ಗದಗ

ಶರಣರ ಬದುಕು ಅರ್ಥೈಸಿಕೊಳ್ಳುವಂತಾಗಲಿ

Published On :

ಗದಗ: ಶರಣರು, ಸಂತರು ತಿಳಿಸುವ ಸಂದೇಶಗಳನ್ನು ಜನಸಾಮಾನ್ಯರು ಅರ್ಥೈಸಿಕೊಂಡು ಅವರ ಆದರ್ಶಗಳ ಪಾಲನೆಗೆ ಮುಂದಾಗಬೇಕು ಎಂದು ಮುಂಡರಗಿ ಸಂಸ್ಥಾನಮಠದ ನಾಡೋಜ ಡಾ. ಅನ್ನದಾನ ಶ್ರೀಗಳು ಹೇಳಿದರು.
ಗುರುವಾರ ತಾಲೂಕಿನ ಬಳಗಾನೂರು ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ 19ನೇ ಪುಣ್ಯಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹ ಕಲ್ಯಾಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶರಣರು, ಸಂತರು ಉದಯಿಸಿರುವುದೇ ಲೋಕಕಲ್ಯಾಣಕ್ಕಾಗಿ. ಜಗತ್ತಿನಲ್ಲಿ ಎಂದು ಅನ್ಯಾಯ, ಅಹಿಂಸೆ, ಅಧರ್ಮ ಹೆಚ್ಚಾಗುತ್ತದೆಯೋ ಅಂದು ದೈವಸ್ವರೂಪದ ಮಾನವರು ಜನ್ಮ ತಳೆದು ಜಗತ್ತಿನಲ್ಲಿನ ಕಲ್ಮಶ, ಪಾಪವನ್ನು ಕಳೆಯುವ ಕಾರ್ಯ ಮಾಡುವರು. ನಮ್ಮ ಹಿರಿಯರು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಜಾತ್ರೆ, ಪುಣ್ಯಸ್ಮರಣೋತ್ಸವಗಳು ಜನರಲ್ಲಿ ಸದ್ಭಾವನೆ ತುಂಬುವುದು, ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸುವುದಾಗಿದೆ. ಚಿಕೇನಕೊಪ್ಪದ ಚನ್ನವೀರ ಶರಣರು ಕೇವಲ ಜನರಲ್ಲಿ ಸಂಸ್ಕೃತಿ, ಪಾಪ, ಪುಣ್ಯಗಳ ಕುರಿತು ಜಾಗೃತಿ ಮಾಡಿಸುವುದು ಅಷ್ಟೇ ಅಲ್ಲದೇ ಶಿಕ್ಷಣ ಸಂಸ್ಥೆಗಳನ್ನು ತೊರೆದು ಶೈಕ್ಷಣಿಕ ಕ್ರಾಂತಿ ಜರುಗಿಸಿರುವುದು ಅಭಿನಂದನಾರ್ಹವಾಗಿದೆ ಎಂದರು.
ಮಠಗಳಲ್ಲಿ ರಾಜಕೀಯ ಬೇಡ: ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ಕಲ್ಮಠದ ಡಾ. ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಇಂದು ಮಾನವ ನಶ್ವರ ಸಂಪತ್ತುಗಳಿಗೆ ಆಸೆಪಡುತ್ತಿದ್ದಾನೆ. ಇದರಿಂದಾಗಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ. ಇಂದು ಮಠಮಾನ್ಯಗಳಲ್ಲಿ ರಾಜಕೀಯದ ಗಾಳಿ ಬೀಸುತ್ತಿರುವುದು ನೋವಿನ ಸಂಗತಿ. ರಾಜ್ಯದಲ್ಲಿ ಮಠಮಾನ್ಯಗಳು ಇಲ್ಲದೇ ಇದ್ದಲ್ಲಿ ಕರ್ನಾಟಕ ರಾಜ್ಯವು 2ನೇ ಬಿಹಾರ ಆಗುತ್ತಿತ್ತು. ಶರಣರ, ಸಂತರ ಸಂದೇಶಗಳು ಜೀವನಕ್ಕೆ ಮಾದರಿಯಾಗಿವೆ. ಕೆಲವು ಕಡೆಗಳಲ್ಲಿ ಜಾತಿಯ ಮಠ-ಮಠಾದೀಶರು ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಇಂತಹ ಪದ್ಧತಿಗಳು ನಿಲ್ಲಬೇಕು. ಶಿವಶಾಂತವೀರ ಶ್ರೀಗಳು ಚನ್ನವೀರ ಶ್ರೀಗಳ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ: ಮುದಗಲ್ಲ ಕಲ್ಯಾಣಾಶ್ರಮದ ಚನ್ನಮಲ್ಲ ಶ್ರೀಗಳು ಮಾತನಾಡಿ, ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಆಧ್ಯಾತ್ಮಿಕತೆ, ಶ್ರೀಗಳ ಆದರ್ಶವಾಣಿ, ಸಂದೇಶಗಳ ಪಾಲನೆಯ ಸಂಖ್ಯೆ ಕ್ಷೀಣಿಸುತ್ತಿದೆ. ಜಾತ್ರೆಗಳು, ವಿಚಾರಗೋಷ್ಠಿಗಳಿಗೆ ಕೊರತೆಯಿಲ್ಲ. ಆದರೆ, ಕೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರಿಂದ ದೇಶದ ಸಂಸ್ಕೃತಿಯು ಹಾಳಾಗುವ ಆತಂಕವಿದೆ. ಕಾರಣ ಎಲ್ಲ ಜನರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಚಿಜ್ಯೋತಿ-ಸತ್‌ಕಿರಣ ಬಿಡುಗಡೆ: ಚಿಕೇನುಕೊಪ್ಪದ ಶಿವಶಾಂತವೀರ ಶ್ರೀಗಳು ಆಶೀರ್ವಚನ ನೀಡಿದರು. ಸಾಹಿತಿ ಡಾ. ಸಂಗಮೇಶ ಹಂಡಗಿ ಅವರು ರಚಿಸಿದ ಚಿಜ್ಯೋತಿ-ಸತ್‌ಕಿರಣ ಎಂಬ ಪುಸ್ತಕವನ್ನು ನಾಡೋಡ ಡಾ. ಅನ್ನದಾನ ಶ್ರೀಗಳು ಬಿಡುಗಡೆಗೊಳಿಸಿದರು. ನಂತರ ಚಿಕೇನಕೊಪ್ಪದ ಶಿವಶಾಂತವೀರ ಶ್ರೀಗಳ ತುಲಾಭಾರ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ನರಗುಂದ ತಾಲೂಕಿನ ಕೊಣ್ಣೂರಿನ ಜೈಕಿಸಾನ ಕಲಾತಂಡಕ್ಕೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಪೂರ್ವದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ 52 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಅಲ್ಲದೇ ಜಾತ್ರೋತ್ಸವದ ನಿಮಿತ್ತ ಜಾನುವಾರುಗಳ ಜಾತ್ರೆ ಆಕರ್ಷಣೀಯವಾಗಿತ್ತು. ರಾಜ್ಯವಲ್ಲದೇ ಹೊರರಾಜ್ಯದಿಂದ ವಿವಿಧ ತಳಿಗಳ ಎತ್ತುಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಹಿರೇಮಾಗಡಿಯ ವಿರಕ್ತಮಠದ ಶಿವಮೂರ್ತಿ ಮುರುಘರಾಜೇಂದ್ರ ಶ್ರೀಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.