ಗದಗ

ಕ್ರೀಡಾ ಇಲಾಖೆ ಕಚೇರಿಗೆ ಮುತ್ತಿಗೆ

Published On :

ಗದಗ: ಫೆ.1ರಂದು ಉಡುಪಿ ತಾಲೂಕಿನ ಎಲ್ಲೂರನಲ್ಲಿ ನಡೆದ ರಾಜ್ಯಮಟ್ಟದ ಯುವಜನ ಮೇಳಕ್ಕೆ ತಮ್ಮ ತಂಡ ಆಯ್ಕೆಯಾದರೂ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ ಎಂದು ಆರೋಪಿಸಿ ಸುರಕೋಡದ ಶಿವಾನಂದ ಯುವಕ ಮಂಡಳ ಸೋಮವಾರ ಯುವಜನಸೇವಾ ಕ್ರೀಡಾ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಶಿವಾನಂದ ಯುವಕ ಮಂಡಲದ ಅಧ್ಯಕ್ಷ ಎಸ್.ಬಿ. ರಾಯನಗೌಡ ಮಾತನಾಡಿ, 1984ರಲ್ಲಿಯೇ ಸ್ಥಾಪನೆಯಾದ ನಮ್ಮ ಕಲಾತಂಡ ರಾಜ್ಯಮಟ್ಟದಲ್ಲಿ 4 ಬಾರಿ ಪ್ರದರ್ಶನ ನೀಡಿದೆ. ಇತ್ತೀಚೆಗೆ ಬಿಜಾಪುರದಲ್ಲಿ ಜರುಗಿದ ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ಕೋಲಾಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿತು. ರಾಜ್ಯ ಮಟ್ಟದಲ್ಲಿ ನಮ್ಮ ತಂಡದ ಬದಲಿಗೆ ಮತ್ತೊಂದು ತಂಡಕ್ಕೆ ಆಡಲು ಅವಕಾಶ ಕಲ್ಪಿಸಲಾಗಿದೆ. ಇದು ಇಲಾಖೆಯ ನಿಷ್ಕಾಳಜಿಯಿಂದಾಗಿ ನಡೆದಿರುವಂತಹದ್ದಾಗಿದೆ ಎಂದು ಆರೋಪಿಸಿದರು.
ಕ್ರೀಡಾಳುಗೆ ಅಪಮಾನ: ಕೋಲಾಟ ಸ್ಪರ್ಧೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಫೆ. 1ರಂದು ಎಲ್ಲೂರಿಗೆ ಯುವಕ ಮಂಡಳದ 12 ಸದಸ್ಯರನ್ನೊಳಗೊಂಡ ಕಲಾತಂಡ ಭಾಗವಹಿಸಲು ಹೋದಾಗ ಅಲ್ಲಿ ನಮ್ಮ ತಂಡದ ಬದಲಾಗಿ ಬೇರೆ ತಂಡದ ಹೆಸರು ಇರುವ ವಿಷಯ ನಮಗೆ ತಿಳಿಯಿತು. ಇದರಿಂದಾಗಿ ನಾವು ಅಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ, ಇದು ನಾವು ಇಲ್ಲಿ ಮಾಡಿರುವ ತಪ್ಪಲ್ಲ ನಿಮ್ಮ ಜಿಲ್ಲೆಯಲ್ಲಿ ಆಗಿರುವ ತಪ್ಪು ಈ ಕುರಿತು ನಿಮ್ಮ ಜಿಲ್ಲೆಯ ಕ್ರೀಡಾಧಿಕಾರಿಗಳನ್ನು ಸಂಪರ್ಕಿಸುವಂತೆ ನಮ್ಮನ್ನು ಹೊರಹಾಕಿದರು. ಇದರಿಂದಾಗಿ ತಂಡದ ಯುವ ಕಲಾವಿದರ ಮನಸ್ಸಿಗೆ ನೋವಾಗಿದೆ. ಪ್ರತಿಭೆಗಳನ್ನು ಗುರುತಿಸಬೇಕಾದ ಇಲಾಖೆ ಇಂಥ ಅವಘಡ ಮಾಡಬಾರದು ಎಂದು ಒತ್ತಾಯಿಸಿದರು.
ಕೋಲಾಟದ ಫಲಿತಾಂಶ ಕಾಯ್ದಿರಿಸಿ: ಎಲ್ಲೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಯುವಜನ ಮೇಳದ ಕೋಲಾಟದ ಫಲಿತಾಂಶ ಕಾಯ್ದಿರಿಸಬೇಕು. ಇಲ್ಲವಾದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಶಿವಾನಂದ ಯುವಕ ಮಂಡಳದ ಸದಸ್ಯರು ಆಗ್ರಹಿಸಿದರು. ವೆಂಕಪ್ಪ ಗುಗ್ಗಿ, ಶಿವಾನಂದ ಕಲಾದಗಿ, ಶರಣಪ್ಪ ಹಂದಿಗೋಳ, ಶರಣಪ್ಪ ಶಿರಸಂಗಿ, ಹಸನಸಾಬ್ ಹೊಂಗಲ, ಶಿವಾನಂದ ಗದಗಿನ, ಹಸನಸಾಬ್ ಹಾರಿಬಿಡಿ, ಶರೀಫಸಾಬ್ ಔರಾದಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
2012-13ನೇ ಸಾಲಿನ ವಿಭಾಗ ಮಟ್ಟದ ಯುವಜನ ಮೇಳದಲ್ಲಿ ಗದಗ ಜಿಲ್ಲೆಯ 2 ತಂಡಗಳು ಸಮಾನ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ 2 ತಂಡಗಳನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಇಲಾಖೆಯ ಯಾವುದೇ ದುರುದ್ದೇಶವಿಲ್ಲ. ಆದರೆ, ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಸುರಕೋಡ ತಂಡಕ್ಕೆ ಅವಕಾಶ ನೀಡಬೇಕಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕರಿಗೆ ಸುರಕೋಡ ತಂಡ ಪ್ರದರ್ಶನವನ್ನು ಸ್ಪರ್ಧೆಗೆ ಪರಿಗಣಿಸುವಂತೆ ಒತ್ತಾಯಿಸಿ ಫ್ಯಾಕ್ಸ್ ಸಂದೇಶ ಕಳುಹಿಸಲಾಗುವುದು.
-ಕೆ.ಶಂಕರ, ಯುವಜನ ಸೇವಾ ಕ್ರೀಡಾ ಇಲಾಖೆ ಅಧಿಕಾರಿ, ಗದಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.