ಗದಗ

ಕನ್ನಡಿಗರ ಮನೆ ಮನಗಳಲ್ಲಿ ಡಾ. ರಾಜ್

Published On :

ಗದಗ: ಕನ್ನಡಿಗರ ಆರಾಧ್ಯ ದೇವರಾಗಿದ್ದ ವರನಟ ರಾಜ್‌ಕುಮಾರ್ ಸದಾಕಾಲ ಕನ್ನಡಿಗರ ಮನೆ ಮನಗಳಲ್ಲಿದ್ದಾರೆ. ಅವರ ಅಭಿನಯಕ್ಕೆ ಮಾರು ಹೋಗದ ವಯೋವಾನದವರಿಲ್ಲ. ಅವರ ಅಭಿನಯ ಆರಾಧಿಸುವ ನಾವು        ಅವರು ಆಚರಿಸಿದ ಸಚ್ಛಾರಿತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಿಪಿಜಿ ಕಲಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರಾಜಶೇಖರ ದಾನರಡ್ಡಿ ಹೇಳಿದರು.
ಅವರು ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಪರಿಷತ್‌ನ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ವರನಟ ಡಾ. ರಾಜ್‌ಕುಮಾರ್ 86ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ರಾಜ್‌ಕುಮಾರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ಕೇವಲ ನಟನೆ ಒಂದನ್ನೇ ಅಲ್ಲದೆ ಕನ್ನಡ ನಾಡು ನುಡಿಗಾಗಿ ರಾಜ್‌ಕುಮಾರ್ ನಡೆಸಿದ ಗೋಕಾಕ್ ಚಳವಳಿ ಕನ್ನಡದ ಏಕೈಕ ಬೃಹತ್ ಹೋರಾಟ ಹಾಗೂ ಅದರ ಪರಿಣಾಮವೂ ಅಷ್ಟೇ ಪರಿಣಾಮಕಾರಿಯಾಗಿತ್ತು. ಅಂತಹ ನಟ ಕನ್ನಡ ಚಿತ್ರರಂಗದಲ್ಲಿ ಇನ್ನು ನೆನಪು ಮಾತ್ರ. ಅವರನ್ನು ನಾವು ಇನ್ನು ಕೇವಲ ಚಲನ ಚಿತ್ರಗಳಲ್ಲಿ ಮಾತ್ರವೇ ನೋಡಬೇಕಾಗಿದೆ ಎಂದರು. ಪ್ರಾ ಕೆ.ಎಚ್. ಬೇಲೂರ ಮಾತನಾಡಿ, ರಾಜ್ ತಾವು ಮಾಡಿದ ಅನೇಕ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ. ಅವರ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರರಾಗಿ ಮೆರೆದಿದ್ದಾರೆ. ರಾಜ್‌ಕುಮಾರ್ ಕೇವಲ ಅಭಿನಯದಲ್ಲಿ ಸಾಮ್ರಾಟರಾಗಿರದೆ ಸಾಮಾಜಿಕವಾಗಿಯೂ ಅತ್ಯುತ್ತಮವಾದ ಸನ್ನಡತೆ ಹೊಂದಿದ್ದರು. ಅವರನ್ನು ಯಾವ ಕಾಲದಲ್ಲಿಯೂ ಯಾವ ಚಿತ್ರರಂಗದ ನಟರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಮಾತನಾಡಿ, ಡಾ. ರಾಜ್‌ರು ನಟಿಸಿದ ಎಲ್ಲ ಚಿತ್ರಗಳಲ್ಲಿಯೂ ಎಲ್ಲ ರೀತಿಯ ಉತ್ತಮ ಸಾಮಾಜಿಕ ಕಳಕಳಿ ಬಿಂಬಿಸಿ ಅಭಿಮಾನಿಗಳ ಮನಸೊರೆಗೊಂಡಿದ್ದಾರೆ. ಅವರು ಅಭಿನಯಿಸದ ಪಾತ್ರಗಳಿಲ್ಲ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ಎಲ್ಲ ರೀತಿಯ ಪಾತ್ರಗಳಿಗೆ ಜೀವ ತುಂಬಿ ಅಭಿಮಾನಿಗಳ ಮನತಣಿಸಿದ್ದಾರೆ. ಅವರು ಅಮೋಘವಾದ ಸಾಧನೆಗೈದ ನಂತರವೂ ತಮ್ಮ ವ್ಯಕ್ತಿತ್ವದಲ್ಲಿ ಗರ್ವ ಅಹಂ ಅನ್ನು ಎಂದೂ ಅಳವಡಿಸಿಕೊಂಡವರಲ್ಲ. ಎಲ್ಲರನ್ನು ಪ್ರೀತಿಯಿಂದ ಕಾಣುವ ಅವರಿಂದ ಪ್ರೀತಿಯೂ ತಾನಾಗಿಯೇ ಹರಿದು ಬರುತ್ತದೆ ಎನ್ನುವ ತತ್ವದ ಆಧಾರದ ಮೇಲೆ ಸಾರ್ಥಕ ಜೀವನ ನಡೆಸಿದವರು. ಡಾ. ರಾಜ್ ಅವರು ಗೋಕಾಕ್ ಚಳವಳಿ ಯಶಸ್ವಿಗೊಳಿಸಿದ್ದು ಕನ್ನಡದ ಸಾಹಿತಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಎಂದಿಗೂ ಮರೆಯುವಂತದ್ದಲ್ಲ ಎಂದರು.
ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಜಿ. ಹಿರೇಮಠ, ಆನಂದ ಹಡಪದ, ಜಿ.ಎಸ್. ಯತ್ನಟ್ಟಿ, ಡಿ.ಎಸ್. ತಳವಾರ, ಅ.ದ. ಕಟ್ಟಿಮನಿ ಹಾಗೂ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಆಜೀವ ಸದಸ್ಯರು ಹಾಜರಿದ್ದರು. ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ ನಿರೂಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಡಿ.ಎಚ್. ಮಲ್ಲೇಶ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.