ರು. 1318 ಕೋಟಿ ಸಾಲದ ಯೋಜನೆ
ಕನ್ನಡಪ್ರಭ ವಾರ್ತೆ, ಗದಗ, ಏ. 29
ಜಿಲ್ಲೆಯ ಪ್ರಸಕ್ತ 2014-15ನೇ ವಿತ್ತೀಯ ವರ್ಷದಲ್ಲಿ ಒಟ್ಟು ರು. 1318 ಕೋಟಿ ಬ್ಯಾಂಕ್ ಸಾಲದ ಯೋಜನೆಯನ್ನು ಗದಗ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ಬಿಡುಗಡೆ ಮಾಡಿದರು.
ಅವರು ಮಂಗಳವಾರ ಗದಗ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಜರುಗಿದ ಲೀಡ್ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಸಾಲ ಯೋಜನೆ ಬಿಡುಗಡೆ ಮಾಡಿದರು.
ಗ್ರಾಮೀಣ ಭಾಗದಲ್ಲಿನ ಬ್ಯಾಂಕ್ ಶಾಖೆಗಳು, ರೈತರ ಕೃಷಿಗೆ ಹೆಚ್ಚಿನ ನೆರವು ಕಲ್ಪಿಸಲು ಮುಂದಾಗುವಂತೆ ಕರೆ ನೀಡಿದರು. ಇಂದು ಕೃಷಿ ಹಲವಾರು ಸಮಸ್ಯೆಗಳ ನಡುವೆ ನಲುಗುತ್ತಿದ್ದು ರೈತರು ಹಿಂದೆಂದಿಗಿಂತಲೂ ಹೆಚ್ಚಾಗಿ ಸರ್ಕಾರ ಹಾಗೂ ಬ್ಯಾಂಕ್ಗಳ ಸಹಕಾರದ ಮೇಲೆ ಅವಲಂಬಿಸಿದ್ದಾರೆ. ಅವರಿಗೆ ಸಮಯಕ್ಕೆ ಸರಿಯಾಗಿ ಕೃಷಿ ಸಾಲ ಹಾಗೂ ಇತರ ಸೌಲಭ್ಯಗಳು ಸಿಗುವಂತೆ ಮಾಡಲು ಬ್ಯಾಂಕ್ ಅಧಿಕಾರಿಗಳ ಪಾತ್ರವು ಮುಖ್ಯವಾಗಿದೆ.
ಜಿಲ್ಲೆಯಲ್ಲಿ 150 ಬ್ಯಾಂಕ್ಗಳು: ಕಳೆದ ಆರ್ಥಿಕ ವರ್ಷದಲ್ಲಿ 2014ರ ಡಿಸೆಂಬರ್ ಅಂತ್ಯಕ್ಕೆ 9 ಹೊಸ ಬ್ಯಾಂಕ್ ಶಾಖೆಗಳನ್ನು ಆರಂಭಿಸಿದ್ದು ಒಟ್ಟು 150 ಬ್ಯಾಂಕ್ ಶಾಖೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಟ್ಟಾರೆ ರು. 1702 ಕೋಟಿ ಠೇವಣಿ ಸಂಗ್ರಹವಿದೆ. 2013ರ ಮಾರ್ಚ್ ಅಂತ್ಯಕ್ಕೆ ಇದು ರು. 2351 ಕೋಟಿ ಆಗಿತ್ತು. ಅದೇ ರೀತಿ ಸಾಲದ ಪ್ರಮಾಣವು 2013ರ ಡಿಸೆಂಬರ್ ಅಂತ್ಯಕ್ಕೆ ಒಟ್ಟಾರೆ ರು. 1522 ಕೋಟಿ ಇದ್ದು, ಠೇವಣಿಗೆ ಅನ್ವಯಿಸಿ ಸಾಲ ನೀಡುವ (ಸಿಡಿ) ಪ್ರಮಾಣ ಶೇ. 86.49ರಷ್ಟಿತ್ತು. ಆದ್ಯತಾ ವಲಯಕ್ಕೆ ರು. 744 ಕೋಟಿ, ಕೃಷಿಗೆ 550, ಕೈಗಾರಿಕೆ ವಲಯಕ್ಕೆ 28 ಹಾಗೂ ಇತರ ಆದ್ಯತಾ ವಲಯಕ್ಕೆ ರು. 110 ಕೋಟಿ ಸಾಲ ಒದಗಿಸಲಾಗಿದೆ.
ಸಾಲ ಬಾಕಿ: ಜಿಲ್ಲೆಯಲ್ಲಿ ಆದ್ಯತಾ ವಲಯದಿಂದ 2013ರ ಡಿಸೆಂಬರ್ ಅಂತ್ಯಕ್ಕೆ ರು. 744 ಕೋಟಿ, ಕೃಷಿ ವಲಯದಿಂದ ರು. 550, ಇತರೆ ವಲಯ ರು. 193, ಅಲ್ಪಸಂಖ್ಯಾತರ ವಲಯದಿಂದ ರು. 26, ಹಿಂದುಳಿದ ವಲಯದಿಂದ ರು. 324, ಮಹಿಳಾ ವಲಯದ ರು. 66 ಹಾಗೂ ಪರಿಶಿಷ್ಟ ಜಾತಿ ಪಂಗಡದವರಿಗೆ ನೀಡಿದ ರು. 59 ಕೋಟಿ ಸೇರಿದಂತೆ ಒಟ್ಟು ರು. 1521 ಕೋಟಿ ಸಾಲ ಬಾಕಿ ಇದೆ. 2013-14ರಲ್ಲಿ (ಡಿಸೆಂಬರ್ ಅಂತ್ಯಕ್ಕೆ ) ಒಟ್ಟಾರೆ ರು. 857 ಕೋಟಿ ಕೃಷಿ ಸಾಲದ ಪೈಕಿ ರು. 427 ಕೋಟಿ ಸಾಲ ಬಟವಡೆ ಆಗಿತ್ತು. ಕೃಷಿಯೇತರ ವಲಯದ ರು. 13 ಕೋಟಿ, ಇತರೆ ಆದ್ಯತಾ ವಲಯಕ್ಕೆ ರು. 104 ಕೋಟಿ ಸಾಲ ನೀಡಲಾಗಿತ್ತು. ಒಟ್ಟಾರೆ ರು. 1134 ಕೋಟಿ ಸಾಲ ನೀಡುವ ಗುರಿ ಪೈಕಿ ಕೇವಲ ಶೇ. 48ರಷ್ಟು ಅಂದರೆ ರು. 545 ಕೋಟಿ ವಿತರಣೆಯಾಗಿದೆ. ಗದಗ ತಾಲೂಕಿನಲ್ಲಿ (2013ರ ಡಿಸೆಂಬರ್ ಅಂತ್ಯಕ್ಕೆ) ಒಟ್ಟಾರೆ ರು. 362 ಕೋಟಿ ಸಾಲದ ಪೈಕಿ ರು. 119 ಕೋಟಿ (ಶೇ.33) ವಿತರಣೆ ಆಗಿತ್ತು. ನರಗುಂದದಲ್ಲಿ ರು. 211 ಕೋಟಿ ಪೈಕಿ ರು. 141 ಕೋಟಿ (ಶೇ. 67), ರೋಣ ತಾಲೂಕಿನಲ್ಲಿ ರು. 261.83 ಕೋಟಿ ಪೈಕಿ ರು. 113 ಕೋಟಿ (ಶೇ.43), ಮುಂಡರಗಿ ತಾಲೂಕಿನಲ್ಲಿ ರು. 128.83 ಕೋಟಿ ಪೈಕಿ ಕೇವಲ ರು. 48.55 ಕೋಟಿ (ಶೇ. 38) ಹಾಗೂ ಶಿರಹಟ್ಟಿಯಲ್ಲಿ ರು. 169.98 ಕೋಟಿ ಸಾಲದ ಪೈಕಿ ರು. 122 ಕೋಟಿ (ಶೇ. 72) ಸಾಲ ವಿತರಣೆಯಾಗಿದೆ.
ಗದಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ರಾಜ್ಯ ಸರ್ಕಾರವು ಬರಪೀಡಿತ ಪ್ರದೇಶಗಳೆಂದು ಘೋಷಿಸಿದೆ. ಈ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗದರ್ಶಿ ಸೂತ್ರಗಳನ್ವಯ ಕೃಷಿ ಸಾಲ ಪಡೆದ ರೈತರಿಗೆ ಅಗತ್ಯ ಅನುಕೂಲ ಹಾಗೂ ಸಾಲದ ಮರು ಹೊಂದಾಣಿಕೆ ಸಾಲ ಮರುಪಾವತಿ ಅವಧಿ ವಿಸ್ತರಣೆ ಮುಂತಾದ ಕ್ರಮ ಜರುಗಿಸಲು ಜಿಲ್ಲೆಯ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಸ್ಟೇಟ್ ಬ್ಯಾಂಕಿನ ಪ್ರಾದೇಶಿಕ ಅಧಿಕಾರಿ ವಿದ್ಯಾಧರ, ಆರ್ಬಿಐ ಅಧಿಕಾರಿ ಆರ್.ಪಿ. ಚೌಧರಿ, ನಬಾರ್ಡ್ ಎಜಿಎಂ ಶ್ರವಣಕುಮಾರ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಿ.ಜಿ. ಕೋಲಕಾರ ಹಾಗೂ ವಿವಿಧ ಬ್ಯಾಂಕ್ಗಳ ಹಿರಿಯ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

