ಅನುದಾನ ಲ್ಯಾಪ್ಸ್ ಆಗದಂತೆ ನಿಗಾವಹಿಸಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 11
ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಲ್ಯಾಪ್ಸ್ ಆಗದಂತೆ, ಗುಣಮಟ್ಟದ ಕಾಮಗಾರಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಜಿಪಂ ಸಿಇಒ ವೀರಣ್ಣ ತುರಮರಿ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತದ ಭವನದಲ್ಲಿರುವ ಜಿಪಂ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶದ ನೀರು ಪೂರೈಕೆಗೆ ಹೆಚ್ಚಿನ ಗಮನ ನೀಡಿ, ವಿವಿಧ ಯೋಜನಾ ಕಾಮಗಾರಿಗಳನ್ನು ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಿ ವರದಿ ನೀಡಿ, ಬೇಸಿಗೆಯಲ್ಲಿ ಜನರಿಗೆ ನೀರಿನ ತೊಂದರೆ ಆಗದಂತೆ ಲಭ್ಯವಿರುವ ಎಲ್ಲ ಜಲ ಮೂಲಗಳ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕೆ ಮುಂಜಾಗ್ರತೆಯ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಜಿಪಂ ಸದಸ್ಯ ಬೀರಪ್ಪ ಬಂಡಿ ಹಾಗೂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ಡಾ. ಅಂಬೇಡ್ಕರ್, ದೇವರಾಜ ಅರಸು ಹಾಗೂ ಅಲ್ಪಸಂಖ್ಯಾತರ ನಿಗಮಗಳಿಂದ 2012-13 ಮತ್ತು 2013-14ರ ಸಾಲಿನ ಗಂಗಾ ಕಲ್ಯಾಣ ಫಲಾನುಭವಿಗಳ ಪಟ್ಟಿ ನೀಡುವಂತೆ ಸೂಚಿಸಿದರು.
ಸ್ಮಾರ್ಟ್ ಏಜೆನ್ಸಿ ರದ್ದತಿಗೆ ಸರ್ಕಾರಕ್ಕೆ ಪತ್ರ: ಪ್ರಸಕ್ತ ಸಾಲಿನಲ್ಲಿ ಶುದ್ಧ ನೀರು ಘಟಕಗಳ ಕಾಮಗಾರಿ ಪ್ರಾರಂಭಿಸಲಾಗಿದ್ದು, ಅದರಲ್ಲಿ 19 ಘಟಕಗಳು ನೀರು ಪೂರೈಕೆ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ನಿರ್ಮಾಣದ ಹೊಣೆ ಹೊತ್ತಿದ್ದ ಹೈದರಾಬಾದ್ ಮೂಲದ ಸ್ಮಾರ್ಟ್ ಏಜೆನ್ಸಿ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಜಿಲ್ಲೆಗೆ ಸಂಬಂಧಿತ ಗುತ್ತಿಗೆ ರದ್ದುಪಡಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಬೇಸಿಗೆ ಪ್ರಾರಂಭಗೊಳ್ಳುತ್ತಿದ್ದು, ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಹಾಗೂ ಜಾನುವಾರುಗಳಿಗೆ ಅವಶ್ಯವಿರುವ ಕಾಲುಬಾಯಿ ರೋಗ ಹಾಗೂ ಇನ್ನಿತರ ವಿಷಯಗಳ ಮುಂಜಾಗ್ರತಾ ಹಾಗೂ ಜನಜಾಗೃತಿ ಕ್ರಮಗಳನ್ನು ಈಗಿನಿಂದಲೇ ಕೈಕೊಳ್ಳಬೇಕು. ವೈದ್ಯರು ಕೇಂದ್ರ ಸ್ಥಾನಗಳಲ್ಲಿದ್ದು ಕಾರ್ಯನಿರ್ವಹಿಸಬೇಕು. ಕೆಎಂಎಫ್ ಸಂಸ್ಥೆಯು ಕ್ಷೀರಭಾಗ್ಯ ಯೋಜನೆಗೆ ಗುಣಮಟ್ಟದ ಹಾಲಿನ ಪುಡಿ ಪೂರೈಕೆಯನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು. ನೀರು ಪೂರೈಕೆಗೆ ಸಾಧ್ಯವಾದಷ್ಟು ಶಾಶ್ವತ ಜಲಮೂಲಗಳನ್ನು ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ನಿರ್ಮಿಸಬೇಕು. ರೋಣ ತಾಲೂಕಿನಲ್ಲಿ ನೀರಾವರಿ ಇಲಾಖೆಯು ಮಲಪ್ರಭಾ ಕಾಲುವೆಯ ಕೊನೆಯ ಹಂತದವರೆಗೂ ನೀರು ಹರಿಯುವಂತೆ ಕ್ರಮ ಜರುಗಿಸಬೇಕು. ಬೆಂಬಲ ಬೆಲೆಯಲ್ಲಿ ಗೋವಿನ ಜೋಳ ಖರೀದಿ ಕುರಿತಂತೆ ಜಿಲ್ಲೆಯ ಸಣ್ಣ ರೈತರು ಖರೀದಿ ಅವಧಿ ವಿಸ್ತರಿಸಲು ಮನವಿ ಸಲ್ಲಿಸಿದ್ದು, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಗೆ ಈ ಕುರಿತು ಕೋರಿಕೆ ಸಲ್ಲಿಸಲು ಸಭೆ ನಿರ್ಧರಿಸಿತು.
ಕಡಲೆ ಖರೀದಿಲು ಜಿಲ್ಲಾ ಟಾಸ್ಕ್ ಸಮಿತಿ: ಕಡಲೆ ಬೆಳೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾ ಟಾಸ್ಕ್ ಸಮಿತಿಯು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ನಿರ್ಧಾರ ಕೈಕೊಂಡಿದೆ. ರಾಜ್ಯ ಸಹಕಾರಿ ಮಾರಾಟ ಮಂಡಳಿ ರೋಣ ಹಾಗೂ ಗದಗನಲ್ಲಿ ಎರಡು ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ 8 ರಿಂದ 10ನೇ ತರಗತಿಯ 739 ಬಡ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಫೆಬ್ರವರಿ 20 ರಿಂದ 25ರ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯು ಕೈಕೊಳ್ಳಬೇಕಾದ ಪೂರ್ವಭಾವಿ ಕ್ರಮಕುರಿತು ಸಭೆ ಜರುಗಿಸಿದೆ.
ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಮುಂದಾಗಿ: ಇಂದಿರಾ ಆವಾಸ್ ಯೋಜನೆಯಡಿ ಜಿಲ್ಲೆಯಲ್ಲಿ 1518 ಫಲಾನುಭವಿಗಳ ಆಯ್ಕೆ ಮಂಜೂರಾತಿ ಪಡೆಯಲಾಗಿದ್ದು, ಮನೆಗಳ ನಿರ್ಮಾಣ ಕಾರ್ಯ ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇಡೀ ಸಹಾಯಧನ ಸರ್ಕಾರಕ್ಕೆ ಮರಳಿಸಬೇಕಾಗುತ್ತದೆ ಎಂದು ಸಭೆಯ ಗಮನ ಸೆಳೆದರು. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಅನಾನುಕೂಲ ಆಗದಂತೆ ಹೆಸ್ಕಾಂ ಪೂರ್ವಭಾವಿ ಪರಿಶೀಲನಾ ಕ್ರಮ ಜರುಗಿಸಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಮುಂದಾಗಬೇಕು ಎಂದು ತಿಳಿಸಲಾಯಿತು. ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾ ಧ್ಯಕ್ಷ ರಮೇಶ ಮುಂದಿನಮನಿ ಇತರಿರದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

