ಗದಗ

ಧರ್ಮದ ತಳಹದಿ ಮೇಲೆ ಕಾನೂನು ರಚನೆ

Published On :

ರೋಣ: ಧರ್ಮದ ತಳಹದಿ ಮೇಲೆ ಕಾನೂನು ನಿರ್ಮಾಣವಾಗಿದ್ದು, ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡುವುದು ಅತ್ಯಗತ್ಯ ಎಂದು ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ. ನಂಜೇಗೌಡ ಹೇಳಿದರು.
ಪಟ್ಟಣದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಈಚೆಗೆ ನಡೆದ ಸಾರ್ವಜನಿಕರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವ್ಯಕ್ತಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕಾದಲ್ಲಿ ಆತ ಧರ್ಮ ಮತ್ತು ಕಾನೂನುಪಾಲನೆ ಮಾಡಬೇಕು ಎಂದರು.
ನಿತ್ಯ ಬದುಕಿನಲ್ಲಿ ಒಳ್ಳೆಯ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯ ಪಾಲನೆ, ನಡೆ-ನುಡಿಯಲ್ಲಿ ಪರಿಶುದ್ಧತೆ, ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡಲ್ಲಿ ಯಾವುದೇ ಅಪರಾಧ ಕೃತ್ಯಗಳು ಜರುಗಲು ಆಸ್ಪದ ಸಿಗಲಾರದು. ಆದ್ದರಿಂದ ನಾವು ಮಾಡುವ ಕಾಯಕವನ್ನು ಧರ್ಮದಿಂದ ಮಾಡಿದಲ್ಲಿ ಮನಸ್ಸು ಪ್ರಫುಲ್ಲಗೊಳ್ಳುವುದರ ಜತೆಗೆ ಮನೋ ವಿಕಸನವಾಗುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾನೂನು ತಿಳಿವಳಿಕೆ ಕೊರತೆಯಿಂದ ಅಪರಾಧ ಮನೋಭಾವ ವೃದ್ಧಿಸುತ್ತಿದೆ. ಆದ್ದರಿಂದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಿ, ಪಾಲನೆ ಮಾಡಬೇಕು. ವ್ಯಕ್ತಿ ಸನ್ಮಾರ್ಗದತ್ತ ನಡೆದಾಗ ಸಮಾಜ ಉಜ್ವಲಗೊಳ್ಳುತ್ತದೆ ಎಂದರು. ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ. ಶ್ರೀದೇವಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಸಂವಿಧಾನದಲ್ಲಿ ಅನೇಕ ಪ್ರತ್ಯೇಕ ಕಾನೂನುಗಳನ್ನು ರಚಿಸಲಾಗಿದೆ. ಅವುಗಳ ಕುರಿತು ಮಹಿಳೆಯರು ತಿಳಿವಳಿಕೆ ಹೊಂದಬೇಕು. ಸಮಾಜದಲ್ಲಿ ಮಹಿಳೆಯನ್ನು ಗೌರವದಿಂದ ಕಾಣುವ ಜತೆಗೆ ಸ್ವತಂತ್ರವಾಗಿ ಬದುಕಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮಹಿಳೆ ಎಲ್ಲ ರೀತಿಯ ಶೋಷಣೆ, ದೌರ್ಜನ್ಯ ಮತ್ತು ಅಪಚಾರಗಳಿಗೆ ಒಳಗಾಗಿದ್ದಲ್ಲಿ ಅವುಗಳನ್ನು ಕಾನೂನಾತ್ಮಕವಾಗಿ ಎದುರಿಸಿ, ನ್ಯಾಯ ಪಡೆದುಕೊಳ್ಳುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂದರು. ನ್ಯಾಯವಾದಿ ಎಲ್.ಎನ್. ಬಾಣದ ಮಾತನಾಡಿ, ಪ್ರತಿಯೊಂದು ರಂಗದಲ್ಲಿ ಮಹಿಳೆಗೆ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. ಆದರೆ ಅವುಗಳಲ್ಲಿ ಮುಕ್ತವಾಗಿ ಭಾಗಿಯಾಗಲು ಸೂಕ್ತ ರಕ್ಷಣೆಯ ಅಗತ್ಯವಿದೆ. ಸರಿಯಾದ ಕಾನೂನಿನ ಜ್ಞಾನ ಹೊಂದಿ ಶೋಷಣೆ ಎದುರಿಸಿ ನಿಲ್ಲಬಲ್ಲ ಶಕ್ತಿ ಹೊಂದಬೇಕು ಎಂದರು. ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಜಿ.ಡಿ. ಮಹಾವರಕರ ಕಾರ್ಯಕ್ರಮ ಉದ್ಘಾಟಿಸಿದರು.
ಸರ್ಕಾರಿ ಸಹಾಯಕ ಅಭಿಯೋಜಕ ನಾರಾಯಣ ಆರಿ, ನ್ಯಾ. ಆರ್.ಎಸ್. ಮುಗಳಿ, ರಾಜೇಂದ್ರ ಉದ್ದಾರ, ಜಿ.ಆರ್. ಯಳವತ್ತಿ, ಎಫ್.ಎನ್. ನದಾಫ, ಎಚ್.ಎಫ್. ಕಾಡದೇವರಮಠ, ಎಸ್.ವಿ. ಬಂಗಾರಿ ಉಪಸ್ಥಿತರಿದ್ದರು. ವಿ.ಡಿ. ಪವಾಸ್ಕರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.