ಗದಗ

ಹಾವೇರಿ ಸ್ಪೋರ್ಟ್ಸ್ ಕ್ಲಬ್‌ಗೆ ಗುದ್ನೇಶ್ವರ ಕಪ್

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 3
ಮೈದಾನದ ತುಂಬೆಲ್ಲ ಕೇ ಕೇ, ಶಿಳ್ಳೆಗಳ ಸದ್ದು.. ವಿದ್ಯಾರ್ಥಿಗಳಿಂದ ಹಿಡಿದು ಹಿರಿಯರು ಅಲ್ಲಿ ನೆರೆದಿದ್ದರು. ಅಲ್ಲಿನ ಪ್ರತಿಕ್ಷಣಗಳು ರೋಮಾಂಚನ ಉಂಟು ಮಾಡುತ್ತಿತ್ತು. ಹೌದು... ಇಂತಹ ಅಪರೂಪದ ಕ್ಷಣಕ್ಕೆ ಭಾನುವಾರ ಸಾಕ್ಷಿಯಾಗಿದ್ದು ತಾಲೂಕಿನ ನೀಲಗುಂದ ಗ್ರಾಮ. ಗ್ರಾಮದ ಗುದ್ನೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ 2 ದಿನಗಳ ಹೊನಲು ಬೆಳಕಿನ ರಾಜ್ಯಮಟ್ಟದ ಮುಕ್ತ ಖೋಖೋ ಪಂದ್ಯಾವಳಿ ನೋಡುಗರನ್ನು ರಂಜಿಸುವುದರ ಜತೆಗೆ ದೇಶೀಯ ಕ್ರೀಡೆಗಳ ಉಳಿವಿಕೆಗೆ ಸಾಕ್ಷಿಯಾಯಿತು.
ರಾಜ್ಯದ ದಾವಣಗೆರೆ, ಧಾರವಾಡ, ಬೆಳಗಾವಿ, ಹಾವೇರಿ, ಗುಲ್ಬರ್ಗ, ಬಾಗಲಕೋಟೆ, ಬಿಜಾಪುರ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ 18 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಹಾವೇರಿ ಜಿಲ್ಲೆಯ ಹಾವೇರಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಚಾಲುಕ್ಯ ತಂಡಗಳ ಮಧ್ಯೆ ನಡೆದ ಅಂತಿಮ ಹಣಾಹಣಿ ನೆರೆದ ಕ್ರೀಡಾಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಅಂತಿಮವಾಗಿ ಹಾವೇರಿ ತಂಡವು 2 ಅಂಕಗಳ ಅಂತರದಿಂದ ಗೆಲವು ಸಾಧಿಸಿತು.
ಎರಡು ಸೆಟ್‌ಗಳಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಹಾವೇರಿ ತಂಡ ಸಿಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಸೆಟ್‌ನಲ್ಲಿ ಹಾವೇರಿ ತಂಡವು 9 ಅಂಕ ಗಳಿಸಿದರೆ ಹುಬ್ಬಳ್ಳಿಯ ಚಾಲುಕ್ಯ ತಂಡವು 6 ಅಂಕ ಗಳಿಸಿತು. 2ನೇ ಸೆಟ್‌ನಲ್ಲಿ ಹಾವೇರಿ ತಂಡವು 9 ಅಂಕ ಗಳಿಸಿದರೆ ಚಾಲುಕ್ಯ ತಂಡವು 10 ಅಂಕಗಳನ್ನು ಗಳಿಸಿತು. ಎರಡೂ ಸೆಟ್‌ಗಳ ಒಟ್ಟು ಅಂಕಗಳಲ್ಲಿ ಚಾಲುಕ್ಯ ತಂಡವು 16 ಅಂಕ ಗಳಿಸಿತು. ಒಟ್ಟು 18 ಅಂಕಗಳನ್ನು ಗಳಿಸುವ ಮೂಲಕ ಹಾವೇರಿ ಸ್ಪೋರ್ಟ್ಸ್ ಕ್ಲಬ್ ಗುದ್ನೇಶ್ವರ ಕಪ್ ಅನ್ನು ತನ್ನದಾಗಿಸಿಕೊಂಡಿತು.
ಆಟದುದ್ದಕ್ಕೂ ಹಾವೇರಿ ತಂಡದವರು ಉಪಯೋಗಿಸಿದ ಪೋಲ್ ಶಾಟ್ ಹಾಗೂ ಡೈಗಳ ಮೂಲಕ ದಾಳಿ ಮಾಡುತ್ತಿದ್ದುದು ನೋಡುಗರು ಕೇ ಕೇ ಹಾಕುವಂತೆ ಮಾಡುತ್ತಿತ್ತು. ತಂಡದ ಫಕೀರೇಶ ದೊಡ್ಡಮನಿ ಉತ್ತಮ ಓಟಗಾರ ಪ್ರಶಸ್ತಿಗೆ ಭಾಜನವಾದರೆ ಹರ್ಷ ಉತ್ತಮ ಹೊಡೆತಗಾರ ಪ್ರಶಸ್ತಿಯನ್ನು ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.