ಬರಿದಾಗುತ್ತಿದೆ ತುಂಗಭದ್ರೆ: ಕಾದಿದೆ ಬರ
ಮುಂಡರಗಿ: ತಾಲೂಕಿನ ಹಮ್ಮಿಗಿ, ಶಿಂಗಟಾಲೂರು, ಕೊರ್ಲಹಳ್ಳಿ ಹತ್ತಿರ ಹರಿದಿರುವ ತುಂಗಭದ್ರಾ ನದಿ ಬೇಸಿಗೆ ಆರಂಭಕ್ಕೆ ಮುನ್ನವೇ ಶೇ. 85ರಷ್ಟು ಬತ್ತಿದ್ದು, ಮುಂಬರುವ ಮಾರ್ಚ್ ವೇಳೆಗೆ ನದಿಯಲ್ಲಿನ ನೀರು ಸಂಪೂರ್ಣವಾಗಿ ಖಾಲಿಯಾಗುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ. ಇದರಿಂದ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳು ಹಾಗೂ ಗದಗ-ಬೆಟಗೇರಿ ಅವಳಿ ನಗರಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.
ಪ್ರತಿವರ್ಷ ಮಾರ್ಚ್ ವೇಳೆಗೆ ಖಾಲಿಯಾಗುತ್ತಿದ್ದ ತುಂಗಭದ್ರೆ ಈ ಬಾರಿ ಫೆಬ್ರವರಿ ತಿಂಗಳಿನ ಮೊದಲ ವಾರದಲ್ಲಿಯೇ ಸಂಪೂರ್ಣವಾಗಿ ಖಾಲಿಯಾಗುವ ಸಾಧ್ಯತೆ ಹೆಚ್ಚಿದೆ. ಮಾರ್ಚ್ ತಿಂಗಳಿನಲ್ಲಿ ಬರುವ ಯುಗಾದಿ ಹಬ್ಬಕ್ಕೆ ಮುಂಡರಗಿ ತಾಲೂಕು ಸೇರಿದಂತೆ ಗದಗ-ಬೆಟಗೇರಿ ಅವಳಿ ನಗರದ ಜನತೆ ನೀರಿಲ್ಲದೆ ವ್ಯಥೆ ಪಡುವಂತಾಗುತ್ತದೆ.
ಶೇ. 85ರಷ್ಟು ಖಾಲಿ: ಜನವರಿ 14ರ ಮಕರ ಸಂಕ್ರಾಂತಿ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖಾಲಿಯಾಗಿದ್ದ ತುಂಗಭದ್ರೆ ಇದೀಗ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಖಾಲಿಯಾಗದೆ. ಈಗಾಗಲೇ ನದಿಯಲ್ಲಿ ಶೇ. 85ರಷ್ಟು ನೀರು ಖಾಲಿಯಾಗಿದ್ದು, ಇನ್ನು ಕೇವಲ ಶೇ. 15ರಷ್ಟು ಮಾತ್ರ ಉಳಿದಿದೆ. ಶಿಂಗಟಾಲೂರು ಭಾಗದಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿದ್ದು, ಕೊರ್ಲಹಳ್ಳಿ ಹತ್ತಿರ ಮಾತ್ರ ಅಲ್ಲೊಂದು ಇಲ್ಲೊಂದು ತಗ್ಗು ದಿಣ್ಣೆಗಳಲ್ಲಿ ನಿಂತಿದೆ. ಇಲ್ಲಿ ನಿಂತಿರುವ ನೀರು ಸಹ ಫೆ. ಕೊನೆಯ ವಾರದ ವರೆಗೆ ಆಗುವ ಲಕ್ಷಣಗಳಿವೆ. ಮಾರ್ಚ್ ಮೊದಲನೇ ವಾರದಲ್ಲಿಯೇ ಮುಂಡರಗಿ, ಮುಂಡರಗಿ ತಾಲೂಕಿನ ತುಂಗಭದ್ರಾ ನೀರು ಬಳಕೆ ಮಾಡುವ ಎಲ್ಲ ಗ್ರಾಮಗಳು ಹಾಗೂ ಗದಗ-ಬೆಟಗೇರಿ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಲಿದೆ.
ಉಸುಕಿನ ಚೀಲ ಹಾಕಿಲ್ಲ: ಈ ಹಿಂದೆ ನದಿಯಲ್ಲಿ ನೀರು ಕಡಿಮೆಯಾಗುವ ಲಕ್ಷಣ ಕಂಡು ಬಂದಾಗ ನೀರು ಪೋಲಾಗದಂತೆ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತ ಕೊರ್ಲಹಳ್ಳಿ ಹತ್ತಿರ ಉಸುಕಿನ ಚೀಲಗಳಿಂದ ಗೋಡೆ ನಿರ್ಮಿಸಿ ನೀರು ಹರಿದು ಹೋಗದಂತೆ ತಡೆಹಿಡಿಯುವ ಕಾರ್ಯ ಕೈಗೊಳ್ಳುತ್ತಿದ್ದರು. ಆದರೆ ಇದುವರೆಗೂ ತಾಲೂಕು ಆಡಳಿತ ಇತ್ತ ಕಡೆಗೆ ತಿರುಗಿಯೂ ನೋಡಿಲ್ಲ. ಮಳೆಗಾಲ ಪ್ರಾರಂಭವಾಗಲು ಇನ್ನೂ ಸಾಕಷ್ಟು ಸಮಯಾವಕಾಶವಿರುವುದರಿಂದ ತಾಲೂಕು ಆಡಳಿತ ಸಾರ್ವಜನಿಕರ ಕುಡಿಯುವ ನೀರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದು ಅವಶ್ಯವಾಗಿದೆ.
ಇದ್ದ ನೀರು ಕೆಟ್ಟಿದೆ: ಈಗಾಗಲೇ ನದಿಯಲ್ಲಿ ಕೇವಲ ಶೇ. 15ರಷ್ಟು ಮಾತ್ರ ನೀರು ಉಳಿದಿದ್ದು, ಅದು ಸಹ ಸಂಪೂರ್ಣವಾಗಿ ಮಲಿನಗೊಂಡು ಹಸಿರುವ ಬಣ್ಣಕ್ಕೆ ತಿರುಗಿದೆ. ಇದೀಗ ಎಲ್ಲ ಗ್ರಾಮಗಳಿಗೂ ಇದೇ ನೀರು ಸರಬರಾಜಾಗುತ್ತಿದ್ದು, ನೀರನ್ನು ಸರಿಯಾಗಿ ಶುದ್ಧೀಕರಣ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಮೈ ಕೈ ನೋವು ಸೇರಿದಂತೆ ವಿವಿಧ ಕಾಯಿಲೆಗಳು ಪ್ರಾರಂಭವಾಗಿವೆ ಎನ್ನುವುವುದು ಸಾರ್ವಜನಿಕರ ದೂರಾಗಿದೆ. ಕೆಲವು ಗ್ರಾಮಗಳಲ್ಲಿರುವ ಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಲಿ
ಈ ಹಿಂದೆ ತುಂಗಭದ್ರಾ ನದಿಯಲ್ಲಿ ನೀರು ಖಾಲಿಯಾದ ಸಂದರ್ಭದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಶಾಸಕರಾದ ರಾಮಣ್ಣ ಲಮಾಣಿ, ಕಳಕಪ್ಪ ಬಂಡಿ ಹಾಗೂ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಜಲಾನಯನ ಅಧಿಕಾರಿಗಳು ನದಿ ದಡಕ್ಕೆ ಆಗಮಿಸಿ ಸಾರ್ವನಿಕರಿಗೆ ನೀರು ಕೊಡಲು ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಈರ್ವರು ಶಾಸಕರಾಗಲಿ, ಜಿಲ್ಲಾಧಿಕಾರಿಯಾಗಲಿ, ತಾಲೂಕು ತಹಸೀಲ್ದಾರ್ ಆಗಲಿ ಇದುವರೆಗೂ ನದಿಯತ್ತ ಬಂದಿಲ್ಲ. ಈಗಲಾದರೂ ಆಗಮಿಸಿ ಈ ಕುರಿತು ಚರ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
-ರಜನೀಕಾಂತ ದೇಸಾಯಿ,
ಮುಖಂಡ, ಮುಂಡರಗಿ ಬಿಜೆಪಿ ಶಹರ ಘಟಕ
ಶರಣು ಸೊಲಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

