ಗದಗ

ಕುಡಿವ ನೀರು ಪೂರೈಕೆ ವ್ಯತ್ಯಯ: ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 11
ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಮುಖ್ಯ ನೀರು ಸಂಗ್ರಹಾಗಾರದಿಂದ ಸರಬರಾಜಾಗುವ ಪೈಪ್ಲೈನ್ ಲಂಬಾಣಿ ತಾಂಡಾ ಬಳಿ ಒಡೆದು ಹಲವು ತಿಂಗಳು ಗತಿಸಿವೆ. ರಸ್ತೆಯಲ್ಲಿ ಪೈಪ್ಲೈನ್ ಒಡೆದು ನೀರು ಪೋಲಾದರೂ ದುರಸ್ತಿಗೆ ಮುಂದಾಗದ ಸ್ಥಳೀಯ ಪುರಸಭಾ ಆಡಳಿತ ವಿರುದ್ಧ ತಾಂಡಾ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಜನತೆ ಕುಡಿವ ನೀರಿನ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಬೇಸಿಗೆಯ ಮೊದಲೇ ವಾರಕ್ಕೊಮ್ಮೆ ಕುಡಿವ ನೀರು ಸರಬರಾಜಾಗುವಂತಹ ದುಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕಾಲಕಾಲೇಶ್ವರ ಬಳಿಯ ಪಂಪ ಹೌಸ್ನಿಂದ ಪಟ್ಟಣದ ಎಲ್ಲ ಬಡಾವಣೆಗಳಿಗೆ ಪೂರೈಕೆಯಾಗುವ ಮುಖ್ಯ ಪೈಪ್ಲೈನ್ ರಸ್ತೆ ಮದ್ಯೆ ಒಡೆದು ನೀರು ಅನಗತ್ಯ ಪೋಲಾಗಿ ಹರಿದು ತಿಪ್ಪೆಗುಂಡಿ ಸೇರಿದೆ. ಇದರಿಂದ ಹಲವಾರು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ನಿವಾಸಿಗಳಿಗೆ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಂಡಾ ಬಳಿ ಕುಡಿವ ನೀರಿನ ಪೈಪ್ಲೈನ್ ಒಡೆದು ಹಲವು ತಿಂಗಳು ಗತಿಸಿವೆ. ಈ ಕುರಿತು ಹಲವಾರು ಬಾರಿ ಪುರಸಭೆಗೆ ಮನವಿ ಮಾಡಿದರೂ ಯಾರೂ ಇತ್ತ ತಿರುಗಿನೋಡಿಲ್ಲ ಇನ್ನೊಂದೆಡೆ ಚುನಾವಣಾ ಸಂದರ್ಭದಲ್ಲಿ ಬಣ್ಣದ ಮಾತಿನಿಂದ ಜನತೆಯ ಮತಗಿಟ್ಟಿಸಿ ಅಧಿಕಾರ ಗದ್ದುಗೆ ಏರಿದ ಸ್ಥಳೀಯ ಜನ ಪ್ರತಿನಿಧಿಗಳಿಗೆ ಸಾರ್ವಜನಿಕರ ಕೂಗು ಕೇಳಿಸುತ್ತಿಲ್ಲ. ಹೀಗಾಗಿ ಜನತೆ ಸದಾ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ ಎಂದು ಪುರಸಭೆ ಆಡಳಿತ ವಿರುದ್ಧ ಕಿಡಿ ಕಾರಿದರು. ಪುರಸಭೆಯವರು ಈಗ ಪಟ್ಟಣದ ಜನತೆಗೆ ವಾರಕ್ಕೊಮ್ಮೆ ಕುಡಿವ ನೀರು ಸರಬರಾಜು ಮಾಡುತ್ತಾರೆ. ಇದೀಗ ಬೇಸಿಗೆ ಆರಂಭಗೊಂಡಿದೆ. ಈಗಲೇ ಹೀಗಾದರೆ ಮುಂದೆ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಲಿದೆ ಎನ್ನುವ ಆತಂಕ ಜನರನ್ನು ಕಾಡತೊಡಗಿದೆ. ಆದರೆ ಪುರಸಭೆಯವರು ಇದ್ಯಾವುದನ್ನು ಲೆಕ್ಕಿಸದೆ ಬೇಜವಾಬ್ದಾರಿಕೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪುರಸಭೆ ಆಡಳಿತ ಅತ್ಯಮುಲ್ಯವಾದ ಕುಡಿಯುವ ನೀರಿನ ಬಳಕೆ ಮಿತವ್ಯಯಗೊಳಿಸಿ ಜೀವಜಲ ಉಳಿಸಿ ಎಂದು ಗಲ್ಲಿ ಗಲ್ಲಿಯಲ್ಲಿ ಧ್ವನಿವರ್ಧಕ ಮೂಲಕ ಸಂದೇಶ ನೀಡುತ್ತಾರೆ. ಆದರೆ, ಗಜೇಂದ್ರಗಡ ಪಟ್ಟಣಕ್ಕೆ ನೀರು ಒದಗಿಸುವ ಸಂಗ್ರಹಗಾರದ ಬಳಿ ಪೈಪ್ಲೈನ್ ಒಡೆದು ಆರು ತಿಂಗಳಾದರೂ ಅದರ ದುರಸ್ತಿ ಮುಂದಾಗದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ತಿರುಪತಿ ರಾಠೋಡ, ವೀರೇಶ ರಾಠೋಡ, ವಿಠ್ಠಲ್ ರಾಠೋಡ, ಮುನ್ನಾನಾಯಕ ರಾಠೋಡ, ಪರಶುರಾಮ ಗುಗಲೋತ್ತರ, ಲಕ್ಷ್ಮಣ ಮಾಳೋತ್ತರ, ರಾಮಣ್ಣ ರಾಠೋಡ, ಶ್ರೀನಿವಾಸ ರಾಠೋಡ, ರಮೇಶ ರಾಠೋಡ ದೂರಿದರು.
ಇದೇ ವೇಳೆ ಪ್ರತಿಭಟನಾನಿರತ ಸ್ಥಳಕ್ಕೆ ಪುರಸಭೆ ಕಿರಿಯ ಅಭಿಯಂತ ಪಿ.ಎನ್. ದೊಡ್ಡಮನಿ ಆಗಮಿಸಿ ಪಟ್ಟಣಕ್ಕೆ ಸರಬರಾಜಾಗುವ ಕುಡಿವ ನೀರಿನ ಪೈಪ್ಲೈನ್ ಒಡೆದ ಬಗ್ಗೆ ಸಾರ್ವಜನಿಕರು ಪುರಸಭೆಯ ಗಮನಕ್ಕೆ ತಂದಿದ್ದಾರೆ. ಶೀಘ್ರ ಪೈಪ್ಲೈನ್ ದುರಸ್ತಿ ಮಾಡಲಾಗುವುದು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.