ಬರದ ನಾಡಿಗೆ ಅನ್ನದಾನೀಶ್ವರ ಮಠ ಭರವಸೆ
ಮುಂಡರಗಿ: ಸಾಹಿತ್ಯಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಇತಿಹಾಸದಲ್ಲಿಯೇ ದಾಖಲಾರ್ಹ ಸಾಧನೆಗಳನ್ನು ಮಾಡುವ ಮೂಲಕ ಬರಗಾಲದ ನಾಡೆಂದೇ ಹೆಸರಾದ ಮೃಡಗಿರಿಯ ನಾಡಿನಲ್ಲಿ ಅನ್ನದಾನದ ಜೊತೆಗೆ ಶಿಕ್ಷಣದ ಕ್ರಾಂತಿ ಮಾಡಿದ ಜಗದ್ಗುರು ಅನ್ನದಾನೀಶ್ವರ ಮಠ ನಾಡಿನ ಸಮಾಜೋಧಾರ್ಮಿಕ ಕೇಂದ್ರವೆನಿಸಿದೆ.
ಮುಂಡರಗಿ ಪಟ್ಟಣವೂ ಸೇರಿದಂತೆ ಸುತ್ತಲಿನ ಜಿಲ್ಲೆಯಲ್ಲಿ ಎಲ್ಕೆಜಿಯಿಂದ ಪಿಜಿ ಹಂತದವರೆಗೆ ಒಟ್ಟು 40 ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ, ಗ್ರಾಮೀಣ ಭಾಗದ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದೆ. ಈ ಶಿಕ್ಷಣ ಸಂಸ್ಥೆಗಳಲ್ಲಿ 300ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುವ ಮೂಲಕ ನೂರಾರು ಕುಟುಂಬಗಳಿಗೆ ಶ್ರೀಮಠದಿಂದ ಆರ್ಥಿಕ ಭದ್ರತೆ ಒದಗಿಸಲಾಗಿದೆ.
1963ರಲ್ಲಿ ಪ್ರಸ್ತುತ ಪೀಠಾಧಿಪತಿಯಾಗಿರುವ ಶ್ರೀಗಳು ತಮ್ಮ 18ನೇ ವಯಸ್ಸಿನಲ್ಲಿಯೇ ಮುಂಡರಗಿ ಮಠದ ಹತ್ತನೆಯ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡರು. ಶ್ರೀಮಠದ ಹಿಂದಿನ ಸಾಧನೆಗಳಿಗೆ ಜೀವಂತಿಕೆ ತುಂಬುವುದರ ಜತೆಗೆ ಈ ನಾಡಿನ ಸಾಮಾಜಿಕ ಮತ್ತು ಆರ್ಥಿಕ ಬದುಕನ್ನು ಸುಧಾರಿಸುವಲ್ಲಿ ಶ್ರೀಗಳ ಪಾತ್ರ ಅಮೋಘವಾಗಿದೆ. ಎಲ್ಲ ವರ್ಗದ ಬಡವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಾದ ನಿಲಯ ಪ್ರಾರಂಭಿಸಿ ಅವರ ಬದುಕಿಗೆ ಆಶ್ರಯ ನೀಡುವುದರ ಜೊತೆಗೆ, ಶೈಕ್ಷಣಿಕ ಪ್ರಗತಿಗೆ ಕಾರಣರಾಗಿದ್ದಾರೆ.
ಶರಣ 10 ವಿಚಾರ ಸಂಕಿರಣ: ಅನ್ನದಾನ ಶ್ರೀಗಳು ನಿರಂತರ ಅಧ್ಯಯನ ನಡೆಸುವ ಮೂಲಕ 114 ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. 1967ರಲ್ಲಿ ಸ್ಥಾಪನೆಗೊಂಡಿರುವ ಅನ್ನದಾನೀಶ್ವರ ಗ್ರಂಥಮಾಲೆಯಿಂದ ಶ್ರೀಗಳು ರಚಿಸಿದ 111 ಕೃತಿಗಳೂ ಸೇರಿದಂತೆ 214 ಕೃತಿಗಳನ್ನು ಪ್ರಕಟಿಸಿದ್ದಾರೆ. ಶ್ರೀಗಳು ರಚಿಸಿದ ಸಾಹಿತ್ಯದ ಮೇಲೆ ಈಗಾಗಲೇ 4 ಪಿಎಚ್ಡಿ 2 ಎಂಫಿಲ್ ಪದವಿಗಳನ್ನು ಪಡೆದಿರುವುದು ವಿಶೇಷವಾಗಿದೆ. ಚನ್ನಬಸವಣ್ಣ, ಅಲ್ಲಮಫ್ರಭು, ಅಕ್ಕಮಹಾದೇವಿ, ಸಿದ್ದರಾಮ, ಬಸವಣ್ಣ, ದ್ಯಾಂಪುರ ಚನ್ನಕವಿ ಮುಂತಾದ ಶರಣ 10 ವಿಚಾರ ಸಂಕಿರಣಗಳನ್ನು ನಡೆಸಿದ್ದಾರೆ.
ರೈತರ ಪರವಾದ ಹೋರಾಟ: ಪ್ರತಿವರ್ಷವೂ ಶ್ರೀಮಠದ ಜಾತ್ರಾ ಮಹೋತ್ಸವವು ಸಾಂಸ್ಕೃತಿಕ ಮಹೋತ್ಸವವನ್ನಾಗಿ ಮಾಡಿ, ಈ ಸಂದರ್ಭದಲ್ಲಿ ಬಡವರಿಗೆ ಹಾಗೂ ಹಿಂದುಳಿದವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಉಚಿತ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣಾ ಶಿಬಿರ, ನೇತ್ರ ಉಚಿತ ಚಿಕಿತ್ಸೆ ಶಿಬಿರ, ಬರಡು ದನಗಳ ಚಿಕಿತ್ಸೆ ಮತ್ತು ರೇಷ್ಮೆ-ಕೃಷಿ ಅಭಿವೃದ್ಧಿಯ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನದಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕಪ್ಪತ್ತಗುಡ್ಡದ ಉಳಿವಿಗಾಗಿ ಹೋರಾಟ, ಪೋಸ್ಕೋದಂತಹ ದೈತ್ಯ ಕಂಪನಿ ವಿರೋಧವಾಗಿ ರೈತರ ಪರವಾದ ಹೋರಾಟದಲ್ಲಿ ಮುಂಡರಗಿ ಮಠದ ಹಾಗೂ ಅನ್ನದಾನಶ್ರೀಗಳ ಪಾತ್ರ ಪ್ರಮುಖವಾಗಿದೆ.
ಸಾಮಾಜಿಕ ಕಳಕಳಿ: ವಿವಿಧ ಸಾಮಾಜಿಕ ಮತ್ತು ವಿಧಾಯಕ ಕಾರ್ಯಕ್ರಮಗಳಿಗೆ ಶ್ರೀಮಠದ 130ಕ್ಕೂ ಹೆಚ್ಚು ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದಲ್ಲದೇ, ಲಕ್ಷಾಂತರ ರೂಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು, ಗುಜರಾತ ಮತ್ತು ಲಾಹೋರನಲ್ಲಿ ನಡೆದ ಭೂಕಂಪದ ಸಂದರ್ಭದಲ್ಲಿ ಧನ ಹಾಗೂ ಆಹಾರ ಧಾನ್ಯಗಳನ್ನು ಸರ್ಕಾರಕ್ಕೆ ಕಳುಹಿಸಿ ಶ್ರೀಮಠ ತನ್ನ ಸಾಮಾಜಿಕ ಕಳಕಳಿ ಎತ್ತಿತೋರಿಸಿದೆ.
ಪ್ರಶಸ್ತಿ ಗರಿ: ಪೂಜ್ಯರಿಗೆ 1963-65ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯ ಹಿಂದಿ ಸಾಹಿತ್ಯ ವಿಶಾರದ ಹಾಗೂ ಸಾಹಿತ್ಯ ರತ್ನ ಪ್ರಶಸ್ತಿ, 1966ರಲ್ಲಿ ಬನಾರಸ್ ವಿಶ್ವವಿದ್ಯಾಲಯದಿಂದ ವೇದಾಂತ ಶಾಸ್ತ್ರಿ ಪ್ರಶಸ್ತಿ, ಶೈಕ್ಷಣಿಕ ಮತ್ತು ಸಾಮಾಜಿಕ ಹಾಗೂ ಸಾಹಿತ್ಯಿಕ ಚಟುವಟಿಕೆ ಕಂಡು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯವು 2005ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 2013ರಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ನಾಡೋಜ ಪದವಿ ನೀಡಿ ಗೌರಿವಿಸಿದೆ. ಅದರಂತೆ ಅನೇಕ ಸಂಘ ಸಂಸ್ಥೆಗಳು ಮತ್ತು ಮಠಮಾನ್ಯಗಳು ಪೂಜ್ಯರಿಗೆ ಅನೇಕ ಪದವಿ-ಪುರಸ್ಕಾರಗಳನ್ನು ನೀಡಿವೆ.
ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

