ಸಮರ್ಪಕ ವಸತಿಗಾಗಿ ಪ್ರತಿಭಟನೆ
ಗದಗ: ಗದಗ-ಬೆಟಗೇರಿ ನಗರದ ವಸತಿರಹಿತ ಕುಟುಂಬಗಳಿಗೆ ಸರ್ಕಾರ ಕೊಡಲೇ ವಸತಿ ಸೌಲಭ್ಯ ಕಲ್ಪಿಸಕೊಡಬೇಕು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ವಸತಿರಹಿತರ ಬಗ್ಗೆ ಗಮನ ನೀಡುತ್ತಿಲ್ಲ ಎಂದು ಆರೋಪಿಸಿ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸೋಮವಾರ ನಗರದ ಸಾವಿರಾರು ವಸತಿ ರಹಿತರು ನಗರದ ಮುಳಗುಂದ ನಾಕಾ ವೃತ್ತದಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಗದಗ-ಬೆಟಗೇರಿ ನಗರದ ಗುಡಿಸಲು ನಿವಾಸಿಗಳಿಗೆ ಹಾಗೂ ನಗರದ ವಸತಿ ರಹಿತರಿಗೆ ನಿವೇಶನ ಸೌಕರ್ಯಕ್ಕೆ ಮತ್ತು ಮನೆಗಳನ್ನು ನಿರ್ಮಿಸಲು ಕೋಟ್ಯಂತರ ರು. ಅನುದಾನ ಬಿಡುಗಡೆಯಾಗುತ್ತಿದೆ. ಸರ್ಕಾರಗಳು ಗುಡಿಸಲು ಮುಕ್ತನಗರ ನಿರ್ಮಿಸಲು ಕನಸು ಕಾಣುತ್ತಿದೆ. ಇದಕ್ಕಾಗಿ ರಾಜೀವ ಆವಾಸ್ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ, ನಮ್ಮ ಮನೆ ಯೋಜನೆ ಇನ್ನು ಹಲವಾರು ಯೋಜನೆಗಳು ಜಾರಿಗೆ ತರುತ್ತಿದ್ದಾರೆ. ಈಗಾಗಲೇ ನಗರದಲ್ಲಿ ಈ ಹಿಂದೆ ಸಾವಿರಾರು ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, ಇದು ನಿಜವಾದ ವಸತಿ ರಹಿತರಿಗೆ ಬಡಕುಟುಂಬಗಳಿಗೆ ದೊರೆಯದೆ ಸಾಕಷ್ಟು ಮನೆಗಳು ಶ್ರೀಮಂತರ ಪಾಲಾಗಿವೆ ಎಂದು ಆರೋಪಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಐಎಚ್ಎಸ್ಡಿಪಿ ವಾಂಬೆ ಯೋಜನೆ ಹಾಗೂ ಇನ್ನು ಅನೇಕ ಯೋಜನೆಗಳಲ್ಲಿ ಗುಡಿಸಲು ನಿವಾಸಿಗಳಿಗೆ ವಸತಿ ಯೋಜನೆ ಜೊತೆಗೆ ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಕೋಟ್ಯಂತರ ಅನುದಾನ ಉಪಯೋಗಿಸಲಾಗಿದೆ. ಅಧಿಕಾರಿಗಳ ಭ್ರಷ್ಟತೆಯಿಂದ ಹಾಗೂ ಬಡಜನರ ವಿರೋಧಿ ನೀತಿಯಿಂದ ಸರ್ಕಾರದ ವಸತಿ ಯೋಜನೆಗಳು ಅರ್ಹರಿಗೆ ದೊರೆಯದ ಕಾರಣ ನಗರದಲ್ಲಿ ಸಾವಿರಾರು ಕುಟುಂಬಗಳು ವಸತಿ ರಹಿತರಾಗಿ ವಾಸ ಮಾಡುತ್ತಿದ್ದಾರೆ. ಸರ್ಕಾರಗಳು ಹಾಗೂ ಪ್ರತಿನಿಧಿಗಳು ಬಡಜನರಿಗೆ ವಸತಿ ಕಲ್ಪಿಸಲಾಗುವುದೆಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಇದು ನಿಜವಾದ ಬಡಕುಟುಂಬಕ್ಕೆ ವಸತಿ ರಹಿತರಿಗೆ ಜನಪ್ರತಿನಿಧಿಗಳು, ಡಿಸಿ ಸಮರ್ಪಕವಾಗಿ ವಿತರಿಸಬಹುದೆ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.
7 ದಿನದ ಒಳಗಾಗಿ ವಸತಿ ರಹಿತರಿಗೆ ಸೂಕ್ತ ನ್ಯಾಯ ಸಿಗದೆ ಇದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ನಗರದ ವಸತಿ ರಹಿತರ ಹಾಗೂ ಬಡಜನರ ವಿರೋಧಿ ನೀತಿಯನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸ್ಲಂ ಸಮಿತಿ ಅಧ್ಯಕ್ಷ ಅಶೋಕ ಮ್ಯಾಗೇರಿ, ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ, ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಶರೀಫ ಬಿಳೆಯಲಿ, ಯಲ್ಲಪ್ಪ ರಾಮಗಿರಿ, ಅಶೋಕ ಕುಸಬಿ, ಅಬುಬಕ್ಕರ ಮಕಾಂದಾರ, ಆರತಿ, ಪರಶುರಾಮ ಕಾಳೆ, ಯುಸುಫ ಮಜ್ಜಗಿ, ದ್ಯಾಮಣ್ಣ ಡೋಣಿ, ಅನಿಲ ಕಾಳೆ, ಇಬ್ರಾಹಿಂ ಮುಲ್ಲಾ, ಬಸವರಾಜ ಬಿಳೆಯಲಿ, ರಸೂಲಸಾಬ್ ಮುಳಗುಂದ, ರವಿಕುಮಾರ ಬೆಳಮಕರ, ಗೌರಮ್ಮ ಶಿರಗುಪ್ಪಿ, ಶಹಜಾನಬಿ ಕರ್ನಾಚಿ, ಪರವೀನ ಬಡಿಗೇರ, ರಾಜು ಕಣಗಿನಹಾಳ, ತಾಹೇರಾ ಗುಳಗುಂದಿ, ಸಲೀಂ ಬಳ್ಳಾರಿ, ಕಮಲವ್ವ ಬಿದರೂರು, ಮಲ್ಲೇಶಪ್ಪ ಕಲಾಲ ಇತರರು ಪ್ರತಿಭಟನೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

