ಗದಗ

ಕವಿ ಅಧ್ಯಯನಶೀಲನಾಗಿರಲಿ: ಕುಂಟಿ

Published On :

ಗದಗ: ಸುತ್ತಲಿನ ವಿಷಯವಸ್ತು ಮತ್ತು ಅನುಭವಗಳನ್ನಾಧರಿಸಿ ಕವಿತೆ ರಚಿಸಬೇಕು. ಕಾವ್ಯ ಸಹೃದಯರಲ್ಲಿ ರಸಾನುಭವವನ್ನು ಉಂಟುಮಾಡಬೇಕು. ಕವಿಯಾದವನು ಸದಾ ಅಭ್ಯಾಸಿಗನಾಗಿರಬೇಕು ಎಂದು ಧಾರವಾಡದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಹೇಳಿದರು.
ಅವರು ಈಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಕರ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಬಳಗಾನೂರಿನ ಶರಣರ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ ಸಾಹಿತಿಗಳಿಗೆ ಆಯೋಜಿಸಿದ್ದ ಕಾವ್ಯ-ಕಮ್ಮಟ ಉದ್ಘಾಟಿಸಿ ಮಾತನಾಡಿದರು. ಕವಿಯಾದವನು ಒಳಗಣ್ಣು ಮತ್ತು ಹೊರಗಣ್ಣನ್ನು ಸದಾ ಜಾಗೃತವಾಗಿಟ್ಟುಕೊಂಡಿರಬೇಕೆಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ಶಿವಶಾಂತವೀರ ಶರಣರು ಮಾತನಾಡಿ, ಶಿಕ್ಷಕರು ಉತ್ತಮೋತ್ತಮ ಪುಸ್ತಕ ಓದಬೇಕು. ಶಿಕ್ಷಕರಲ್ಲಿರುವ ಕ್ರಿಯಾಶೀಲತೆ, ಸೃಜನಶೀಲತೆ ಉತ್ತೇಜಿಸುವ ದಿಸೆಯಲ್ಲಿ ರಚನೆಗೊಂಡಿರುವ ಈ ವೇದಿಕೆ ಅನೇಕ ಸಾಹಿತಿಗಳನ್ನು ನಾಡಿನ ಸಾರಸ್ವತ ಲೋಕಕ್ಕೆ ನೀಡಲಿ ಎಂದು ಆಶಿಸಿ, ಕಾವ್ಯ ರಚನೆಯಿಂದ ಭಾಷೆ ಮತ್ತು ಭಾವನೆಗಳು ಶ್ರೀಮಂತಗೊಳ್ಳುತ್ತವೆ ಎಂದರು. ಡಾ. ವೈ.ಎಂ. ಭಜಂತ್ರಿ ಮಾತನಾಡಿ, ಕವಿಯಾದವನಿಗೆ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ಇರಬೇಕು. ಜನಪರ ಆಲೋಚನೆಗಳು ಕಾವ್ಯದಲ್ಲಿ ಮೂಡಿಬರಬೇಕು. ಕನ್ನಡ ಸಾಹಿತ್ಯದಲ್ಲಿ ಬಂದ ವಿವಿಧ ಪ್ರಕಾರದ ಕಾವ್ಯವನ್ನು ಉದಯೋನ್ಮುಖ ಬರಹಗಾರರು ಅಧ್ಯಯನ ಮಾಡಬೇಕು ಎಂದು ತಿಳಿಸಿದರು. ಕಾವ್ಯ ಅನೇಕ ತುಣುಕುಗಳನ್ನು ವಾಚಿಸಿ ಉದಾಹರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ವಿ. ರಾಜೇಂದ್ರಪ್ರಸಾದ ಮಾತನಾಡಿ, ಶಿಕ್ಷಕರಲ್ಲಿ ಬಹುಮುಖ ಪ್ರತಿಭೆಯಿದೆ. ಅದು ಅನಾವರಣಗೊಳ್ಳಬೇಕು. ಈ ದಿಸೆಯಲ್ಲಿ ಶಿಕ್ಷಕರ ಸಾಹಿತ್ಯ ವೇದಿಕೆ ರಚಿಸಲಾಗಿದೆ. ಕಾವ್ಯ-ಕಥೆ-ವಿಜ್ಞಾನ ಸಾಹಿತ್ಯದ ಬೆಳವಣಿಗೆಗೆ ಅನೇಕ ಚಟುವಟಿಕೆ ಹಮ್ಮಿಕೊಳ್ಳಲಾಗುವುದು. ಮಕ್ಕಳಿಗೂ ಅನೇಕ ಕಮ್ಮಟಗಳನ್ನು ಏರ್ಪಡಿಸಿ, ಸಾಹಿತ್ಯಾಭಿರುಚಿ ಬೆಳೆಸಲಾಗುವುದು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ, ಶಂಕರ ಹೂಗಾರ, ಎಂ.ಎ. ರಡ್ಡೇರ, ಆರ್.ಎಸ್.  ಬುರುಡಿ, ವಿ.ವಿ. ನಡುವಿನಮನಿ, ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಎಸ್.ಎನ್. ಬಳ್ಳಾರಿ, ತಾಲೂಕು ಅಧ್ಯಕ್ಷ ಡಿ.ಎಸ್. ತಳವಾರ, ಜಿಲ್ಲಾ ಸಂಘದ ಅಧ್ಯಕ್ಷ ಡಾ. ನಿಂಗು ಸೊಲಗಿ, ಐ.ಆರ್. ಅಕ್ಕಿ, ಷಹಜಹಾನ ಮುದಕವಿ ಇದ್ದರು. ವಿವೇಕಾನಂದಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ವೈ. ಡೊಳ್ಳಿನ ಪ್ರಾರ್ಥಿಸಿದರು. ಕೆ.ಪಿ. ಸಾಲಿಮಠ ಸ್ವಾಗತಿಸಿದರು. ಎಸ್.ಎಸ್. ಗೌಡರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.