ಗದಗ

ಅಧಿಕಾರಿಗಳ ಗೈರು: ತಾಪಂ ಸಭೆ ಗೊಂದಲ ಗೂಡು

Published On :

ಕನ್ನಡಪ್ರಭ ವಾರ್ತೆ, ರೋಣ, ಫೆ. 7
ವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಪದೇ ಪದೇ ಗೈರಾಗುತ್ತಿರುವುದರಿಂದ ಆಕ್ರೋಶಗೊಂಡ ತಾಪಂ ಸದಸ್ಯರು, ಕಾಟಾಚಾರಕ್ಕೆ ಸಭೆ ನಡೆಸುವುದು ಸಮಂಜಸವಲ್ಲ. ಇಂತಹ ಸಭೆಗಳು ನಮಗೆ ಬೇಡ ಎಂದು ಸಭೆಯುದ್ಧಕ್ಕೂ ಆಗಾಗ್ಗೆ ತಕರಾರು ತೆಗೆಯುತ್ತ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿಯವರನ್ನು ತೀವ್ರ ತರಾಟೆಗೆ ತಗೆದುಕೊಂಡರು.
ಹೀಗಾಗಿ, ಶುಕ್ರವಾರ ತಾಪಂ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯು ಕೇವಲ ಗದ್ದಲ, ಹಾಸ್ಯಾಸ್ಪದ ಸನ್ನಿವೇಶಗಳ ಮಧ್ಯೆ ಗೊಂದಲದ ಗೂಡಾಗಿ ಮಾರ್ಪಟ್ಟಿತು.
ಸಭೆ ಪ್ರಾರಂಭವಾಗುತ್ತಿದಂತೆ ಸದಸ್ಯರ ಸಹಿ ಸಂಗ್ರಹಿಸಲಾದ ಹಾಜರು ಪುಸ್ತಕದಲ್ಲಿ ಕಳೆದ 8 ತಿಂಗಳ ಹಿಂದೆ ನಿಧನರಾದ ಹುನಗುಂಡಿ ತಾಪಂ ಸದಸ್ಯ ಎಲ್.ಬಿ. ಜಂಗಣ್ಣವರ ಹೆಸರು ಈಗಲು ಇದ್ದದ್ದನ್ನು ಕಂಡು ಸದಸ್ಯರು ಆಶ್ಚರ್ಯ ವ್ಯಕ್ತಪಡಿಸಿದರು. ಇದರಿಂದ ಹುನಗುಂಡಿ ತಾಪಂಗೆ ನೂತನವಾಗಿ ಆಯ್ಕೆಗೊಂಡ ಸದಸ್ಯ ಬಸನಗೌಡ ಶಿರಗುಂಪಿಯವರ ಆಕ್ರೋಶ ವ್ಯಕ್ತಪಡಿಸಿ, ನನಗೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಲು ಈ ರೀತಿ ಮಾಡಲಾಗುತ್ತಿದೆ. ಕಳೆದ 2 ಸಭೆಯಲ್ಲಿಯೂ ಇದೇ ರೀತಿಯಾಗಿ ಹೆಸರಿದ್ದನ್ನು ಇಒ ಗಮನಕ್ಕೆ ತಂದರೂ ಕ್ರಮಕ್ಕೆ ಮುಂದಾಗಿಲ್ಲ. ಹಾಜರಿ ಪುಸ್ತಕದಲ್ಲಿ ಸಹಿ ಮಾಡು ಎಂದರೆ ಎಲ್ಲಿ ಮಾಡಬೇಕು ಎಂದು ಇಒ ಎಸ್.ಎಂ. ಪಿಡಶೆಟ್ಟಿಯವರನ್ನು ತೀವ್ರ ತರಾಟೆಗೆ ತಗೆದುಕೊಂಡರು.
ಆಗ ಇಒ ಪಿಡಶೆಟ್ಟಿ ಮಾತನಾಡಿ, ಇದು ನನ್ನಿಂದಾದ ತಪ್ಪಲ್ಲ. ನಮ್ಮ ಕಚೇರಿ ಸಿಬ್ಬಂದಿ ಮಾಡಿದ ಎಡವಟ್ಟು. ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ, ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಸದಸ್ಯ ಅಂದಪ್ಪ ಬಿಚ್ಚೂರ, ಶಿವಕುಮಾರ ನೀಲಗುಂದ ಮಾತನಾಡಿ, ವಲಯ ಅರಣ್ಯ ಅಧಿಕಾರಿ ಬೀಳಗಿಯವರು ಉದ್ದೇಶಪೂರ್ವಕವಾಗಿ ಕಳೆದ ಮೂರು ವರ್ಷಗಳಿಂದ ಸಭೆಗೆ ಗೈರಾಗುತ್ತಿರುವ ಕುರಿತು ಮತ್ತು ಸೂಕ್ತ ಕ್ರಮ ಜರುಗಿಸುವಂತೆ ಕಳೆದ 5-6 ಸಭೆಯಲ್ಲಿ ಠರಾವು ಮಾಡಿ ಒತ್ತಾಯಿಸಲಾಗಿದೆ. ಆದರೂ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ಪರ ವಹಿಸಿ ತಾಪಂ ಇಒ ಪಿಡಶೆಟ್ಟಿ ಮಾತನಾಡುತ್ತಿರುವುದು ಖಂಡನಾರ್ಹವಾಗಿದೆ. ಪ್ರತಿಯೊಂದು ಸಭೆಗೂ 8-10 ಇಲಾಖೆ ಅಧಿಕಾರಿಗಳು ಗೈರಾಗುತ್ತಾರೆ. ಕ್ರಮ ಕೈಗೊಳ್ಳಲು ಆಗ್ರಹಿಸಿದ ಜನಪ್ರತಿನಿಧಿಗಳ ಮಾತಿಗೆ ಬೆಲೆ ನೀಡದೆ ಈ ರೀತಿ ಸಭೆಯಲ್ಲಿ ಅವಮಾನ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ನೂರಾರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸಮರ್ಪಕ ಬಳಕೆಯಿಲ್ಲದೆ ಕಂಪ್ಯೂಟರ್‌ಗಳು ಧೂಳು ಹಿಡಿದಿದ್ದು, ಹಾಳಾಗಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳ ನಿಷ್ಕಾಳಜಿಯಿಂದ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವಲ್ಲಿ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ತಾಪಂ ಉಪಾಧ್ಯಕ್ಷೆ ಶೈಲಜಾ ಯರಗೇರಿ, ಸ್ಥಾಯಿ ಸಮಿತಿ ಚೇರ್‌ಮನ್ ರೇಣುಕಾ ಹಟ್ಟಿಮನಿ, ಸದಸ್ಯರಾದ ಅಂದಪ್ಪ ಬಿಚ್ಚೂರ, ಶಿವಕುಮಾರ ನೀಲಗುಂದ, ಮಾಲನಬೀ ಗಡಾದ, ಧರ್ಮಣ್ಣ ಭೂಸಗೌಡ್ರ, ಬಸವರಾಜ ಮಲ್ಲಾಪುರ, ಶಾಂತವ್ವ ಬೆಳಹಾರ  ಬಿಇಒ ಡಿ.ಐ. ಅಸುಂಡಿಯವರನ್ನು ಒತ್ತಾಯಿಸಿದರು.
ಆಗ ಡಿ.ಐ. ಅಸುಂಡಿ ಮಾತನಾಡಿ, ರಾಜ್ಯದಲ್ಲಿಯೇ ಕಂಪ್ಯೂಟರ್ ಶಿಕ್ಷಕರ ಸಮಸ್ಯೆಯಿದೆ. ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಈಗಾಗಲೇ ಸಹ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಪ್ರತ್ಯೇಕವಾಗಿ ಕಂಪ್ಯೂಟರ್ ಶಿಕ್ಷಕರನ್ನು ನೇಮಿಸುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಜಲಾನಯನ, ಆರೋಗ್ಯ, ಕೃಷಿ, ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ, ಭೂಸೇನಾ ನಿಗಮ, ನಿರ್ಮಿತ ಕೇಂದ್ರ, ರೇಷ್ಮೆ ಇಲಾಖೆ, ಪಶು ವೈದ್ಯಕೀಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದರು.
ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡೇರ, ಉಪಾಧ್ಯಕ್ಷೆ ಶೈಲಜಾ ಯರಗೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ ಹಟ್ಟಮನಿ, ಸದಸ್ಯ ಅಂದಪ್ಪ ಬಿಚ್ಚೂರ, ಗಾಯತ್ರಿ ನಾಗನೂರ, ಶಾಂತಾ ಬೆಳಹಾರ, ಬಸವರಾಜ ಮಲ್ಲಾಪುರ, ಬಸನಗೌಡ ಶಿರಗುಂಪಿ, ಲಲಿತಾ ಪೂಜಾರ, ಸುಮಂಗಲಾ ಹಿರೇಮಠ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.