ರೋಣ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ
ಕನ್ನಡಪ್ರಭ ವಾರ್ತೆ, ರೋಣ, ಫೆ. 11
ತಾಲೂಕಿನ ಡ.ಸ. ಹಡಗಲಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಲಾದ ಆಶ್ರಯ ಮನೆಗಳ ಸುತ್ತಲಿನ ಹದ್ದು ಬಸ್ತ್ (ಚೆಕ್ಬಂಧಿ)ನ್ನು ಗುರುತಿಸಿ ಕೊಡುವಲ್ಲಿ ಸರ್ವೇ ಕಾರ್ಯ ಕೈಗೊಳ್ಳಬೇಕು ಎಂದು ಡ.ಸ. ಹಡಗಲಿ ಗ್ರಾಮದ ಆಶ್ರಯ ಮನೆ ನಿವಾಸಿಗಳು ಕರವೇ ಗ್ರಾಮ ಘಟಕದ ನೇತ್ರತ್ವದಲ್ಲಿ ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಡ.ಸ. ಹಡಗಲಿ ಕರವೇ ಗ್ರಾಮ ಘಟಕ ಅಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ, ಗ್ರಾಮದಲ್ಲಿ ಸುಮಾರು 20 ವರ್ಷಗಳ ಹಿಂದೆ ರಿ.ಸ.ನಂ 138/2 ಕ್ಷೇತ್ರ 4 ಎಕರೆ 19 ಗುಂಟೆ ಜಮೀನನಲ್ಲಿ 80ರಿಂದ 90 ಆಶ್ರಯ ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಈವರೆಗೂ ಅಲ್ಲಿ ಯಾವುದೇ ರೀತಿಯ ಗಟಾರು, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಿರುವುದಿಲ್ಲ. ಅಲ್ಲದೇ ಆಶ್ರಯ ಮನೆಗಳ ಅಕ್ಕಪಕ್ಕದಲ್ಲಿ ಆಯಾ ಮನೆಗಳಿಗೆ ಎಷ್ಟು ಜಾಗೆ ಮೀಸಲಿರಿಸಲಾಗಿದೆ ಎಂಬುದನ್ನು ಪಟ್ಟಾ ಪುಸ್ತಕದಲ್ಲಿ ನಮೂದಿಸಿಲ್ಲ. ಅಂದು ವಿತರಿಸಲಾದ ಪಟ್ಟಾ ಪುಸ್ತಕಗಳು ನಕಲಿಯಾಗಿವೆ ಎಂದರು.
ಆಶ್ರಯ ಮನೆಗಳ ಸುತ್ತಲಿನ ಅಳತೆ ಮತ್ತು ಯಾವ ದಿಕ್ಕಿಗೆ ರಸ್ತೆ, ಗಟಾರು ಇರುವ ಕುರಿತು ಹಾಗೂ ರಿ.ಸ.ನಂ 138/2 ಕ್ಷೇತ್ರ 2 ಎಕರೆ 19 ಗುಂಟೆ ಜಮೀನಿನ ಹದ್ದನ್ನು ಗುರುತಿಸುವಲ್ಲಿ ತಹಸೀಲ್ದಾರ್ ಎ.ಜಿ. ಪಂಡೀತರವರು ಸರ್ವೇ ಇಲಾಖೆಗೆ ಮರು ಸರ್ವೇ ಕಾರ್ಯ ಕೈಗೊಳ್ಳುವಂತೆ ಆದೇಶಿಸಬೇಕು. ಇಲ್ಲದಿದ್ದಲ್ಲಿ ದಿನನಿತ್ಯ ಇಲ್ಲಿನ ನಿವಾಸಿಗಳು ಪಕ್ಕದಲ್ಲಿನ ಜಾಗೆಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಎಲ್ಲೆಂದರಲ್ಲಿ ಹೆಚ್ಚುವರಿಯಾಗಿ ಇಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ನಿತ್ಯವು ಜಗಳ, ಹೊಡೆದಾಟ ನೋಡುವುದಾಗಿದೆ. ಇದರಿಂದ ಯಾರಿಗೂ ನೆಮ್ಮದಿ ಇಲ್ಲದಂತಾಗಿದೆ. ಸ್ಥಳೀಯ ಗ್ರಾಪಂನವರನ್ನು ಲಿಖಿತ ಮತ್ತು ಮೌಖಿಕವಾಗಿ ಆಗ್ರಹಿಸಿದರೂ ಪ್ರಯೋಜನಾಗುತ್ತಿಲ್ಲ ಎಂದರು.
ಕರವೇ ಪ್ರಧಾನ ಕಾರ್ಯದರ್ಶಿ ಎಂ.ಡಿ. ನದಾಫ್ ಮಾತನಾಡಿ, 3 ವರ್ಷಗಳಿಂದ ಸ್ಥಳೀಯ ಗ್ರಾಪಂ ಅಧಿಕಾರಿಗಳಿಗೆ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸುತ್ತಾ ಬರಲಾಗಿದೆ. ಈವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. 8 ದಿನಗಳೊಳಗಾಗಿ ಬೇಡಿಕೆ ಈಡೆರಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮಹಬೂಬ ಕುಂದಗೋಳ, ರಮೇಶ ಕಾಟೆ, ಬಸವರಾಜ ಹಡಪದ, ಮಲ್ಲಪ್ಪ ಕುಂಬಾರ, ವೀರೇಶ ಕುಂಬಾರ, ಶೇಖಪ್ಪ ಕುರಿ, ಸುರೇಶ ಹೊಸಮನಿ, ರಾಚಪ್ಪ ಕೊಪ್ಪದ, ಸಂಗಪ್ಪ ತಿಪ್ಪರಡ್ಡಿ, ದೇವೀಂದ್ರಪ್ಪ ಕೊತಬಾಳ, ಚನ್ನಯ್ಯ ದೇವನೂರಮಠ, ಭೀಮನಗೌಡ, ಸುರೇಶ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

