ಮನಸ್ಸು ಅರಳಿಸುವ ಸಾಹಿತ್ಯ ಹೊರಬರಲಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 7
ಸಾಹಿತ್ಯ ಮಕ್ಕಳಲ್ಲಿ ಮಾನಸಿಕ, ಬೌದ್ಧಿಕ ಹಾಗೂ ಸೃಜನಾತ್ಮಕತೆ ಬೆಳಸುವ ಕಾರ್ಯವನ್ನು ಮಾಡಬೇಕಾಗಿದೆ. ಮಕ್ಕಳ ಮನಸ್ಸನ್ನು ಹೊಸಕಿ ಹಾಕುವ ಸಾಹಿತ್ಯ ನಮಗೆ ಬೇಡ ಎಂದು ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಹೇಳಿದರು.
ಸಮೀಪದ ಶಿಗ್ಲಿಯ ಪರಮೇಶ್ವರಪ್ಪ ಬಳಿಗಾರ ಪಪೂ ಕಾಲೇಜಿನಲ್ಲಿ ಗುರುವಾರ ಜರುಗಿದ ಡಾ. ಆಶಾ ತೋಟದ ಹಾಗೂ ಡಾ. ಎಸ್.ಸಿ. ಮಲ್ಲಾಡದ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಸಾಹಿತ್ಯ ಕುರಿತು ಶಿಕ್ಷಕ ಕೊತ್ತಲ ಮಹಾದೇವಪ್ಪ ಮಾತನಾಡಿ, ಮಕ್ಕಳ ಸಾಹಿತ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸುವ ಕಾರ್ಯವನ್ನು ಹಿರಿಯರು ಮಾಡಬೇಕಾಗಿದೆ. ಮಕ್ಕಳ ಮನಸ್ಸನ್ನು ಕೆರಳಿಸುವ ಸಾಹಿತ್ಯ ಬೇಡ ನಮಗೆ. ಮಕ್ಕಳು ತಮ್ಮ ಬಾಲ್ಯದ ದಿನಗಳಲ್ಲಿ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಳ್ಳುವತ್ತ ಹೆಜ್ಜೆ ಹಾಕಬೇಕಾಗಿದೆ. ಸರ್ಕಾರ ಮಕ್ಕಳ ಸಾಹಿತ್ಯ ಪ್ರಕಟಣೆಗೆ ಮುಂದಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ರಾಜಕೀಯದಲ್ಲಿ ಮಹಿಳೆ ಎನ್ನುವ ವಿಷಯ ಕುರಿತು ರಾಜೇಶ್ವರಿ ಪಾಟೀಲ ಮಾತನಾಡಿ, ಸಮಾಜ ಸೇವೆ ಮಾಡುವ ಗುರಿಯೊಂದಿಗೆ ಮಹಿಳೆಯರು ರಾಜಕೀಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬರಬೇಕಾಗಿದೆ ಹಾಗೂ ಬೆಳೆಯಬೇಕಾಗಿದೆ. ರಾಜಕೀಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ನಿಜ. ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅದನ್ನು ತೊಡೆದುಹಾಕಲು ಸಾಧ್ಯ. ಕೇವಲ ಹೊರಗೆ ನಿಂತು ಒಳಗಿರುವ ಕೊಳೆಯನ್ನು ತೊಳೆಯಲು ಸಾಧ್ಯವಿಲ್ಲ. ಅದಕ್ಕಾಗಿ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಬೇಕಾಗಿದೆ. ದೇಶದಲ್ಲಿ ಈಗ ಕೃಷಿ ಸಾಕಷ್ಟು ಅವಗಣೆಗೆ ಒಳಗಾದ ಕ್ಷೇತ್ರವಾಗಿದೆ. ದೇಶಕ್ಕೆ ಅನ್ನ ಹಾಕುವವರನ್ನು ಸರ್ಕಾರಗಳು ಕೀಳು ದೃಷ್ಟಿಯಿಂದ ನೋಡುವುದು ನಿಲ್ಲಬೇಕು ಎಂದರು. ನ್ಯಾಯವಾದಿ ಎಸ್.ಪಿ. ಬಳಿಗಾರ. ಪ್ರಾ. ಎನ್.ವಿ. ಮುಧೋಳ ಮಾತನಾಡಿದರು. ಹಿರಿಯ ಸಾಹಿತಿ ಕೆ.ಎಂ. ಸುಂಕದ, ಉಪನ್ಯಾಸಕ ಎಸ್.ಬಿ. ಪೂಜಾರ, ಹೇಮಾದ್ರಿ ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಅಶೋಕ ಸೊರಟೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹಣಗಿ ಸ್ವಾಗತಿಸಿದರು. ಶಿಕ್ಷಕ ಎನ್.ವೈ. ಕುರಿ ನಿರೂಪಿಸಿದರು. ಜೆ.ಎಸ್. ರಾಮಶೆಟ್ಟರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

