ಗದಗ

ರೋಣ ಶಾಸಕ ಜಿ.ಎಸ್. ಪಾಟೀಲ್ಗೆ ಜನರಿಂದ ಬೇಡಿಕೆಗಳ ಮಹಾಪೂರ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಫೆ. 3
ಪಶು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ, ಪೇಠಾಲೂರಿನ 230 ಮನೆಗಳ ಅರ್ಹ ಫಲಾನುಭವಿಗಳಿಗೆ ಮನೆಗಳ ವಿತರಣೆ, ಹಳ್ಳಿಗುಡಿ ರಸ್ತೆ ಮತ್ತು ಹಳ್ಳಕ್ಕೆ ರಸ್ತೆ ನಿರ್ಮಾಣ, ಜಂತ್ಲಿ-ಶಿರೂರ ಗ್ರಾಮದ ಬಸವಣ್ಣ ದೇವರ ಗುಡಿ ರಸ್ತೆ, ವಸತಿ ನಿಲಯದ ಕಟ್ಟಡ ನಿರ್ಮಾಣ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆ ಸಾರ್ವಜನಿಕರು ಒತ್ತಾಯಿಸಿದರು. ರೋಣ ಶಾಸಕ ಜಿ.ಎಸ್. ಪಾಟೀಲ ಬೇಡಿಕೆಗಳಿಗೆ ಈಡೇರಿಸುವ ಭರವಸೆ ನೀಡಿದರು.
ಅವರು ಈಚೆಗೆ ತಾಲೂಕಿನ ಜಂತ್ಲಿ-ಶಿರೂರ ಗ್ರಾಮದಲ್ಲಿ ಜರುಗಿದ ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳ ಜನಸ್ಪಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಎಸ್. ಪಾಟೀಲ, ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಮಟ್ಟದಲ್ಲಿ ಜರುಗುವ ಗ್ರಾಮ ಸಭೆಗಳು ಪರಮಾಧಿಕಾರ ಹೊಂದಿವೆ. ಆದ್ದರಿಂದ ಅಧಿಕಾರಿಗಳು ಜನರ ತಾಳ್ಮೆ, ಪರೀಕ್ಷೆ ಮಾಡದೇ ಅವರ ಬೇಡಿಕೆಗಳನ್ನು ಈಡೇರಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು. ಅಧಿಕಾರಿಗಳು ಖುದ್ದಾಗಿ ಗ್ರಾಮಗಳಿಗೆ ತೆರಳಿ ಅಲ್ಲಿನ ಜನತೆಯ ಸಮಸ್ಯೆಗಳನ್ನು ಆಲಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಸಾರ್ವಜನಿಕರೂ ತಮ್ಮ ಯಾವುದೇ ಸಮಸ್ಯೆಗಳಿದ್ದರೂ ಹಿಂಜರಿಯದೇ ಅಧಿಕಾರಿಗಳ ಗಮನಕ್ಕೆ ತಂದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಪಾಟೀಲ ಸಾರ್ವಜನಿಕರಿಗೆ ಹೇಳಿದರು.
ತಹಸೀಲ್ದಾರ್ ಎಸ್.ಆರ್. ಶಿರಕೋಳ ಮಾತನಾಡಿ, ತಾಲೂಕಿನ ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ತಲುಪಿಸಲಾಗಿದೆ. ತಾಲೂಕಿನಾದ್ಯಂತ ಸರ್ವೇ ಮಾಡುವುದಕ್ಕಾಗಿ ಹೆಚ್ಚಿನ ಅರ್ಜಿಗಳು ಬಂದಿದ್ದು, ತಾಲೂಕು ಕೇಂದ್ರದ ಸರ್ವೇಯರ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಈ ಸಮಸ್ಯೆ ನಿರ್ಮಾಣವಾಗಿದೆ. ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗೆ ಕೊರತೆಯಿಂದಾಗಿ ರೈತರಿಗೆ ಒಂದಿಷ್ಟು ತೊಂದರೆಗಳಾಗುತ್ತಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದರು. ಗ್ರಾಮಸ್ಥರ ಪರವಾಗಿ ಗ್ರಾಮದ ರಾಮಪ್ಪ ವಡ್ಡಟ್ಟಿ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಸರ್ಕಾರದಿಂದ ದೊರೆಯುವ ಯಾವುದೇ ಸೌಲಭ್ಯಗಳ ಮಾಹಿತಿ ದೊರೆಯುವುದಿಲ್ಲ. ಯಾವುದೇ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಎಲ್ಲ ರೈತರಿಗೂ ವಿಷಯ ತಿಳಿಸುವುದಿಲ್ಲ ಎನ್ನುವ ಅನೇಕ ದೂರುಗಳನ್ನು ಜನರು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಯಾವುದೇ ಯೋಜನೆಯ ಫಲಾನುಭವಿಗಳ ಆಯ್ಕೆ ನಡೆಯಬೇಕಾದರೆ ಊರಲ್ಲಿ ಡಂಗುರ ಸಾರಿಸಿ ಎಲ್ಲ ರೈತರಿಗೂ ವಿಷಯ ತಿಳಿಸಿ ನಂತರ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದರು. ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ ಬಾಂಡ್ಗಳನ್ನು ವಿತರಿಸಿದರು. ಗ್ರಾಪಂ ಅಧ್ಯಕ್ಷೆ ಯಲ್ಲಮ್ಮ ಕಳ್ಳಿ, ಎಪಿಎಂಸಿ ಸದಸ್ಯ ಹೇಮಣ್ಣ ಪೂಜಾರ, ಸಿಡಿಪಿಒ, ಲೋಕೋಪಯೋಗಿ, ಶಿಕ್ಷಣ, ಅಬಕಾರಿ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.