ಗದಗ

ಶಿಕ್ಷಣದಿಂದ ಪರಿಪೂರ್ಣ ಜೀವನ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 8
ಪಾಲಕರು ಮಕ್ಕಳಿಗೆ ಒತ್ತಡ ಪೂರ್ವಕ ಶಿಕ್ಷಣ ನೀಡುತ್ತಿದ್ದು, ಪೈಪೋಟಿ ಎದುರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮಾಯವಾಗಿದೆ. ಶೈಕ್ಷಣಿಕ ಅರ್ಹತೆ ಒಂದು ಹಂತದ ವರೆಗೆ ಪ್ರತಿಯೊಬ್ಬರಿಗೂ ಮುಖ್ಯ ವಸ್ತು. ಇದರಿಂದ ಜೀವನದ ಶ್ರೇಯಸ್ಸಿಗೆ ಸಹಕಾರಿಯಾಗಬಹುದು ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಶುಕ್ರವಾರ ತಾಲೂಕಿನ ಛಬ್ಬಿ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ರು. 73.75 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬ ಪ್ರಜೆ ಶಿಕ್ಷಣ ಪಡೆಯಬೇಕು. ಶಿಕ್ಷಣ ಸಾರ್ವತ್ರೀಕರಣವಾಗಿದ್ದರೂ ಅನೇಕರು ವಂಚಿತರಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಸರ್ಕಾರ ಶಿಕ್ಷಣ ಮಗುವಿನ ಹಕ್ಕು ಎಂಬ ಕಾಯ್ದೆಯನ್ನು ರೂಪಿಸಿದ್ದು, ಸ್ವಯಂ ಪ್ರೇರಿತರಾಗಿ ಗುಣಾತ್ಮಕ ಶಿಕ್ಷಣ ಪಡೆಯಲು ಮುಂದಾಗಬೇಕು. ಸಮಾಜದ ಸ್ವಾಸ್ಥ್ಯ ಕಾಪಾಡಲು ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವುದು. ಬಾಲ ಕಾರ್ಮಿಕ ಪದ್ದತಿ ತಪ್ಪಿಸುವ ಸಲುವಾಗಿ ಶೈಕ್ಷಣಿಕ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ, ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದರು.
ಆರ್‌ಎಂಎಸ್‌ಎ ಯೋಜನೆ ಅಡಿಯಲ್ಲಿ ಶಿರಹಟ್ಟಿ ವಿಧಾನ ಸಭಾ ಮತಕ್ಷೇತ್ರದಲ್ಲಿ ರು. 22 ಕೋಟಿ ಅನುದಾನದಲ್ಲಿ ಒಟ್ಟು 19 ಶಾಲೆಗಳು ಮಂಜೂರಾಗಿದ್ದು, ಬಹುತೇಕ ಕಡೆಗಳಲ್ಲಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ದೂರುಗಳು ಕೇಳಿ ಬರುತ್ತಿವೆ. ಗುತ್ತಿಗೆದಾರರು ಜವಾಬ್ದಾರಿ ಅರಿತು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವ ಸಂಬಂಧಪಟ್ಟ ಅಭಿಯಂತರು ಮೇಲಿಂದ ಮೇಲೆ ಕಾಮಗಾರಿಯ ಗುಣಮಟ್ಟ ಪರಿಶೀಲನೆ ನಡೆಸುವ ಜತೆಗೆ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರತ್ಯೇಕ ಹಾಸ್ಟೆಲ್, ವಸತಿ ಶಾಲೆ, ಸಮವಸ್ತ್ರ, ಬ್ಯಾಗ್, ಪುಸ್ತಕ, ಬಿಸಿಯೂಟ, ಕ್ಷೀರ ಭಾಗ್ಯ, ಸೈಕಲ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್, ಬಸವರಾಜ ಮುಂಡವಾಡ ಮಾತನಾಡಿದರು.
ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ, ಗ್ರಾಪಂ ಅಧ್ಯಕ್ಷ ಹನುಮಂತಗೌಡ ಪಾಟೀಲ, ಉಪಾಧ್ಯಕ್ಷೆ ದೇವಕ್ಕ ಕಾರಬಾರಿ, ಸದಸ್ಯ ದೇವಪ್ಪ ಲಮಾಣಿ, ಪಿಎಸ್‌ಐ ಆರ್.ಎಚ್. ಕಟ್ಟಿಮನಿ, ಈರಣ್ಣ ಕೊಡ್ಲಿವಾಡ, ಸುಧೀರ ಕುಬೇರ, ಎಂ.ಎಸ್. ಪೋತರಾಜ, ನಿಂಗನಗೌಡ ಪಾಟೀಲ, ವಿ.ಸಿ. ಚಕ್ರಸಾಲಿ, ಬಸಪ್ಪ ಶಿರಗೂರ, ಮರಿಯಪ್ಪ ಮ್ಯಾಗೇರಿ, ಗಂಗಪ್ಪ ಪವಾರ, ಬಸಣ್ಣ ಅಡರಕಟ್ಟಿ, ಪಾಂಡಪ್ಪ ಲಮಾಣಿ, ನಾಗರಾಜ ಪೋತರಾಜ ಇದ್ದರು.
ಶರಣಪ್ಪ ಅಣ್ಣಿಗೇರಿ ಸ್ವಾಗತಿಸಿದರು. ಎಂ.ಎಚ್. ಪೋತರಾಜ ನಿರೂಪಿಸಿದರು. ಹನುಮಂತ ಪವಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.