ಗದಗ

ಮಳೆ ಹೊಡೆತಕ್ಕೆ ಮಲಗಿದ ಬೆಳೆ

Published On :

-ಡಿ.ಜಿ. ಮೋಮಿನ್
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಗುರುವಾರ ಸುರಿದ ಭಾರಿ ಬಿರುಗಾಳಿ ಸಹಿತ ಸುರಿದ ಮಳೆಗೆ ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ಮಾವು, ವೀಳ್ಯದೆಲೆ ಬೆಳೆ ನೆಲಕಚ್ಚಿದ್ದು, ಇದರಿಂದ ರೈತರು ಅಪಾರ ಹಾನಿ ಅನುಭವಿಸುವಂತಾಗಿದೆ.
ಸದಾ ಒಂದಿಲ್ಲೊಂದು ಸಂಕಷ್ಟ ಎದುರಿಸುವ ಅನ್ನದಾತರಿಗೆ ಮೇಲಿಂದ ಮೇಲೆ ಸುರಿಯುತ್ತಿರುವ ಅಕಾಲಿಕ ಮಳೆಯ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮಳೆಯ ಪರಿಣಾಮ ಸೂರ್ಯಕಾಂತಿ, ಶೇಂಗಾ, ಹಿಂಗಾರು ಬೆಳೆ ನಷ್ಟವಾಗಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಕೆಂಪು ಮಿಶ್ರಿತ ಜವಗು (ಮಸಾರಿ) ಪ್ರದೇಶ ಹೆಚ್ಚಿರುವುದರಿಂದ ಈ ಭಾಗದಲ್ಲಿ ಅಂತರ್‌ಜಲಮಟ್ಟವೂ ಅಷ್ಟಕ್ಕಷ್ಟೇ. ಹೀಗಾಗಿ ಈ ಭಾಗದ ರೈತರೆಲ್ಲರೂ ತಮ್ಮ ಜಮೀನುಗಳಿಗೆ ಕೊಳವೆ ಬಾವಿ ಕೊರೆಯಿಸಿ ಆರ್ಥಿಕವಾಗಿ ಲಾಭದಾಯಕ ಬೆಳೆಗಳಾದ ಬಾಳೆ, ದ್ರಾಕ್ಷಿ, ಮಾವು, ವೀಳ್ಯೆದೆಲೆ, ತರಕಾರಿ ಇನ್ನಿತರ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಬೆಳೆಗೆ ಅಪಾರ ಖರ್ಚು: ಪಟ್ಟಣ ಸೇರಿದಂತೆ ಸಮೀಪದ ಗೋಗೇರಿ, ಜೀಗೇರಿ, ಮ್ಯಾಕಲಝರಿ, ಕುಂಟೋಜಿ, ರಾಮಾಪುರ, ಕಾಲಕಾಲೇಶ್ವರ, ಲಕ್ಕಲಕಟ್ಟಿ, ನಾಗೇಂದ್ರಗಡ, ನೆಲ್ಲೂರ, ಮುಶಿಗೇರಿ, ಸಾವಯುವ ಗ್ರಾಮ ಮ್ಯಾಕಲ್‌ಝರಿ, ರಾಜೂರ ಸೇರಿದಂತೆ 97 ಗ್ರಾಮಗಳಲ್ಲಿ 62 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ, 58 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ, 300 ಹೆಕ್ಟೇರ್ ಪ್ರದೇಶದಲ್ಲಿ ಮಾವು, 15 ಹೆಕ್ಟೇರ್ ಪ್ರದೇಶದಲ್ಲಿ ಚಿಕ್ಕು, 10 ಎಕರೆ ಪೇರಲ ಹಾಗೂ ಮೊಸಂಬಿ ಬೆಳೆಯಲಾಗಿದೆ.
ಸಸಿ ನೆಡುವ ಕಾರ್ಯದಿಂದ ಹಿಡಿದು, ಮಡಿ ಹಾಕುವುದು, ಗೊಬ್ಬರ ಕಟ್ಟುವುದು ಸೇರಿದಂತೆ ಫಸಲು ನೀಡುವವರೆಗೂ 1 ಎಕರೆ ಬಾಳೆಗೆ ಕನಿಷ್ಠ ರು. 50-60 ಸಾವಿರ ಖರ್ಚಾಗುತ್ತದೆ. ದ್ರಾಕ್ಷಿ ಹಾಗೂ ವೀಳ್ಯದೆಲೆ ಎಕರೆಗೆ ರು. 50-1 ಲಕ್ಷ, ಮಾವು, ಚಿಕ್ಕು, ಪೇರಲ್ ರು. 10-30 ಸಾವಿರ ಬರುತ್ತದೆ. ಬಾಳೆ ಎಕರೆಗೆ 15 ಟನ್ ಬರುತ್ತದೆ. ಅಲ್ಲದೇ ಬಾಳೆಗೆ ಕ್ವಿಂಟಲ್‌ಗೆ ರು. 900 ಇದೆ. ದ್ರಾಕ್ಷಿ, ವೀಳ್ಯದೆಲೆ, ಚಿಕ್ಕು, ಮಾವು ಬೆಳೆ ಎಕರೆಗೆ ವಾರ್ಷಿಕ ರು. 1.5 ಲಕ್ಷಕ್ಕೂ ಅಧಿಕ ಆದಾಯ ಬರುತ್ತದೆ. ಆದರೆ, ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದ್ದು, ರೈತರಿಗೆ ದಿಕ್ಕೇ ತೋಚದಂತಾಗಿದೆ.
ಬರದ ನಾಡು: ಸತತ ಬರಗಾಲದ ಬವಣೆಗೆ ತುತ್ತಾಗಿ ಬರದ ನಾಡೆಂದೇ ಹೆಸರಾದ ರೋಣ ತಾಲೂಕಿನಲ್ಲಿ ಈ ಬಾರಿ ಅಲ್ಲಲ್ಲಿ ಬೆಳೆದಿರುವ ಋತುಮಾನದ ರಾಜನೆಂದು ಕರೆಯಿಸಿಕೊಳ್ಳುವ ಮಾವಿನ ಫಸಲು ನಿರೀಕ್ಷೆಗೂ ಮೀರಿ ಬೆಳೆದಿದೆ. ಮಾಮರಗಳ ಟೊಂಗೆಗಳಲ್ಲಿ ಮೈದುಂಬಿಕೊಂಡು ಗೊಂಚಲುಗಳು ಹಣ್ಣು ಬಂದಿತ್ತು. ಈ ಸಲ ಬಂಪರ್ ಫಸಲು ನೀಡಬಹುದೆಂಬ ಆಶಾಭಾವನೆ ರೈತ ಸಮುದಾಯದಲ್ಲಿ ಮೂಡಿಸಿತ್ತು. ಆದರೆ, ಅಕಾಲಿಕ ಮಳೆ ಅದನ್ನು ಹುಸಿಯಾಗಿಸಿದೆ.
ಈ ಭಾಗದ ತೋಟಗಾರಿಕೆ ಬೆಳೆ ಬೆಳೆದ ರೈತರು ಮಾಡಿದ ಸಾಲವನ್ನು ತೀರಿಸುವುದಾದರೂ ಹೇಗೆ? ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆ? ಎಂಬಿತ್ಯಾದಿ ಸಮಸ್ಯೆಗಳ ಸರಮಾಲೆ ಎದುರಿಸಲಾಗದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ದುಸ್ಥಿತಿ ಎದುರಾಗಿದೆ.
ಹಾಳಾದ ಎಲೆಬಳ್ಳಿ: 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಎಲೆಬಳ್ಳಿ ತೋಟದಲ್ಲಿ 2500 ಎಲೆಬಳ್ಳಿ ಮಗುವಿನಂತೆ ಬೆಳೆಸಲಾಗಿತ್ತು. ಆದರೆ ಮಳೆಯಿಂದ ಅದರಲ್ಲಿ ಬಹುತೇಕ ನೆಲಕಚ್ಚಿದೆ. ಲಕ್ಷಾಂತ ಹಣ ವೆಚ್ಚ ಮಾಡಿ ಬೆಳೆದಿದ್ದ ಎಲೆಯನ್ನು ಮಳೆ  ಬಂದು ನಮ್ಮ ಹೊಟ್ಟೆಗೆ ತಣ್ಣಿರು ಎರಚಿದೆ ಎಂದು ವೀಳ್ಯದೆಳೆ ಬೆಳೆದ ರೈತ ಹೊನ್ನುಸಾದಾನಿ ಅವರ ನೋವಿನ ಮಾತಿದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.