ಗದಗ

ಬೇಸಿಗೆ ಮಳೆಗೆ ನಲುಗಿದ ಜೀವಕಳೆ

Published On :

ಕನ್ನಡಪ್ರಭ ವಾರ್ತೆ, ಗದಗ. ಏ. 18
ಬಿರು ಬಿಸಿಲಿನಿಂದ ತತ್ತರಿಸಿದ್ದ ಜಿಲ್ಲೆಯ ಜನತೆ ಮಳೆಯಾದಲ್ಲಿ ಸ್ವಲ್ಪ ತಂಪಾದ ವಾತಾವರಣ ನಿರ್ಮಾಣವಾದೀತು ಎನ್ನುವ ಅಭಿಪ್ರಾಯ ಹೊಂದಿದ್ದರು. ಆದರೆ, ಗುರುವಾರ ಸಂಜೆ ಮಳೆಗಿಂತ ಜೋರಾಗಿ ಬೀಸಿದ ಗಾಳಿ, ಅಬ್ಬರದ ಸಿಡಿಲು ಮಳೆ ಜಿಲ್ಲೆಯ ಜನತೆಯ ಜೀವ ಕಳೆಯನ್ನೇ ತೆಗೆದು ಹಾಕಿದ್ದು, ಗುರುವಾರ ಸಂಜೆ ಹಾಗೂ ರಾತ್ರಿ ಸುರಿದ ಮಳೆ 5 ಜನ, 17 ಕುರಿ ಹಾಗೂ 2 ಎತ್ತುಗಳ ಪ್ರಾಣ ತೆಗೆದಿದ್ದು, ಒಟ್ಟು 41 ಹೆಕ್ಟೇರ್‌ನಷ್ಟು ತೋಟಗಾರಿಕಾ ಬೆಳೆ ಸಂಪೂರ್ಣ ನಾಶವಾಗಿವೆ.
ಮಳೆಯೊಂದಿಗೆ ಜೋರಾಗಿ ಬೀಸಿದ ಗಾಳಿ ತಾಲೂಕಿನ ಸಂಭಾಪೂರ, ಬೆಟಗೇರಿ ಭಾಗದಲ್ಲಿರುವ ಆಶ್ರಯ ಕಾಲೋನಿ ಹಾಗೂ ಹಮಾಲರ ಕಾಲೋನಿಯ ತಗಡಿನ 12ಕ್ಕೂ ಮನೆಗಳ ಮೇಲ್ಘಾವಣಿ ಹಾರಿ ಹೋಗಿವೆ. ಜಾನುವಾರುಗಳನ್ನು ಕಟ್ಟಲು ಇತ್ತೀಚೆಗಷ್ಟೇ ಸರ್ಕಾರ ಎನ್.ಆರ್.ಜಿ.ಎ ಯೋಜನೆಯಲ್ಲಿ ಅನುಷ್ಠಾನಗೊಳಿಸಿದ ದನದ ಕೊಟ್ಟಿಗೆಗಳು ಸಂಪೂರ್ಣ ಕಿತ್ತುಹೋಗಿವೆ. ಇನ್ನು ಗದಗ, ಬೆಟಗೇರಿ ಅವಳಿ ನಗರದಲ್ಲಿನ 11 ವ್ಯಾಪಾರಿ ಮಳಿಗೆಗಳಲ್ಲಿ ಸಿಡಿಲಿನ ಆರ್ಭಟಕ್ಕೆ ಟಿವಿ,ಫ್ಯಾನ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ವೈಯರಿಂಗ್ ಪೂರ್ಣ ಸುಟ್ಟಿವೆ. ಕೆ.ಸಿ. ರಾಣಿ ರಸ್ತೆಯಲ್ಲಿರುವ ಎಸ್.ಬಿ.ಐ ಎ.ಟಿ.ಎಂ ಮಶೀನ್‌ನ ಕೆಲ ಭಾಗಗಳು ಸುಟ್ಟಿವೆ.
ರೈತರಿಗೂ ತೊಂದರೆ: ಜಿಲ್ಲೆಯ ಗಜೇಂದ್ರಗಡ ಮತ್ತು ರೋಣ ತಾಲೂಕಿನಲ್ಲಿ ಕೊಳವೆ ಬಾವಿ ಆಧರಿಸಿದ ನೀರಾವರಿ ಹಾಗೂ ಲಕ್ಷ್ಮೇಶ್ವರ, ಮುಂಡರಗಿ ಹಾಗೂ ನರಗುಂದ ತಾಲೂಕಿನ ರೈತರು ತುಂಗಭದ್ರಾ ನದಿ ದಡದಲ್ಲಿನ ಹೊಲಗಳಲ್ಲಿ ಬೇಸಿಗೆಯಲ್ಲಿಯೂ ತೋಟಗಾರಿಕಾ ಬೆಳೆಯನ್ನೇ ನಂಬಿ ಬದುಕುತ್ತಾರೆ. ಆದರೆ, ಸದ್ಯ ಕಟಾವಿನ ಹಂತಕ್ಕೆ ಬಂದಿದ್ದ ದ್ರಾಕ್ಷಿ, ದಾಳಿಂಬೆ ಹಾಗೂ ಮೋಸಂಬಿ ಬೆಳೆಗೆ ತೀವ್ರ ಹಾನಿಯಾಗಿದೆ. ಕೊಳವೆ ಬಾವಿ ಆಶ್ರಯಿಸಿ ಸೂರ್ಯಕಾಂತಿ ಬಿತ್ತನೆ ಮಾಡಿದ ರೈತರ ಬೆಳೆಯಂತೂ ಸಂಪೂರ್ಣ ನೆಲಕಚ್ಚಿದೆ. ಇನ್ನು ಬಾಳೆ ಹಾಗೂ ಎಲೆ ಬಳ್ಳಿಯ ತೋಟಗಳಂತೂ ಗಾಳಿ ರಭಸಕ್ಕೆ ಸುರುಳಿ ಸುತ್ತಿದ ಹಾಸಿಗೆಗಳಂತಾಗಿದ್ದು ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ನುಂಗಲಾರದ ತುತ್ತು: ಗುರುವಾರ ರಾಜ್ಯದ ರಾಜಕೀಯ ನಾಯಕರ ಪಾಲಿಗೆ ಮದುವೆ ದಿನ. ಇನ್ನೇನು ಸಂಜೆ ವೇಳೆಗೆ ಮತದಾನ ತೀವ್ರವಾಗಬೇಕು ಎನ್ನುವ ವೇಳೆಗೆ ಪ್ರಾರಂಭವಾದ ಮಳೆ ಹಾಗೂ ಗಾಳಿ ಮನೆಯಿಂದ ಹೊರಗಿದ್ದವರು ಮನೆಗೆ ಹೋಗದಂತೆ, ಮನೆಯಲ್ಲಿದ್ದವರು ಆಚೆ ಬರದಂತಹ ಭಯದ ವಾತಾವರಣ ನಿರ್ಮಿಸಿದ್ದರಿಂದ, ಬಿಸಿಲಿನ ಪ್ರಖರತೆ ಕಡಿಮೆಯಾದ ನಂತರ ಮತದಾನಕ್ಕೆ ಜನ ಬರುತ್ತಾರೆ ಎನ್ನುವ ನಿರೀಕ್ಷೆ ಎಲ್ಲಾ ರಾಜಕೀಯ ಪಕ್ಷಗಳದ್ದಾಗಿತ್ತು. ಮಳೆ ಗಾಳಿ ಪ್ರಾರಂಭವಾಗಿದ್ದು ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅದರಲ್ಲಿಯೇ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಮಳೆಯಿಂದ ಮತದಾನ ವಿಳಂಬವಾಗಿದೆ ಹಾಗಾಗಿ ವಿಸ್ತರಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ ಘಟನೆಗೂ ಮಳೆ ಕಾರಣವಾಯಿತು.
ಒಟ್ಟು 41 ಹೆಕ್ಟೇರ್‌ನಲ್ಲಿ ಹಾನಿ: ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 41 ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆ ಹಾನಿಯಾಗಿವೆ ಎಂದು ಜಿಲ್ಲಾ ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಳೆ ಹಾಗೂ ರೈತರು ನೀಡಿದ ಮಾಹಿತಿ ಆಧಾರದಲ್ಲಿ ಅಂದಾಜಿಸಿದ್ದಾರೆ. ಗಾಳಿಯ ರಭಸ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಇನ್ನು ಹೆಚ್ಚಿನ ಹಾನಿಯಾಗಿದೆ ಎನ್ನುವುದು ಇಲಾಖೆಯ ಅಧಿಕಾರಿಗಳ ಅಭಿಪ್ರಾಯ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.