಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸ್ವೀಪ್ ಕಮಿಟಿಗಳು ಸಾಕಷ್ಟು ಪ್ರಚಾರ ನಡೆಸಿದ್ದು, ನೋಟಾದ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದ್ದಾರೆ. ಬಹಿರಂಗ ಪ್ರಚಾರ ಕೊನೆಗೊಂಡ ಮೇಲೆ ಆಯಾ ಪಕ್ಷಗಳ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರ ಮನವೊಲಿಸಲು ಮುಂದಾದಾಗ, ಕೆಲ ಮಹಿಳೆಯರು, 'ಅದೇನೋ ನೋಟಾ ಅಂತೆ. ಮೊನ್ನೆ ಬಂದಾಗ ಹೇಳಿದ್ರು... ಅದಕ್ಕೆ ವೋಟ ಹಾಕಿದ್ರ ನಿಮ್ಗ ಬರುತ್ ಹೌದಲ್ಲ?' ಎಂದು ಪ್ರಶ್ನೆ ಮಾಡಿದ್ದಾರೆ.


- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.