ಗದಗ

ಜನಾಕರ್ಷಣೆಯ ಜಾನುವಾರು ಜಾತ್ರೆ

Published On :

ಗದಗ: ಗದಗ ತಾಲೂಕಿನ ಬಳಗಾನೂರಿನಲ್ಲಿ ನಡೆದ ಚಿಕೇನಕೊಪ್ಪ ಚನ್ನವೀರ ಶರಣರ ಶ್ರೀಗಳ 19ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದಲ್ಲಿ ಜಾನುವಾರುಗಳಿಗೂ ಜಾತ್ರೆ ಮಾಡುವ ಭಾಗ್ಯ ಒದಗಿ ಬಂದಿತ್ತು.
ಜಾತ್ರೆಗಳು ಮನರಂಜನೆಗೆ ಸೀಮಿತವಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಚಿಕೇನಕೊಪ್ಪ ಶರಣರ ಜಾತ್ರೋತ್ಸವ ವಿಭಿನ್ನ. ಈ ಜಾತ್ರೆ ಗಂಭೀರ ಚಿಂತನೆಗಳಿಗೆ ವೇದಿಕೆ ಒದಗಿಸುತ್ತದೆ. ದೇಶೀ ಕ್ರೀಡೆಗಳಿಗೆ ಪೋಷಣೆ ನೀಡುತ್ತದೆ. ಹಾಗಾಗಿ ಪ್ರತಿವರ್ಷ ಸದ್ಯದ ಪೀಠಾಧಿಪತಿಗಳ ಸಮಾಜೋದ್ಧಾರಕ ಕಳಕಳಿ, ಮುಂದಾಲೋಚನೆ ಪರಿಣಾಮವಾಗಿ ಹತ್ತು-ಹಲವು ಚಿಂತನೆಗಳಿಗೆ ವೇದಿಕೆ ಕಲ್ಪಿಸುತ್ತಿದೆ.
5 ವರ್ಷಗಳಿಂದ: ಜ. 31ರಿಂದ ಫೆ. 7ರ ವರೆಗೆ ತಾಲೂಕಿನ ಬಳಗಾನೂರಿನಲ್ಲಿ ನಡೆಯುತ್ತಿರುವ ಚಿಕೇನಕೊಪ್ಪ ಚನ್ನವೀರ ಶರಣರ ಜಾತ್ರೋತ್ಸವ ವಿಭಿನ್ನವಾಗಿ ನಡೆಸಲಾಗುತ್ತಿದೆ ಎಂಬುದಕ್ಕೆ ಗುರುವಾರ ಜರುಗಿದ ಜಾನುವಾರು ಜಾತ್ರೆ ನಿದರ್ಶನ. 5 ವರ್ಷಗಳಿಂದ ಇಲ್ಲಿ ಜಾನುವಾರು ಜಾತ್ರೆ ಹಮ್ಮಿಕೊಳ್ಳಲಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿಯೇ ವಿಭಿನ್ನ ಜಾತ್ರೋತ್ಸವ ಎನ್ನಬಹುದು.
ವಿವಿಧ ತಳಿ: ಎತ್ತುಗಳಲ್ಲಿಯೇ ವಿಶೇಷ ತಳಿಗಳಾದ ಜವಾರಿ, ಕಿಲಾರಿ, ಮೂಡ್ಲಾ, ಜವಾರಿ, ಸೀಮೆ ಹೀಗೆ ವಿವಿಧ ಬಗೆಯ ಎತ್ತುಗಳು ಜಾತ್ರೆಯಲ್ಲಿ ನೆರೆದ ಸಾವಿರಾರು ಸಂಖ್ಯೆಯ ಭಕ್ತ ಸಮೂಹವನ್ನು ತಮ್ಮತ್ತ ಆಕರ್ಷಿತಗೊಳಿಸುವಲ್ಲಿ ಯಶಸ್ವಿಯಾದವು. ಈ ಜಾನುವಾರು ಜಾತ್ರೆಯಲ್ಲಿ 200ಕ್ಕೂ ಹೆಚ್ಚು ಜೋಡಿ ಎತ್ತುಗಳು ಪಾಲ್ಗೊಂಡಿದ್ದವು.
ಜನಸಾಗರ
ಜಾತ್ರೆ, ಹಬ್ಬಗಳು ಯುವಕರಿಗೆ ಮಾತ್ರ ಸೀಮಿತ ಎಂಬ ಮಾತಿಗೆ ಅಪವಾದ ಎನ್ನುವಂತೆ ಚಿಕೇನಕೊಪ್ಪ
ಶರಣರ ಜಾತ್ರಾ ಮಹೋತ್ಸವ ಎಲ್ಲ ವಯಸ್ಸಿನ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಜಾತ್ರೆಯಲ್ಲಿ ನಡೆಯುವ ಈ ಜಾನುವಾರು ಜಾತ್ರೆಗಳನ್ನು ವೀಕ್ಷಿಸಲೆಂದೇ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬರುವುದು ವಿಶೇಷ. ಗದಗ ಜಿಲ್ಲೆಯಲ್ಲದೇ ಬಾಗಲಕೋಟೆ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಬಿಜಾಪುರ, ಗುಲ್ಬರ್ಗ ಜಿಲ್ಲೆಗಳಿಂದ ಈ ಜಾತ್ರೆಗೆ ಆಗಮಿಸಿದ್ದರು.

ನಾವ್ ಈ ಜಾತ್ರಿಗೆ 4-5 ವರ್ಷದಿಂದ ಬರ್ತಾ ಇದೀವ್ರಿ. ಇಲ್ಲಿ ದನದ್ ಸಂತಿ ಬಾಳ್ ಚಲೋ ಆಗ್‌ತೈತ್ರಿ. ಇಲ್ಲಿ ಬ್ಯಾರೆ ಜಿಲ್ಲಾದಾಗಿಂದ ದನಾ ಇಲ್ಲಿ ಬರ್ತಾವ್. ಜಾತ್ರಿ ಅಂದ್ರ ಬರೇ ತೇರ್ ಎಳೆದ, ಪೂಜೆ ಮಾಡೋದ ಅಷ್ಟ ಎಂದ ತಿಳ್ಕೊಂಡಿದ್ವಿ. ಆದ್ರ ಇಲ್ಲಿ ಜಾತ್ರಿ ಜತಿ ಎತ್ತಿನ ಜಾತ್ರಿ ಮಾಡೋದ ನೋಡಿ ನಮಗ ಬಾಳ ಖುಷಿ ಆಗೈತ್ರಿ.
-ಬಸಪ್ಪ, ರಾಮಪ್ಪ, ಪ್ರಕಾಶ,
ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು
ಗ್ರಾಮೀಣ ಭಾಗದ ರೈತರಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ 5 ವರ್ಷಗಳಿಂದ ಜಾನುವಾರು ಜಾತ್ರೆಯನ್ನು ಈ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಜಿಲ್ಲೆ ಅಲ್ಲದೇ ಹೊರ ಜಿಲ್ಲೆಗಳಿಂದ ರೈತರು ಈ ಜಾತ್ರೆಗೆ ಆಗಮಿಸುವುದರ ಜತೆಗೆ ತಮಗೆ ಬೇಕಾದ ತಳಿಯ ಎತ್ತುಗಳನ್ನು ಕೊಂಡುಕೊಳ್ಳಲು ಸಹಕಾರಿಯಾಗಿದೆ.
-ಶಿವಶಾಂತವೀರ ಶ್ರೀಗಳು,
ಚಿಕೇನಕೊಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.