ಸುದ್ದಿ ಸಂಕ್ಷೇಪ
ಕಳ್ಳತನಕ್ಕೆ ಯತ್ನ: ಥಳಿತ
ಗದಗ: ಗದಗ ನಗರದ ಶಿವಾನಂದ ಕಲ್ಯಾಣ ಮಂಟದಲ್ಲಿ ಭಾನುವಾರ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯೋರ್ವರ ಬ್ಯಾಗ್ನಿಂದ ರು. 50 ಸಾವಿರ ನಗದು ಹಾಗೂ ಒಂದು ಮೊಬೈಲ್ ಅಪಹರಿಸಿದ್ದ ಕಳ್ಳನನ್ನು ಮದುವೆ ಮನೆಯಲ್ಲಿದ್ದ ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ, ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ ಘಟನೆ ಜರುಗಿದೆ. ಕಳ್ಳನಿಗೆ ಸಹಾಯ ಮಾಡಿದ್ದ ಇನ್ನೋರ್ವ ವ್ಯಕ್ತಿ ಪರಾರಿಯಾಗಿದ್ದು, ಬಂಧಿತ ಕಳ್ಳನಿಂದ ರು. 40 ಸಾವಿರ ನಗದು ವಶ ಪಡಿಸಿಕೊಳ್ಳಲಾಗಿದೆ. ಗದಗ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜಾಟ: 9 ಜನರ ಬಂಧನ
ಗದಗ: ಚಿಂಚಲಿ ಗ್ರಾಮ ಪಂಚಾಯಿತಿ ಹತ್ತಿರ ಯಲ್ಲಮ್ಮನ ಗುಡಿಯ ಮುಂದೆ ಅಂದರ ಬಾಹರ ಜೂಜಾಟದಲ್ಲಿ ತೊಡಗಿದ್ದ 9 ಜನರನ್ನು ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಮಹಾದೇವಪ್ಪ, ಶಿದ್ರಾಮಪ್ಪ, ಕಾಳಪ್ಪ, ಶರಣಪ್ಪ, ಅಂಬರೀಶ, ಶಿವಪ್ಪ, ಬಸವರಾಜ, ಮುದಕಪ್ಪ, ಚಂದ್ರು ಬಂಧಿತ ಆರೋಪಿಗಳು. ಬಂಧಿತರಿಂದ ರು. 15320 ನಗದು ವಶಪಡಿಸಿಕೊಳ್ಳಲಾಗಿದೆ. ಮುಳಗುಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಕ್ರಮ ಅಕ್ಕಿ ವಶ
ಗದಗ: ನಗರದ ವಕಾರ ಸಾಲಿನ ಗೋದಾಮುವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 200 ಚೀಲ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಸವಿತಾ ಟ್ರೆಡಿಂಗ್ ಕಂಪನಿ ಎನ್ನುವರಿಗೆ ಸೇರಿದ್ದು ಎನ್ನಲಾದ 25 ಕೆಜಿಯ 200 ಚೀಲ ಹಾಗೂ 50 ಕೆಜಿಯ 14 ಚೀಲ ಅಕ್ಕಿಯನ್ನು ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ. ದಾಳಿಯ ನೇತೃತ್ವವನ್ನು ಪ್ರೊಬಷನರಿ ಡಿಎಸ್ಪಿ ಬಿ.ಎಸ್. ನೇಮಗೌಡ್ರ ವಹಿಸಿದ್ದರು. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳು ವಶ
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸಲವಾಡ ಗ್ರಾಮದಲ್ಲಿ ಶನಿವಾರ ರಾತ್ರಿ ದಾಳಿ ನಡೆಸಿದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅಕ್ರಮವಾಗಿ ಸಾಗಿಸುತ್ತಿದ್ದ 30 ಟ್ರ್ಯಾಕ್ಟರ್ ಮರಳು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆಯ 4 ಜನರನ್ನು ಬಂಧಿಸಲಾಗಿದ್ದು, 12 ಜನ ಪರಾರಿಯಾಗಿದ್ದಾರೆ. ಈ ಹಿಂದೆ ಸ್ಥಳೀಯ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಅಕ್ರಮ ಕಾರ್ಯದಲ್ಲಿ ಪಾಲುದಾರಿಕೆ ಹೊಂದಿದ್ದ ವ್ಯಕ್ತಿಗಳು ಹಲ್ಲೆಗೆ ಯತ್ನಿಸಿದ್ದರು. ಸ್ಥಳೀಯ ಅಧಿಕಾರಿಗಳು ಈ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಶನಿವಾರ ದಾಳಿ ನಡೆದಿದೆ ಎನ್ನಲಾಗಿದೆ. ಬಂಧಿತ ಎಲ್ಲಾ ಜನರ ಮೇಲೆ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ರಾಮಣ್ಣಮಾಸ್ತರ ಕೆರಿ ನಿಧನ
ಗದಗ: ಜಿಲ್ಲೆಯ ರೋಣ ತಾಲೂಕು ಯರೇಬೇಲೇರಿ ಗ್ರಾಮದ ನಿವಾಸಿ ರಾಮಣ್ಣಮಾಸ್ತರ ಕೆರಿ(79) ಶನಿವಾರ ನಿಧನರಾದರು. ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಅಪಾರ ಬಂಧು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

