ಸಿಲಿಂಡರ್ ಸಂಪರ್ಕ ವಿಳಂಬ: ದೂರು
ಕನ್ನಡಪ್ರಭ ವಾರ್ತೆ, ರೋಣ, ಏ. 25
ಹೊಸದಾಗಿ ಗ್ಯಾಸ್ ಸಿಲಿಂಡರ್ ಸಂಪರ್ಕಕ್ಕಾಗಿ ಪಟ್ಟಣದ ಭೀಮಾ ಇಂಡೇನ್ ಗ್ಯಾಸ್ ವಿತರಕರಿಗೆ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾಗಿದ್ದು, ಈವರೆಗೂ ಸಿಲಿಂಡರ್ ನೀಡುವಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ತಾಲೂಕಿನ ಅರಹುಣಸಿ ಗ್ರಾಮದ ಎಂ.ಬಿ. ಚೌಡರಡ್ಡಿ ಅವರು ಶುಕ್ರವಾರ ತಾಪಂ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಕೆ.ಸಿ. ಅಸುಂಡಿ ಅವರಲ್ಲಿ ದೂರು ಸಲ್ಲಿಸಿದರು.
ಗ್ಯಾಸ್ ಸಿಲಿಂಡರ್ ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾದರೂ ಪಟ್ಟಣ ಭೀಮಾ ಇಂಡೇನ್ ಗ್ಯಾಸ್ ವಿತರಕರು ಇಂದು, ನಾಳೆ ಎಂದು ನಾಲ್ಕು ತಿಂಗಳಿನಿಂದ ಹೇಳುತ್ತಾ ಬಂದಿದ್ದಾರೆ. ಅಲ್ಲದೇ ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯಬೇಕಾದಲ್ಲಿ ಕಡ್ಡಾಯವಾಗಿ ಒಲೆ ಪಡೆಯಬೇಕು. ಇಲ್ಲವಾದಲ್ಲಿ ಹೊಸ ಸಂಪರ್ಕ ಕಲ್ಪಿಸಲು ಆಗುತ್ತಿಲ್ಲ ಎಂದು ಸಮಜಾಯಿಸುತ್ತಾರೆ. ಹೊಸ ಸಂಪರ್ಕದ ಶುಲ್ಕಕ್ಕಿಂತ ಹೆಚ್ಚಿನ ಹಣ ನೀಡಿದವರಿಗೆ ತಕ್ಷಣವೇ ಕೋಡುತ್ತಾರೆ. ಅಲ್ಲದೆ ಗ್ಯಾಸ್ ವಿತರಕರೇ ಖುದ್ದಾಗಿ ಒಲೆಗಳನ್ನು ಮಾರಾಟ ಮಾಡುತ್ತಿದ್ದು, ಹೊರಗಡೆ ಮಾರುಕಟ್ಟೆಯಲ್ಲಿ ರು. 800ರಿಂದ 1100ಗೆ ದೊರೆಯುವ ಒಲೆಗಳನ್ನು ಇಲ್ಲಿ ರು. 300 ಸಾವಿರ ಕೊಟ್ಟು ಖರೀದಿಸಬೇಕಂತೆ ಎಂದು ಎಂ.ಬಿ. ಚೌಡರಡ್ಡಿ ಲೋಕಾಯುಕ್ತರಲ್ಲಿ ದೂರಿದರು. ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಕೆ.ಸಿ. ಅಸುಂಡಿ ಮಾತನಾಡಿ, ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆಯಬೇಕಾದಲ್ಲಿ ಒಲೆಯನ್ನು ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವಿಲ್ಲ. ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಸಂಪರ್ಕ ಕಲ್ಪಿಸಬೇಕು ಎಂಬ ನಿಯಮವಿದೆ. ಈ ಕುರಿತು ಕೂಡಲೇ ತಹಸೀಲ್ದಾರ್ ಮತ್ತು ಆಹಾರ ವಿಭಾಗದ ಅಧೀಕ್ಷಕರೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಪುರಸಭೆ ನಿರ್ಲಕ್ಷ್ಯದಿಂದ ರೋಗಿಗಳಿಗೆ ತೊಂದರೆ: ಸ್ಥಳೀಯ ಪುರಸಭೆಯ ನಿರ್ಲಕ್ಷ್ಯದಿಂದ ಪಟ್ಟಣದ ಶಿವಕುಮಾರ ನರ್ಸಿಂಗ್ ಹೋಂ ಹಾಗೂ ಚಿಕ್ಕ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆಯ ಮುಂದೆಯೇ ಕಸ ತುಂಬುವ ಕಂಟೈನರ್ ಇಟ್ಟಿದ್ದು, ಅದು ಕಸ, ಕಡ್ಡಿಗಳಿಂದ ತುಂಬಿ ಹೊರ ಚೆಲ್ಲಿದರೂ ಪುರಸಭೆಯವರು ಅದರ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಅಲ್ಲದೆ ಆಸ್ಪತ್ರೆಯ ಮುಂದಿನ ಗಟಾರು ಗಲೀಜಿನಿಂದ ತುಂಬಿ ಗಬ್ಬೆದ್ದು ನಾರುತ್ತಿದೆ. ಇದರಿಂದ ಆಸ್ಪತ್ರೆಯಲ್ಲಿನ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ರೋಗಿಗಳು ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವುದರ ಜೊತೆಗೆ ಸಾಂಕ್ರಾಮಿಕ ಕಾಯಿಲೆ ಭೀತಿ ಎದುರಿಸುವಂತಾಗಿದೆ. ಇದಕ್ಕೆ ಪುರಸಭೆ ಅಧಿಕಾರಿ ಮತ್ತು ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಾರಣ ಎಂದು ಸಂಜಯ ರಡ್ಡೇರ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದರು.
ಖಾತ್ರಿ ಕೂಲಿ ವಿಳಂಬ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿ ಮೂರು ತಿಂಗಳುಗಳೇ ಗತಿಸುತ್ತಾ ಬಂದಿದ್ದರೂ ಈವರೆಗೂ ಕೂಲಿ ಹಣ ನೀಡುವಲ್ಲಿ ತಾಲೂಕಿನ ಮಲ್ಲಾಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಾನಾ ರೀತಿಯ ಕುಂಟು ನೆಪ ಹೇಳುತ್ತಿದ್ದಾರೆ. ಇದರಿಂದ ನಮಗೆ ತೀವ್ರ ತೊಂದರೆಯಾಗಿದೆ ಎಂದು ತಾಲೂಕಿನ ಅರಹುಣಸಿ ಗ್ರಾಮದ ಎಸ್.ಎಂ. ಕುಡಗುಂಟಿ ದೂರು ಸಲ್ಲಿಸಿದರು. ಒಟ್ಟು ಮೂರು ಅರ್ಜಿಗಳು ಬಂದಿದ್ದವು. ಈ ವೇಳೆ ಸಬೂಬು ಹೇಳಿದ ಪುರಸಭೆ ಸಿಬ್ಬಂದಿ ಕೊಡ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಲೋಕಾಯುಕ್ತ ಸಿಪಿಐ ರವಿ ಪುರುಷೋತ್ತಮ, ತಹಸೀಲ್ದಾರ್ ಎ.ಜಿ. ಪಂಡೀತ, ಲೋಕಾಯುಕ್ತ ಸಿಬ್ಬಂದಿ ಎಂ.ಎಂ. ಅಯ್ಯನಗೌಡ್ರ, ಗೀತಾ ಬಿರಸಲ್ಲ, ನಾರಾಯಣ ಚೂರಿ, ನಾರಾಯಣ ತಾಯಣ್ಣವರ, ಬಸವರಾಜ ಬಡಿಗೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

