ನೆಲ್ಲೂರು ಸಸ್ಯ ಪಾಲನಾ ಕ್ಷೇತ್ರದ ಸ್ಥಿತಿ ಹೀನಾಯ
ರೋಣ ತಾಲೂಕಿನ ನೆಲ್ಲೂರು ಗ್ರಾಮದಲ್ಲಿ ಆರಂಭವಾದ ಸಸ್ಯ ಪಾಲನಾ ಕ್ಷೇತ್ರ ಹಲವಾರು ಸಂಕಷ್ಟಗಳ ಮಧ್ಯೆ ಬೆಳೆದು ಕುಂಟುತ್ತಾ ಸಾಗಿದೆ.
ಸೂಕ್ತ ಅನುದಾನ, ಸಾರ್ವಜನಿಕರ ಸಹಕಾರ, ಪರಿಸರ ಪ್ರೇಮಿಗಳ ಇಚ್ಛಾಶಕ್ತಿ, ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನೆರವು ದೊರೆತಿದ್ದರೆ ಇದು ಮಾದರಿ ಸಸ್ಯ ಪಾಲನಾ ಕ್ಷೇತ್ರವಾಗಿ ಕಂಗೋಳಿಸುತ್ತಿತ್ತು. ಆದರೆ, ಇವುಗಳು ಸಕಾಲಕ್ಕೆ ದೊರೆಯದಿದ್ದರೂ ಇಲಾಖೆಯ ಶ್ರಮದಿಂದ ಕಾರ್ಯನಿರ್ವಹಿಸುತ್ತಿರುವುದು ಆಶ್ಚರ್ಯವಾದರೂ ಸತ್ಯ.
ಸಸಿ ನೆಟ್ಟು ಪರಿಸರ ರಕ್ಷಿಸಿ: 80ರ ದಶಕದಲ್ಲಿ ಮರಗಳ್ಳರ ಅಟ್ಟಹಾಸದಿಂದ ಕ್ಷೀಣಿಸಿದ್ದ ರೋಣ ತಾಲೂಕಿನ ಅರಣ್ಯ ಹಾಗೂ ಹಸಿರು ಪರಿಸರ ಕ್ಷೇತ್ರಕ್ಕೆ ಪುನರ್ ಜನ್ಮ ನೀಡುವ ನಿಟ್ಟಿನಲ್ಲಿ ಸರ್ಕಾರ 1982-83ರಲ್ಲಿ ನೆಲ್ಲೂರು ಗ್ರಾಮದ ಹೊರ ವಲಯದಲ್ಲಿ ವಿಶಾಲವಾದ ಭೂ ವಿಸ್ತಾರದಲ್ಲಿ ಸಸ್ಯ ಪಾಲನಾ ಕ್ಷೇತ್ರ ಆರಂಭಿಸಿತು. ಇದರಲ್ಲಿ ಸಾಮಾಜಿಕ, ಪ್ರಾದೇಶಿಕ ಅರಣ್ಯ ಇಲಾಖೆಗಳು ಕಾರ್ಯಾರಂಭಿಸಿದವು. ಆರಂಭದಲ್ಲಿ ಎರಡೂ ಕ್ಷೇತ್ರಗಳು ಲಕ್ಷಾಂತರ ವಿಭಿನ್ನ ಬಗೆಯ ಸಸಿಗಳನ್ನು ತಯಾರಿಸಿ ಅವುಗಳನ್ನು ತಾಲೂಕಿನ ತುಂಬೆಲ್ಲ ನೆಟ್ಟರು. ಹೀಗಾಗಿ ರಸ್ತೆಯ ಎರಡೂ ಬದಿಯಲ್ಲಿ ಪುರಸಭೆ, ಪಪಂ, ಗ್ರಾಪಂ, ಸರ್ಕಾರಿ ಆಸ್ಪತ್ರೆ, ನ್ಯಾಯಾಲಯದ ಆವರಣ, ಕೆರೆದಂಡೆ, ಅರಣ್ಯ ಭೂಮಿ, ಹಳ್ಳ ಸೇರಿದಂತೆ ಪ್ರಮುಖ ಪಟ್ಟಣ, ಗ್ರಾಮಗಳಾದ, ಸೂಡಿ, ಇಟಗಿ, ನಾಗೇಂದ್ರಗಡ, ರಾಜೂರು, ಲಕ್ಕಲಕಟ್ಟಿ, ದಿಂಡೂರು, ಕಲ್ಲಿಗನೂರು, ಮುಶಿಗೇರಿ, ಗೋಗೇರಿ, ರುದ್ರಾಪುರ, ಅಮರಗಟ್ಟಿ, ಬೇವಿನಕಟ್ಟಿಯಂತ ಸುಮಾರು 106 ಹಳ್ಳಿಗಳ ಸರ್ಕಾರಿ, ಅರೆಸರ್ಕಾರಿ ಭೂ ಪ್ರದೇಶದಲ್ಲಿ ಸಸಿ ನೆಡಲಾಯಿತು. 20 ಸಾವಿರ ಹೆಕ್ಟೇರ್ ಸಾಮಾಜಿಕ, 10 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ. ಒಟ್ಟಾರೆ 7-8 ಲಕ್ಷಕ್ಕೂ ಅಧಿಕ ಸಂಖ್ಯೆಯ ಸಸಿಗಳನ್ನು ನೆಟ್ಟು ಅವುಗಳ ಪಾಲನೆ, ಪೋಷಣೆಗೆ ಇಲಾಖೆ ಮುಂದಾಗಿತ್ತು.
ನಿತ್ಯ ಮಾರಣ ಹೋಮ: ಸಸ್ಯ ಪಾಲನಾ ಕ್ಷೇತ್ರದ ಶ್ರಮ, ಅರಣ್ಯ ಇಲಾಖೆಯ ಪರಿಸರ ಕಾಳಜಿಯಿಂದ ರೋಣ ತಾಲೂಕಿನಲ್ಲಿ ಎರಡೂ ಇಲಾಖೆಯಿಂದ ಬೆಳೆದು ನಿಂತ ದೊಡ್ಡ ಮರಗಳಾದ ಅಶೋಕ, ನೀಲಗಿರಿ, ಬಿದಿರು, ಸಾಗವಾನಿ, ಹುಣಸೆ, ಅರಳೆ, ಇಲಾತಿ, ಹೊಂಗೆ, ಬಸಿರು, ಬೇವು ಹೀಗೆ ನೂರಾರು ತಳಿಯ ಲಕ್ಷಾಂತರ ರು. ಬೆಲೆ ಬಾಳುವ ಮರಗಳು ಮತ್ತು ಅರಣ್ಯ ಪ್ರದೇಶವನ್ನು ಹಗಲು ರಾತ್ರಿಯೆನ್ನದೇ ಕಡಿದು ಮಾರಣ ಹೋಮ ಮಾಡಲಾಯಿತು. 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವು ಅರಣ್ಯಗಳ್ಳರ ಅಟ್ಟಹಾಸಕ್ಕೆ ಲೂಟಿಯಾಯಿತು. ಇದಕ್ಕೆ 90ರ ದಶಕದಲ್ಲಿನ ಇಲಾಖೆಯ ನಿರ್ಲಕ್ಷ್ಯದ ಜತೆಗೆ ಕೆಲ ಸಿಬ್ಬಂದಿ ಬಾಹ್ಯ ಬೆಂಬಲವೇ ಮುಖ್ಯ ಕಾರಣವೆಂದು ಪರಿಸರ ಪ್ರೇಮಿಗಳ ಆರೋಪ. ಇವುಗಳ ಮಧ್ಯೆ ಪರಿಸರ ಪ್ರೇಮಿಗಳ ಒತ್ತಾಯದಿಂದ 2001ರಿಂದ ಈಚೆಗೆ ಎಚ್ಚೆತ್ತುಕೊಂಡ ಸಾಮಾಜಿಕ ಅರಣ್ಯ ಮತ್ತು ಸಸ್ಸ ಪಾಲನಾ ಕ್ಷೇತ್ರ ಅಕ್ಟೋಬರ್ನಲ್ಲಿ ತಯಾರಿಸಿದ ಸಸಿಗಳನ್ನು ಆಗಸ್ಟ್, ಸೆಪ್ಟೆಂಬರ್ನಲ್ಲಿ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ನೆಡಲು ಇಲಾಖೆ ಮುಂದಾಗುತ್ತದೆ. ಇದಕ್ಕೆ ತಕ್ಕಂತೆ ಅರಣ್ಯ ಮತ್ತು ಸಸ್ಯ ಪಾಲನಾ ಇಲಾಖೆಗೆ ಗ್ರಾಪಂ ಮೂಲಕ ಅನುದಾನವನ್ನೂ ಪಡೆಯಲಾಗುತ್ತಿತ್ತು.
ಹೀನಾಯ ಸ್ಥಿತಿಯತ್ತ: 2006-07ನೇ ಸಾಲಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವ ಜೊತೆಗೆ ಅರಣ್ಯ ಇಲಾಖೆಗೆ ಇದೇ ಯೋಜನೆಯಡಿ ಅನುದಾನ ಒದಗಿಸಬೇಕೆಂಬ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಸಸ್ಯ ಪಾಲನಾ ಕ್ಷೇತ್ರ ಪ್ರತಿ ವರ್ಷ ನೆಡುವ ಸಸಿಗಳಿಗೆ ಅನುದಾನದ ಹಿನ್ನಡೆಯುಂಟಾಯಿತು. ಹೀಗಾಗಿ ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿ ನೆಡುವ ಸಸಿಗಳಿಗೆ ಅನುದಾನವು ವಿಳಂಬವಾಗಿದ್ದರಿಂದ ಸಸಿಗಳ ತಯಾರಿಕೆಯಲ್ಲಿ ನೆಲ್ಲೂರು ಸಸ್ಸ ಪಾಲನಾ ಕ್ಷೇತ್ರವು ಹೀನಾಯ ಸ್ಥಿತಿಯತ್ತ ಸಾಗಿದೆ.
ಸಿಬ್ಬಂದಿ ಕೊರತೆ: ಸದ್ಯ ತಾಲೂಕಿನ ಪ್ರಾದೇಶಿಕ ಅರಣ್ಯ ಇಲಾಖೆಯಲ್ಲಿ 4 ಸಿಬ್ಬಂದಿ ಹೊಂದಿದರೆ, ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಇದೆ. ಇದರಿಂದ 20-30 ಸಿಬ್ಬಂದಿ ಪ್ರಾದೇಶಿಕ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ.
ಜಲಾನಯನ ಇಲಾಖೆ ಸೇರ್ಪಡೆ: ನೆಲ್ಲೂರು ಸಸ್ಯ ಪಾಲನಾ ಕ್ಷೇತ್ರದಲ್ಲಿ ಪ್ರಸಕ್ತ ವರ್ಷಕ್ಕೆ ಜಲಾನಯನ ಇಲಾಖೆಯ ಅರಣ್ಯ ಘಟಕವನ್ನು ಸೇರ್ಪಡೆ ಮಾಡಲಾಗಿದೆ. ಈ ಘಟಕದಿಂದ ಪ್ರಸ್ತುತ ವರ್ಷ ಇಲಾತಿ, ಸಾಗವಾನಿ, ಬೇವು, ಹೊಂಗೆ ಸೇರಿದಂತೆ ನೂರಕ್ಕೂ ಹೆಚ್ಚು ತಳಿಯ 2.5 ಲಕ್ಷ ಸಸಿಗಳು ಸಿದ್ಧಗೊಂಡಿವೆ. ಸಸ್ಯ ಪಾಲನಾ ಕ್ಷೇತ್ರದಲ್ಲಿ 27 ವರ್ಷ ಸುದೀರ್ಘವಾಗಿ ಶ್ರಮಿಸಿದೆ. ಸಾಮಾಜಿಕ, ಪ್ರಾದೇಶಿಕ ಇಲಾಖೆಗಳು ನಾಚುವಂತೆ ಸಸಿ ಉತ್ಪನ್ನದಲ್ಲಿ ತೊಡಗಿದ್ದು, ತಾಲೂಕಿನ ಪ್ರತಿ ರೈತರ ಜಮೀನುಗಳ ಬದುವಿನಲ್ಲಿ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಒಟ್ಟಿನಲ್ಲಿ ಕುಂಟುತ್ತಾ ನಡೆದಿರುವ ನೆಲ್ಲೂರು ಸಸ್ಯ ಪಾಲನಾ ಕೇತ್ರಕ್ಕೆ ಸರ್ಕಾರ ಸಕಾಲಕ್ಕೆ ನೆರವನ್ನು ನೀಡಿ ಇನ್ನೂ ಹೆಚ್ಚು ಅಭಿವೃದ್ಧಿಗೆ ಮುಂದಾಗಬೇಕಾಗಿದೆ.
ಪ್ರಸಕ್ತ ವರ್ಷದಲ್ಲಿ ಅರಣ್ಯ ಇಲಾಖೆ ಗೊತ್ತುಪಡಿಸಿದ ಸ್ಥಳದಲ್ಲಿ ನೆಡಲು ಬೇವು, ಹುಣಸಿ, ಹುಲಗಲ್, ಅತ್ತಿ, ಅರಳಿ, ನೀರಲೆ, ತಳಿಯ 4400 ಸಸಿ ಸಂಗ್ರಹಿಸಲಾಗಿದೆ. ಜತೆಗೆ ತಾಪಂ, ಗ್ರಾಪಂ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ನೆಡಲು 20 ಸಾವಿರ ಸಸಿ ಸಂಗ್ರಹಿಸಲಾಗಿದೆ. ಉತ್ತಮ ಮಳೆ ಸುರಿದ ಬಳಿಕ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು.
-ಕೆ.ಎನ್. ಪೋತ, ನೆಲ್ಲೂರು ನರ್ಸರಿ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ
ಮಾನವನ ದುರಾಸೆಯಿಂದಾಗಿ ಇಂದು ಪ್ರಾಕೃತಿಕ ಅರಣ್ಯ ಪರಿಸರ ವಿನಾಶದಂಚಿಗೆ ತಲುಪಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆ ಭೂಮಂಡಲಕ್ಕೆ ಗಂಡಾಂತರ ಕಟ್ಟಿಟ್ಟ ಬುತ್ತಿ. ಹಸಿರು ಪರಿಸರ ನಿರ್ಮಿಸುವ ದೆಸೆಯಲ್ಲಿ ನಾವೆಲ್ಲರೂ ಚಿಂತಿಸಬೇಕು. ಪ್ರತಿಯೊಬ್ಬರೂ ಸಸಿ ನೆಟ್ಟು ಅರಣ್ಯ ಪರಿಸರ ಬೆಳೆಸುವ ಅವಶ್ಯವಿದೆ.
-ಮಹಾಂತೇಶ್ವರ ಹೊಸಮನಿ, ಪರಿಸರ ಪ್ರೇಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

