ಕಳಸಾ ಬಂಡೂರಿಗೆ ಬಿಜೆಪಿ ಅಡ್ಡಗಾಲು
ಕನ್ನಡಪ್ರಭ ವಾರ್ತೆ, ನರಗುಂದ, ಫೆ. 7
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನೀರಾವರಿ ಸಚಿವರಾಗಿದ್ದ ಎಚ್.ಕೆ. ಪಾಟೀಲರು ಕಳಸಾ ಬಂಡೂರಿಗೆ ರು. 100 ಕೋಟಿಯಲ್ಲಿ ಕಾಮಗಾರಿ ಪ್ರಾರಂಭಿಸುವ ಹಂತದಲ್ಲಿ ಬಿಜೆಪಿಯವರೇ ಅದಕ್ಕೆ ಅಡ್ಡಿಯಾಗಿದ್ದರು. ಹೀಗಾಗಿ, ಈ ಯೋಜನೆ ವಿಳಂಬವಾಯಿತು ಎಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಈಚೆಗೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾತನಾಡಿದರು. ನಾನು ಕಳಸಾ ಬಂಡೂರಿ ವಿರೋಧಿ ಅಲ್ಲ. ಕೆಲ ರಾಜಕೀಯ ಪಕ್ಷದವರು ಈ ರೀತಿ ಜನರಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಈ ಯೋಜನೆ ಪೂರ್ಣಗೊಳ್ಳುತ್ತಿತ್ತು. ಆದರೆ ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಅದಕ್ಕೆ ಅಡ್ಡಿಯಾದರು. ಮುಂದೆ ಇವರು ಈ ಯೋಜನೆಯನ್ನು ಕೇವಲ 6 ತಿಂಗಳಲ್ಲಿ ಮುಗಿಸುತ್ತೇವೆ ಎಂದು ಹೇಳಿ 10 ವರ್ಷವಾದರೂ ಕಾಮಗಾರಿ ಮುಗಿಸಲಿಲ್ಲ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಮಾಜಿ ಶಾಸಕ ಸಿ.ಸಿ. ಪಾಟೀಲ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಶಾಸಕರ ಮಕ್ಕಳು ಆಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರ. ಈ ಹಿಂದೆ ಸಿ.ಸಿ. ಪಾಟೀಲ ಶಾಸಕರಾಗಿದ್ದಾಗ ಅವರ ಪಿಎ ನಾಗರಾಜ ಮತ್ತು ಸಂಬಂಧಿಕರು ದುರಾಡಳಿತ ಮಾಡಿದ್ದರಿಂದಲೆ ಅವರನ್ನು ಈಚೆಗೆ ಜರುಗಿದ ಚುನಾವಣೆಯಲ್ಲಿ ಜನತೆ ತಿರಸ್ಕರಿಸಿದ್ದಾರೆ ಎಂದರು.
ಪುರಸಭೆಗೆ ಆಡಳಿತ ಮಂಡಳಿ ನೇಮಕವಾಗಿದ್ದರಿಂದ ಅದಕ್ಕೆ ಉಪವಿಭಾಗಾಧಿಕಾರಿ ಮತ್ತು ನಾನು ಸೇರಿ 22.75ರ ಪರಿಶಿಷ್ಟ ಜಾತಿ, ಪಂಗಡ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೇವೆ. ಆದರೆ, ಮಾಜಿ ಶಾಸಕರು ಪುರಸಭೆಯ ಅಧಿಕಾರಿಯನ್ನು ಮನೆಗೆ ಕರೆಯಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಂವಿಧಾನಕ್ಕೆ ವಿರೋಧ ಎನ್ನುವುದು ಇವರಿಗೆ ತಿಳಿದಿರಲಿ ಎಂದರು.
ಈ ಸಂದರ್ಭದಲ್ಲಿ ಚಂಬಣ್ಣ ವಾಳದ, ಗುರುಪಾದಪ್ಪ ಕುರಹಟ್ಟಿ, ತೀರ್ಥಗೌಡ ಪಾಟೀಲ, ಎಸ್.ಬಿ. ದಂಡಿನ, ದ್ಯಾಮಣ್ಣ ಸವದತ್ತಿ, ಪುರಸಭೆ ಸದಸ್ಯ ಸಿ.ಬಿ.ಪಾಟೀಲ, ವಂಕರಡ್ಡಿ ದೇವರಡ್ಡಿ, ಮಹೇಶ ಬಡಿಗೇರ, ಎಂ.ಬಿ. ಪಾಟೀಲ, ಪ್ರವೀಣ ಯಾವಗಲ್, ವೆಂಕರಡ್ಡಿ ಮೇಟಿ, ಶಂಕರಗೌಡ ಕಗದಾಳ, ಹನುಮಂತ ಶಿಂದೆ, ಮಕ್ತುಮ್ಸಾಬ ಸಾವಟಿಗೆ, ಎಸ್.ಎಸ್. ಬಾಳನಗೌಡ್ರ, ಎಂ.ಬಿ. ಘಟನೂರ, ಚಿಕ್ಕನರಗುಂದ ಗ್ರಾಪಂ ಅಧ್ಯಕ್ಷ ಎಸ್.ಆರ್. ಪಾಟೀಲ, ಫಕೀರಪ್ಪ ಜೋಗಣ್ಣವರ, ಎಸ್.ಕೆ. ದಂಡಾಪುರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

