ವಿರೂಪಾಪುರ ತಾಂಡಾದಲ್ಲಿ ನೀರಿಗೆ ಬರಟ ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 30
ರಾತ್ರಿ ಅನ್ನಾಂಗಿಲ್ಲ ಹಗಲಿ ಅನ್ನಾಂಗಿಲ್ಲ ಕರೆಂಟ್ ಬಂದಾಗ ನಾವು ನಳದ ಹತ್ರ ಬಂದ ನಿಲ್ಲಬೇಕ್ರಿ, ನಿದ್ದಿ ಮಬ್ಬಿನ್ಯಾಗ ಇದ್ರ ದನಕರಕ ಹಾಗೂ ಬಟ್ಟಿ-ಬರಿಗೆ, ಬಳಸಾಕ ನೀರ ಸಿಗಂಗಿಲ್ರಿ. ಕುಡಿಯುವ ನೀರಂತೂ ನಮಗ ಇಲ್ಲ..ಇಲ್ಲಾ. ಇಲೆಕ್ಷನ್ ಬಂದಾಗ ಬಣ್ಣದ ಮಾತ್ ಹೇಳಿಹೋದ ಜನ ಮತ್ತ ನಮ್ಮತಾಂಡಾದ ಕಡಿಗೆ ನೋಡಿಲ್ಲ ಎಂದು ತಾಲೂಕಿನ ವಿರೂಪಾಪುರ ತಾಂಡಾದ ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡ ಪರಿಯಿದು.
ತಾಲೂಕಿನ ಕಲಕೇರಿ ಗ್ರಾಪಂ ವ್ಯಾಪ್ತಿಗೆ ಬರುವ ವಿರೂಪಾಪುರ ತಾಂಡಾದಲ್ಲಿ ಕಳೆದ ಅನೇಕ ತಿಂಗಳುಗಳಿಂದ ಕುಡಿವ ನೀರಿಗಾಗಿ ಜನತೆ ಪರಿತಪಿಸುತ್ತಿದ್ದು, ಇದುವರೆಗೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಯಾವುದೇ ಕ್ರಮಕೈಗೊಂಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.
ಗ್ರಾಮದಲ್ಲಿದ್ದ ಬೋರ್ವೆಲ್ನ ಕೈಪಂಪ್ಗಳು ದುರಸ್ತಿಯಲ್ಲಿದ್ದು, ಊರಿನ ಪಕ್ಕದಲ್ಲಿ ಬೈಪ್ ಸಂಸ್ಥೆಯವರು ಕೊರೆಯಿಸಿರುವ ಬೋರ್ವೆಲ್ನಿಂದ ಇದೀಗ ವಿರೂಪಾಪುರ ತಾಂಡಾಕ್ಕೆ ಪೈಪ್ಲೈನ್ ಮಾಡಿಸಿ ದನಕರುಗಳಿಗೆ ಹಾಗೂ ನಿತ್ಯ ಬಟ್ಟೆ, ಬರೆಗಳ ಬಳಕೆಗಾಗಿ ಬಳಸಲಾಗುತ್ತಿದೆ. ಇವೂ ವಿದ್ಯುತ್ ಇದ್ದಾಗ ಮಾತ್ರ. ಒಂದೊಂದು ಬಾರಿ ತಡರಾತ್ರಿ ವಿದ್ಯುತ್ ಬಂದರೆ ಅದೇ ವೇಳೆಯಲ್ಲಿ ಎದ್ದು ನೀರು ತುಂಬುವುದು ಇಲ್ಲಿನ ಜನರಿಗೆ ಅನಿವಾರ್ಯ.
ಹೊಲದಲ್ಲಿನ ನೀರೇ ಗತಿ: ಕಳೆದ ಅನೇಕ ತಿಂಗಳಿನಿಂದ ತಾಂಡಾದಲ್ಲಿ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಈ ಕುರಿತು ಅನೇಕ ಬಾರಿ ಗ್ರಾಪಂ, ತಾಪಂಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ನಿತ್ಯ ವಿದ್ಯುತ್ ಸರಬರಾಜು ಇರುವ ಸಂದರ್ಭದಲ್ಲಿ ಅಕ್ಕಪಕ್ಕದ ರೈತರ ಹೊಲಗಳಿಗೆ ಹೋಗಿ ನೀರು ತರುವುದು ಅನಿವಾರ್ಯವಾಗಿದೆ. ಕೆಲ ಬಾರಿ ಹೊಲದ ಮಾಲೀಕರು ಹೊಲಗಳಿಗೆ ಬರದೇ ಇದ್ದರೆ ಅಂದು ಕುಡಿವ ನೀರಿ ಇಲ್ಲ. ಬಳಕೆಗಾಗಿ ಬರುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಆ ನೀರನ್ನು ಕುಡಿದು ವಾಂತಿಭೇದಿ, ಹೊಟ್ಟೆನೋವು ಅನುಭವಿಸಬೇಕು. ಇದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯತನಕ್ಕೆ ಸಾಕ್ಷಿ ಎನ್ನುವುದು ಗ್ರಾಮಸ್ಥರ ದೂರಾಗಿದೆ.
ತುಂಗಭದ್ರಾ ಕುಡಿವ ಭಾಗ್ಯ ನಮಗಿಲ್ಲ: ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಹತ್ತಿರದ ತುಂಗಭದ್ರಾ ನದಿಯಿಂದ ನೀರನ್ನು ಗದಗ, ಮುಂಡರಗಿ, ಡಂಬಳ ಸೇರಿದಂತೆ ಅನೇಕ ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ನಮ್ಮ ಗ್ರಾಮದಲ್ಲಿ ದೊರೆಯುವ ನೀರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೋಸಿಸ್ ಪ್ರಮಾಣ ಇದೆ. ಇದು ಗೊತ್ತಿದ್ದರೂ ನದಿಯಿಂದ ಅತಿ ಕಡಿಮೆ ಅಂತರದಲ್ಲಿರುವ ತಾಂಡಾದ ಜನರಿಗೆ ಮಾತ್ರ ತುಂಗಭದ್ರಾ ನೀರು ಕುಡಿವ ಭಾಗ್ಯ ಇಲ್ಲ. ಅದಕ್ಕಾಗಿ ಈ ಕೂಡಲೇ ಪೈಪ್ಲೈನ್ ಕಾಮಗಾರಿ ಮಾಡಿಸಿ ನಮಗೂ ತುಂಗಭದ್ರಾ ನೀರು ಒದಗಿಸಬೇಕೆಂದು ಗ್ರಾಮದ ಹನುಮಂತಪ್ಪ ಮುದ್ಲಾಪುರ ಮನವಿ ಮಾಡಿದರು.
ಶುದ್ಧ ನೀರಿನ ಘಟಕ ಶೀಘ್ರದಲ್ಲಿ ಪ್ರಾರಂಭ
ಗುಡ್ಡದಲ್ಲಿ ಜಿಪಂ ಅನುದಾನದಲ್ಲಿ ಒಂದು ಬೋರ್ ಕೊರೆಯಿಸಲಾಗಿದೆ. ಬೈಪ್ ಸಂಸ್ಥೆಯವರ ಬೋರ್ನಿಂದಲೂ ಪೈಪ್ಲೈನ್ ಮಾಡಲಾಗಿದ್ದು ಅಲ್ಲಿಂದ ನೀರು ಕೊಡಲಾಗುತ್ತಿದೆ. 13ನೇ ಹಣಕಾಸು ಯೋಜನೆಯಡಿಯಲ್ಲಿ ವಿರೂಪಾಪುರ ಹಾಗೂ ವಿರೂಪಾಪುರ ತಾಂಡಾದ ಮಧ್ಯದಲ್ಲಿ ಕೆ.ಎಚ್. ಪಾಟೀಲ್ ಪ್ರತಿಷ್ಠಾನದಿಂದ ಶುದ್ಧ ಕುಡಿವ ನೀರಿನ ಘಟಕ ಪ್ರಾರಂಭಿಸಲು ರು. 3 ಲಕ್ಷ ಕಾಯ್ದಿರಿಸಲಾಗಿದೆ. ಜಾಗೆಯನ್ನು ಗುರುತಿಸಿ ಶೀಘ್ರದಲ್ಲಿ ಶುದ್ಧ ಕುಡಿವ ನೀರಿನ ಘಟಕ ಪ್ರಾರಂಭಿಸಲಾಗುವುದು.
-ರಾಜಶೇಖರ ಮೇಟಿ, ಕಲಕೇರಿ ಗ್ರಾಪಂ ಅಧ್ಯಕ್ಷ
ಭರವಸೆ ನೀಡಿದವರು ಬಂದಿಲ್ಲ...
ಗ್ರಾಮಕ್ಕೆ ಕುಡಿವ ನೀರಿನ ವ್ಯವಸ್ಥೆ ಮಾಡಿಕೊಡುವುದಾಗಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಎಲ್ಲ ಪ್ರಮುಖ ಪಕ್ಷದವರೂ ಭರವಸೆ ನೀಡಿದ್ದರು. ನಂತರ ಜಿಪಂ ಉಪಚುನಾವಣೆ, ಈಚೆಗೆ ಜರುಗಿದ ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೂ ಮೂಗಿಗೆ ತುಪ್ಪ ಹಚ್ಚಿದ್ದಾರೆಯೇ ಹೊರತು ಇದುವರೆಗೂ ನೀರು ಕೊಟ್ಟಿಲ್ಲ. ನಮ್ಮ ತಾಲೂಕಿನವರೇ ಶಾಸಕರಾದರೂ ತಾಂಡಾದತ್ತ ಕಾಳಜಿ ವಹಿಸಿಲ್ಲ. ನಮ್ಮ ಗ್ರಾಮಕ್ಕೊಂದು ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಿ ಮಾಡಿಸಿಲ್ಲ.
-ಪಾರವ್ವ ಪೂಜಾರ, ಗ್ರಾಪಂ ಮಾಜಿ ಸದಸ್ಯೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

