ಗದಗ

ತರಾತುರಿಯಲ್ಲಿ ನೀರಿನ ಟ್ಯಾಂಕ್ ಕಾಮಗಾರಿ

Published On :

ಶಿರಹಟ್ಟಿ: ರಾಷ್ಟ್ರೀಯ ಗ್ರಾಮೀಣ ಕುಡಿವ ನೀರು ಯೋಜನೆ ಅಡಿಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 135 ಅಂಗನವಾಡಿ ಕೇಂದ್ರಗಳಿಗೆ ಕುಡಿವ ನೀರು ಪೂರೈಕೆ ಮಾಡಲು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಡಿ ಶಿರಹಟ್ಟಿ ತಾಲೂಕಿನಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಜಿಪಂ ಮತ್ತು ತಾಪಂ ಸದಸ್ಯರೇ ಒಪ್ಪಂದ ಪತ್ರ ಮಾಡಿಕೊಂಡು (ಅಗ್ರಿಮೆಂಟ್) ತಮಗೆ ಬೇಕಾದ ಗುತ್ತಿಗೆದಾರರ ಹೆಸರಿನಲ್ಲಿ ಕಾಮಗಾರಿ ಮಾಡುತ್ತಿದ್ದು, ಇದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ಕೇಳಿ ಬರುತ್ತಿದೆ.
ಜಿಪಂ ಇಲಾಖೆ ಅಧಿಕಾರಿಗಳ ಗಮನಕ್ಕೆ ತರದೆ ಚುನಾಯಿತ ಜಿಪಂ, ತಾಪಂನ ಕೆಲ ಸದಸ್ಯರು ತಮ್ಮ ಅಧಿಕಾರದ ದರ್ಪದಿಂದ ಅಂಗನವಾಡಿ ಕೇಂದ್ರದ ಎದುರು ಗಡೆ ಅಥವಾ ಪಕ್ಕದಲ್ಲಿ ಸಣ್ಣ ಗುಂಡಿ ತೋಡಿ ರು. 50 ಸಾವಿರ ವೆಚ್ಚದಲ್ಲಿ 500 ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ವಿಚಿತ್ರವೆಂದರೆ ಸೂರಣಗಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಎದುರೇ ಇರುವ ತಿಪ್ಪೆ ಗುಂಡಿಯಲ್ಲಿ ತಗ್ಗು ತೋಡಿ ಕಾಮಗಾರಿ ಆರಂಭಿದ್ದಾರೆ.
ಅಪಾಯದ ಸಾಧ್ಯತೆ: ಬಹುತೇಕ ಕಡೆಗಳಲ್ಲಿ ಜಿಪಂ ಇಲಾಖೆ ಅಧಿಕಾರಿಗಳ ಗಮನಕ್ಕೂ ತರದೇ ತಮಗೆ ತಿಳಿದ ಜಾಗದಲ್ಲಿ ತಗ್ಗು ತೋಡಿ ಕೈ ಬಿಟ್ಟಿದ್ದು, ಚಿಕ್ಕ ಮಕ್ಕಳು ಈ ತಗ್ಗು ಗುಂಡಿಯಲ್ಲಿ ಬಿದ್ದು, ಜೀವಕ್ಕೆ ಅಪಾಯ ಮಾಡಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಚುನಾಯಿತ ಜನ ಪ್ರತಿನಿಧಿಗಳೇ ಗುತ್ತಿಗೆದಾರರ ಮುಖಾಂತರ ಇಂತಹ ಅನಾಹುತ ಕೆಲಸಕ್ಕೆ ಕೈ ಹಾಕಿರುವುದು ಚರ್ಚೆಯ ವಿಷಯವಾಗಿದೆ.
ಗುಣಮಟ್ಟ ಪರಿಶೀಲಿಸಿ: ಇದೇ ಮಾರ್ಚ್ 31ರೊಳಗಾಗಿ ಎಲ್ಲ ಅನುದಾನ ಬಳಕೆ ಮಾಡಬೇಕೆಂದು ಅಧಿಕಾರಿಗಳಿಗೆ ಒತ್ತಡ ತರುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಇನ್ನು ಕೆಲ ಅಂಗನವಾಡಿ ಕೇಂದ್ರದ ಅಡುಗೆ ಕೋಣೆಯಲ್ಲಿಯೇ ಗುಂಡಿ ತೋಡಿ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಬಿಲ್ ಪಡೆಯಲು ಮುಂದಾಗಿದ್ದು, ಯಾವುದೇ ಅಂಗನವಾಡಿ ಕೇಂದ್ರದಲ್ಲಿ ವಿದ್ಯುತ್ ಅಳವಡಿಸಿಲ್ಲ. ಇದರಿಂದ ಟ್ಯಾಂಕ್ನಲ್ಲಿ ಇರುವ ನೀರನ್ನು ಸಿಂಟ್ಯಾಕ್ಸ್ಗೆ ಏರಿಸಲು ಸಾಧ್ಯವೇ ಇಲ್ಲದಂತಾಗಿದೆ. ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಕಾಮಗಾರಿಯ ಗುಣಮಟ್ಟ ಪರಿಶೀಲನೆ ಮಾಡಬೇಕಾಗಿದೆ.
ಇಲಾಖೆಗೆ ಕಾಮಗಾರಿ ಕೈಗೆತ್ತಿಕೊಂಡಿರುವ ಬಗ್ಗೆ ಇಲ್ಲಿಯ ವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಅಂಗನವಾಡಿ ಶಿಕ್ಷಕಿಯರಿಗೆ ಮೇಲಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ಕಾಮಗಾರಿ ಮಾಡಲು ಪ್ರಾರಂಭಿಸಿದ್ದೇವೆ ಎಂದು ಹೇಳಿ ತಮಗೆ ಇಷ್ಟವಾದ ಸ್ಥಳದಲ್ಲಿ ಗುಂಡಿ ತೋಡಿ ಟ್ಯಾಂಕ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಜಿಪಂ ಇಲಾಖೆ ವತಿಯಿಂದಲೂ ಯಾವುದೇ ಮಾಹಿತಿ ನೀಡಿಲ್ಲ. ಎಲ್ಲ ಕಡೆಯಿಂದಲೂ ದೂರುಗಳು ಕೇಳಿ ಬರುತ್ತಿವೆ. ಟ್ಯಾಂಕ್ಗೆ ಫೈಬರ್ ಮುಚ್ಚಳಿಕೆ ಹಾಕಿದ್ದು, ಮಕ್ಕಳು ಆಟವಾಡುವ ಸಮಯದಲ್ಲಿ ಅದರ ಮೇಲೆ ಕಾಲಿಟ್ಟರೆ ಜೀವಕ್ಕೆ ಕುತ್ತು ಗ್ಯಾರಂಟಿ.
-ಸರಸ್ವತಿ ಹೊನ್ನೇಗೌಡರ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ
ಅಗ್ರಿಮೆಂಟ್ ಕಾಮಗಾರಿಯಾಗಿದ್ದರಿಂದ ನಮ್ಮ ಗಮನಕ್ಕೂ ತರದೇ ಗುತ್ತಿಗೆದಾರರೇ ಸ್ಥಳ ಆಯ್ಕೆ ಮಾಡಿಕೊಂಡು ಕಾಮಗಾರಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೇ ಒತ್ತಡಕ್ಕೂ ಮಣಿಯದೆ ಅನುದಾನ ದುರ್ಬಳಕೆಯಾಗದಂತೆ ಗುಣಮಟ್ಟ ಮತ್ತು ಅಂದಾಜು ಪತ್ರಿಕೆಗೆ ಅನುಗುಣವಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಬಿಲ್ ನೀಡಲಾಗುವುದು.
-ಜೆ.ಆರ್. ಹೆಗಡೆ,
ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ

 ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.