ಗದಗ

ಮಕ್ಕಳ ಹಾಜರಾತಿ: ಗಮನ ನೀಡಿ

Published On :

ಕನ್ನಡಪ್ರಭ ವಾರ್ತೆ, ರೋಣ, ಫೆ. 5
ತಾಲೂಕಿನ ಸಮಾಜ ಕಲ್ಯಾಣ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ನಿರಂತರ ಗೈರು ಹಾಜರಿದ್ದರೂ ಹಾಜರಾತಿ ಪುಸ್ತಕದಲ್ಲಿ ಮಾತ್ರ ಹಾಜರ್ ಅಂತ ಬರೆಯಲಾಗಿರುತ್ತಿದ್ದು, ಈ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ತಾಪಂ ಉಪಾಧ್ಯಕ್ಷೆ ಶೈಲಜಾ ಯರಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಂಗಳವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಜರುಗಿದ ತಾಲೂಕು ಮಟ್ಟದ ಅಧಿಕಾರಿಗಳ ಕೆಡಿಪಿ ಸಭೆಯಲ್ಲಿ ಪ್ರಶ್ನಿಸಿದರು. ಪಟ್ಟಣದ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ 165 ವಿದ್ಯಾರ್ಥಿಗಳಲ್ಲಿ ನಿತ್ಯವೂ 35ರಿಂದ 40 ವಿದ್ಯಾರ್ಥಿಗಳು ಮಾತ್ರ ಹಾಜರಿರುತ್ತಾರೆ. ಇನ್ನುಳಿದವರು ಯಾಕೆ ಬರುತ್ತಿಲ್ಲ. ಅಧಿಕಾರಿಗಳು ಈ ರೀತಿ ನಿಷ್ಕಾಳಜಿ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಅಧಿಕಾರಿ ಮೇಸ್ತಾ, ನಾನೇನ್ ಮಾಡ್ಬೇಕು ಮೇಡಂ? ಮಕ್ಕಳು ಯಾವಾಗಲೂ ಜಾತ್ರೆ, ಹಬ್ಬ, ಮದುವೆ ಅಂತ ನಿರಂತರ ಗೈರಿರುತ್ತಾರೆ. ಅವರೇನು ಸಣ್ಣ ಮಕ್ಕಳಲ್ಲ ಬಿ.ಇಡಿ., ಪಿ.ಪಿ.ಇಡಿ., ಪದವಿ, ಪಪೂ ಕಾಲೇಜ್ ವಿದ್ಯಾರ್ಥಿಗಳು. ಹಾಸ್ಟೆಲ್ ಬರ್ಬೇಕೋ ಬೀಡಬೇಕೋ ಅನ್ನೋದು ಅವರಿಗೆ ತಿಳಿಬೇಕು. ಗೈರಾದ ವಿದ್ಯಾರ್ಥಿಗಳ ಆಹಾರ ಪದಾರ್ಥದ ಖರ್ಚು ಹಾಕಲು ಬರುವುದಿಲ್ಲ. ಬೇಕಿದ್ರೇ ಹಾಸ್ಟೆಲ್ ಭೇಟಿ ಕೋಡಿ ನಿಮಗೆ ಗೊತ್ತಾಗುತ್ತೆ ಎಂದು  ಉತ್ತರ ನೀಡಿದರು.
ಜಿಪಂ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಕೆ.ಎಲ್. ಕಟ್ಟಿಮನಿ ಮಾತನಾಡಿ, ತಾಲೂಕಿನಲ್ಲಿ ಸದ್ಯಕ್ಕೆ ಯಾವುದೇ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುವದು ಎಂದರು. ತಾಲೂಕಿನಲ್ಲಿ ಕೆಲ ಅಂಗನವಾಡಿಗಳಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ಖಾಲಿ ಇವೆ. ಕೂಡಲೇ ಅವುಗಳನ್ನು ಭರ್ತಿ ಮಾಡುವಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ತಿಪ್ಪವ್ವ ದೊಡ್ಡಮನಿ ಹಾಗೂ ಉಪಾಧ್ಯಕ್ಷೆ ಶೈಲಜಾ ಯರಗೇರಿ ಸಭೆಯಲ್ಲಿದ್ದ ಸಿಡಿಪಿಒ ಬಿ.ಎಸ್. ಮೊಕಾಶಿಯವರಿಗೆ ಸೂಚಿಸಿದರು.
ಉಪಾಧ್ಯಕ್ಷೆ ಶೈಲಜಾ ಯರಗೇರಿ ಮಾತನಾಡಿ, ತಾಲೂಕಿನಲ್ಲಿ ಭಾರತ ನಿರ್ಮಲ ಅಭಿಯಾನ ಹಾಗೂ ಖಾತ್ರಿ ಯೋಜನೆಯಲ್ಲಿ ನಿರ್ಮಿಸಲಾಗುತ್ತಿರುವ ವೈಯಕ್ತಿಕ ಶೌಚಾಲಯ ಬಿಲ್ ಪಾವತಿಸಲು ಕೆಲ ಗ್ರಾಪಂನಲ್ಲಿ ಪಿಡಿಒ ಅಥವಾ ಕಾರ್ಯದರ್ಶಿಗಳು ಶೌಚಾಲಯ ಒಂದಕ್ಕೆ ರು. 500 ಲಂಚ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಕುರಿತು ಯೋಗ್ಯ ಕ್ರಮಕ್ಕೆ ಮುಂದಾಗಬೇಕು ಎಂದರು.
ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ಉಪಾಧ್ಯಕ್ಷೆ ಶೈಲಜಾ ಯರಗೇರಿ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ, ಜಲಾನಯನ ಅಧಿಕಾರಿ ಎಸ್.ಪಿ. ಕಾಶಪ್ಪನವರ, ಎಸ್.ಎನ್. ಕೋತ, ಬಿಇಒ ಡಿ.ಆಯ್. ಅಸುಂಡಿ, ಜಿಪಂ ಎಇಇ ಕೆ.ಎಲ್. ಕಟ್ಟಿಮನಿ, ಆಹಾರ ನಿರೀಕ್ಷಕ ಬಿ.ಡಿ. ಜೋಶಿ, ವಿ.ಎಸ್. ಬಾವಿ, ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.