ಗದಗ

ಸೂರಣಗಿ ವಸತಿ ನಿಲಯ ಅವ್ಯವಸ್ಥೆ ಆಗರ

Published On :

- ಅಶೋಕ ಸೊರಟೂರ
ಲಕ್ಷ್ಮೇಶ್ವರ: ಪರಿಶಿಷ್ಟ ಜಾತಿ ಮತ್ತು ಜನಾಂಗದ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮುಖಾಂತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್‌ಗಳನ್ನು ನಿರ್ಮಿಸಿದೆ. ಆದರೆ, ನಿಲಯದ ಮೇಲ್ವಿಚಾರಕನ ಬೇಜಾವಾಬ್ದಾರಿ, ಅಡುಗೆಯವರ ನಿರ್ಲಕ್ಷ್ಯದಿಂದಾಗಿ ಹಾಸ್ಟೆಲ್‌ಗಳು ಅವ್ಯವಸ್ಥೆ ಆಗರಗಳಾಗಿವೆ.
ಇದಕ್ಕೆ ತಾಜಾ ಉದಾಹರಣೆ ಸಮೀಪದ ಸೂರಣಗಿ ಗ್ರಾಮದಲ್ಲಿ 1993-94ರಲ್ಲಿ ಆರಂಭವಾದ ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ನ ಸ್ಥಿತಿಗತಿ ನೋಡಿದರೆ ಅಲ್ಲಿಯ ವಿದ್ಯಾರ್ಥಿಗಳು ಪಡುತ್ತಿರುವ ಮೂಕವೇದನೆ ಎಂತಹವರ ಕರಳು ಚುರುಕ್ ಎನ್ನುವಂತೆ ಮಾಡುತ್ತೇವೆ.
ವಿದ್ಯಾರ್ಥಿಗಳಿಗೆ ನೀಡಲಾಗುವ ಊಟ, ಉಪಾಹಾರ ಸೌಲಭ್ಯ ಎಲ್ಲವೂ ಕಳಪೆ ಗುಣಮಟ್ಟದ್ದಾಗಿದೆ. ಇಲ್ಲಿನ ಎಂ.ಬಿ. ಹೆಬ್ಬಾಳ ಎನ್ನುವ ಮಹಿಳಾ ವಾರ್ಡನ್ ವಾರಕ್ಕೆ 2 ಅಥವಾ 3 ಬಾರಿ ಬರುತ್ತಿದ್ದು, ಬಂದ ತಕ್ಷಣ 4-5 ದಿನಗಳಿಗೆ ಬೇಕಾಗುವ ಬೆಳೆ, ಅಕ್ಕಿ ಹಾಗೂ ಇತರೆ ಅಡುಗೆ ಪದಾರ್ಥಗಳನ್ನು ನೀಡಿ ಮತ್ತೆ ಅಲ್ಲಿಂದ ಹೊರಟು ಹೋಗುತ್ತಾರೆ. ಅಷ್ಟು ದಿನಗಳಿಗೆ ಬೇಕಾಗುವ ಆಹಾರ ಪದಾರ್ಥ, ಅಡುಗೆ ಸಾಮಗ್ರಿ, ವಿದ್ಯಾರ್ಥಿಗಳಿಗೆ ನೀಡುವ ಮೊಟ್ಟೆ, ಹಣ್ಣುಗಳನ್ನು 4-5 ದಿನಗಳಿಗಾಗುವಷ್ಟು ಪದಾರ್ಥಗಳನ್ನು ಅಡುಗೆ ಸಿಬ್ಬಂದಿಯವರ ಸುಪರ್ದಿಗೆ ಕೊಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಿದ್ಯಾರ್ಥಿಗಳನ್ನು ದಬಾಯಿಸುತ್ತಿರುವ ಅಡುಗೆ ಸಿಬ್ಬಂದಿ: ಹಾಸ್ಟೆಲ್‌ನಲ್ಲಿ ರಜಿಸ್ಟರ್‌ನಲ್ಲಿ ಒಟ್ಟು 46 ವಿದ್ಯಾರ್ಥಿಗಳಿದ್ದರೂ 35 ರಿಂದ 36 ವಿದ್ಯಾರ್ಥಿಗಳು ಮಾತ್ರ ಹಾಸ್ಟೆಲ್‌ನಲ್ಲಿ ವಸತಿ ಮಾಡಿದ್ದಾರೆ. ಇವರಿಗೆ ಬೇಕಾಗುವ ಅಡುಗೆ ಮಾಡಲು 5 ಸಿಬ್ಬಂದಿ ಇರುತ್ತಾರೆ. ಇಷ್ಟು ಜನ ಅಡುಗೆ ಸಿಬ್ಬಂದಿಯವರಿದ್ದರೂ ಅಡುಗೆ ಮಾತ್ರ ರುಚಿಕಟ್ಟಾಗಿ ಮಾಡಲ್ಲ. ವಿದ್ಯಾರ್ಥಿಗಳು ಅಡುಗೆ ಸರಿಯಾಗಿಲ್ಲವೆಂದು ತಗಾದೆ ತೆಗೆದರೆ, ಬೇಕಾದರೆ ತಿನ್ನಿರಿ ಇಲ್ಲವಾದಲ್ಲಿ ಉಪವಾಸ ಮಾಡಿರಿ ಎಂದು ಮಾಡಿದ ಊಟ ಹಾಗೂ ಉಪಾಹಾರವನ್ನು ಸುಮ್ಮನೆ ತಿನ್ನುವಂತೆ ದಬಾಯಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಹಾಸ್ಟೆಲ್‌ನ ಊಟ, ಉಪಾಹಾರಗಳ ಬಗ್ಗೆ ಪ್ರಶ್ನಿಸಿದರೆ ವಿದ್ಯಾರ್ಥಿಗಳಿಗೆ ಅಡುಗೆಯವರು ಉಡಾಫೆ ಉತ್ತರ ನೀಡುತ್ತಾರೆ. ಕೆಲವು ಬಾರಿ ಮಕ್ಕಳೇ ಅಡುಗೆ ಮಾಡಿಕೊಂಡು ಊಟ ಮಾಡಿದ್ದಾರೆ.
ಕೋಣೆಗಳಿಗೆ ಚಿಲಕ ಇಲ್ಲ: ಅಡುಗೆಯಲ್ಲಿ ಹುಳು, ನುಶಿ ಬಿದ್ದ ಅನ್ನ, ಉಪ್ಪು ಖಾರವಿಲ್ಲದ ಸಪ್ಪನೆಯ ಉಪ್ಪಿಟ್ಟು, ತೂತುಬಿದ್ದ ತೊಗರೆ ಬೇಳೆ ಹೀಗೆ ಪೌಷ್ಟಿಕಾಂಶಗಳು ಇರದೆ ಇರುವ ಊಟವನ್ನು ಉಂಡ ವಿದ್ಯಾರ್ಥಿಗಳು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇನ್ನು ಹಾಸ್ಟೆಲ್‌ನ ಯಾವ ಕೋಣೆಗಳಿಗೂ ಚಿಲಕಗಳು ಇಲ್ಲ. ವಸ್ತುಗಳು ಕಳವಿನ ಭಯದಲ್ಲಿ ವಿದ್ಯಾರ್ಥಿಗಳು. ಗ್ರಾಮಾಂತರ ಪ್ರದೇಶದ ಈ ವಸತಿ ನಿಲಯದಲ್ಲಿ ರಾತ್ರಿಯಾದರೆ ವಿದ್ಯುತ್ ಸಂಪರ್ಕ ಕಟ್ ಆಗುವುದರಿಂದ ವಿದ್ಯಾರ್ಥಿಗಳು ಅಭ್ಯಾಸಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ಇರುವ ಸೋಲಾರ್ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ತುಂಗಭದ್ರಾ ನದಿಯ ಮುಖ್ಯ ಕೊಳವೆಯಿಂದ ಹಾಸ್ಟೆಲ್‌ಗೆ ನೀರಿನ ಸೌಲಭ್ಯ ಕಲ್ಪಿಸಿದೆ. ಆದರೆ, ಅದಕ್ಕೊಂದು ನಲ್ಲಿ ಜೋಡಿಸದ್ದರಿಂದ ನೀರು ಚರಂಡಿ ಪಾಲಾಗುತ್ತಿದೆ. ಇನ್ನು ಅಡುಗೆ ಕೋಣೆಯ ಹಿಂದೆ ಮುಸರೆ ನೀರು ನಿಂತು ಗಬ್ಬು ನಾರುತ್ತಿದೆ. ಇದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿ.

ಬೆಡ್‌ಗಳೆಲ್ಲ ಕಿತ್ತಿವೆ, ಕಾಟಾಗಳು ಮುರಿದಿವೆ
ಹಾಸ್ಟೆಲ್‌ನಲ್ಲಿರುವ ಸ್ನಾನಗೃಹ, ಶೌಚಾಲಯ ಇವುಗಳ ಸ್ಥಿತಿಯಂತೂ ಹೇಳತಿರದು. ಶೌಚಾಲಯ ಗಬ್ಬು ನಾರುತ್ತಿದ್ದು ಅಲ್ಲಿ ಹೆಸರಿಗೆ ಮಾತ್ರ ನಲ್ಲಿ ಜೋಡಿಸಲಾಗಿದೆ. ಸ್ನಾನ ಗೃಹದಲ್ಲಿ ಹಾಗೂ ಅನೇಕ ಕಡೆ ವಿದ್ಯುತ್ ದೀಪಗಳಿಲ್ಲದೆ ಕತ್ತಲೆಯಲ್ಲಿಯೇ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದಾರೆ. ಬೆಡ್‌ಗಳೆಲ್ಲ ಕಿತ್ತಿದ್ದು, ಕೊಟ್ಟಿರುವ ಕಾಟಾಗಳು ಮುರಿದಿವೆ. ಇನ್ನು ಕೆಲವು ಜಂಗು ಹಿಡಿದು ಹಾಳಾಗುತ್ತಿವೆ. ಇಂತಹ ಕಾಟಾಗಳು ರಾಶಿಯಾಗಿ ಮೂಲೆ ಸೇರಿವೆ. ವಾರ್ಡನ್ ಜವಾಬ್ದಾರಿಯಿಂದ ಕಾರ್ಯನಿರ್ವಹಿಸದೇ ಇರುವುದೇ ಕಾರಣ ಎಂದು ಆರೋಪಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.