ಗದಗ

ಗಜೇಂದ್ರಗಡ ಪುರಸಭೆ ಹಾಲಿ ಸದಸ್ಯನ ಮನೆ ಮುಂದೆ ಮಾಜಿ ಸದಸ್ಯನ ಧರಣಿ

Published On :

ಗಜೇಂದ್ರಗಡ: ಸ್ಥಳೀಯ ಪುರಸಭೆಯಲ್ಲಿ ಸರ್ಕಾರ ನಿಗದಿಪಡಿಸಿದ ತೆರಿಗೆ ಹಣ ಪಾವತಿಸಿದ ಸಾರ್ವಜನಿಕರ ಆಸ್ತಿ ಉತಾರ ಕೊಡಲು ಬಿಜೆಪಿ ಹಾಲಿ ಸದಸ್ಯ ಶೇಖಪ್ಪ ಇಟಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ರಾತ್ರಿ ಸದಸ್ಯನ ಮನೆ ಮುಂದೆ ಮಾಜಿ ಸದಸ್ಯ ಪ್ರಕಾಶ ಜಾಲಿಹಾಳ, ಸಹೋದರ ಸುರೇಶ ಜಾಲಿಹಾಳ ಪ್ರತಿಭಟನೆ ನಡೆಸಿದರು.
ಸ್ಥಳೀಯ ಪುರಸಭೆ ಬಿಜೆಪಿ ಸದಸ್ಯ ಶೇಖಪ್ಪ ಇಟಗಿ ಸಾರ್ವಜನಿಕರ ಆಸ್ತಿ ಉತಾರ ಕೊಡುವಂತಹ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಾ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಇಂತಹವರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಬಿಜೆಪಿ ಮಾಜಿ ಸದಸ್ಯ ಪ್ರಕಾಶ ಜಾಲಿಹಾಳ ಆರೋಪಿಸಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪುರಸಭೆ ಆಕರಣೆ ಆಸ್ತಿ ತೆರಿಗೆ ಪಾವತಿಸಿ ಉತಾರ ಪಡೆಯಲು ಬೇಡಿಕೆ ಅರ್ಜಿ ಸಲ್ಲಿಸಿದಾಗ ಕಾನೂನು ಅನ್ವಯ ಅಧಿಕಾರಿಗಳು ಉತಾರ ಕೊಡುತ್ತಾರೆ. ಆದರೆ, ಹೀಗೆ ಉತಾರ ಕೊಡುವಾಗ ಅನಗತ್ಯ ತಡೆ ಹಿಡಿದು ಜನತೆಗೆ ತೊಂದರೆ ಕೊಡುತ್ತಿರುವ ಶೇಖಪ್ಪ ಇಟಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರ ಎಸಗುತ್ತಿದ್ದಾರೆ ಎಂದು ದೂರಿದರು.
ಸದಸ್ಯನಿಂದ ನಿಂದನೆ-ಬೆದರಿಕೆ: ಆಸ್ತಿ ಉತಾರ ಕೊಡಲು ತಡೆ ಹಿಡಿಯುವ ಹಕ್ಕು ಪುರಸಭೆ ಸದಸ್ಯನಿಗೆ ಕೊಟ್ಟವರು ಯಾರು ಎಂದು ಸದಸ್ಯನ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಇದನ್ನು ಪ್ರಶ್ನಿಸಿರುವ ಸಾಮಾನ್ಯ ನಾಗರಿಕರಿಗೆ ಅವಾಚ್ಯ ಶಬ್ದದಿಂದ ನಿಂದಿಸುವುದು, ಬೆದರಿಕೆ ಹಾಕುವುದು ನಡೆಸಿದ್ದಾರೆ. ಇದೇ ವರ್ತನೆ ಮುಂದುವರಿದರೆ ಜನ ಸುಮ್ಮನಿರುವುದಿಲ್ಲ. ತಕ್ಕ ಶಾಸ್ತಿ ಮಾಡುವುದು ಖಚಿತ ಎಂದು ಎಚ್ಚರಿಸಿದರು.
ಸದಸ್ಯತ್ವ ರದ್ದತಿಗೆ ಆಗ್ರಹ: ಮನೆ ಹಾಗೂ ಆಸ್ತಿ ಉತಾರ ಕೊಡದೇ ತಡೆ ಹಿಡಿಯುವುದರ ಹಿಂದೆ ಹುನ್ನಾರ ಅಡಗಿದೆ. ತಮ್ಮ ಸೊಸೆ ಕವಿತಾ ನಾಗರಾಜ ಜಾಲಿಹಾಳ ಪುರಸಭೆ ಅಧ್ಯಕ್ಷೆ ಇದ್ದರೂ ಇಂತಹ ಸದಸ್ಯರ ದುರ್ವರ್ತನೆಯಿಂದಾಗಿ ಇಡಿ ಆಡಳಿತವೇ ತಲೆ ತಗ್ಗಿಸುವಂತಾಗಿದೆ. ನಾನೂ ಕಳೆದ ಅವಧಿಯಲ್ಲಿ ಬಿಜೆಪಿ ಸದಸ್ಯನಾಗಿ ಜನಸೇವೆ ಮಾಡಿದ್ದೇನೆ. ಪಕ್ಷದ ಏಳ್ಗೆಗೆ ದುಡಿದಿದ್ದೇನೆ. ಆದರೆ, ಎಂದೆಂದಿಗೂ ಹದ್ದು ಮೀರಿಲ್ಲ. ಸಾರ್ವಜನಿಕರ ಜತೆ ಸಭ್ಯತೆಯಿಂದ ನಡೆದುಕೊಂಡಿದ್ದೇನೆ. ಬಿಜೆಪಿ ಸದಸ್ಯ ಶೇಖಪ್ಪ ಇಟಗಿ ಸಾರ್ವಜನಿಕರ ಕೆಲಸ ಕಾರ್ಯಗಳ ಜತೆ ಚೆಲ್ಲಾಟ ನಡೆಸಿದ್ದಾರೆ. ಇಂತಹವರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಇಂತಹವರ ಸದಸ್ಯತ್ವ ಅನರ್ಹ್ಹತೆಗೆ ವರಿಷ್ಠರು ಮುಂದಾಗಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.