ಅನ್ನದಾನೀಶ್ವರ ಮಠಕ್ಕೆ ಸರ್ಕಾರದ ಯಾವುದೇ ಸಹಾಯ ಇಲ್ಲ: ಶ್ರೀಗಳು
ಮುಂಡರಗಿ: ಮಾಜಿ ಶಾಸಕ ರಾಮಣ್ಣ ಲಮಾಣಿ ತಮ್ಮ ಅನುದಾನದಲ್ಲಿ ರು. 3 ಲಕ್ಷ ಅನುದಾನ ನೀಡಿದ್ದು ಬಿಟ್ಟರೆ, ಈ ಹಿಂದಿನ ಯಾವುದೇ ಸರ್ಕಾರಗಳು ಶ್ರೀಮಠಕ್ಕಾಗಲಿ, ಶ್ರೀಮಠದ ಶಿಕ್ಷಣ ಸಂಸ್ಥೆಗಳಿಗಾಗಲಿ ಒಂದೇ ಒಂದು ಪೈಸೆ ಅನುದಾನ ನೀಡಿಲ್ಲ. ಶಿಕ್ಷಣಕ್ಕಾಗಿ ಈ ಭಾಗದಲ್ಲಿ ಶ್ರೀಮಠವು ಸಾಕಷ್ಟು ಶ್ರಮಿಸುತ್ತಿದೆ. ಆದಾಗ್ಯೂ ಸರ್ಕಾರ ಮಾತ್ರ ಇತ್ತ ನಿರ್ಲಕ್ಷಿಸುತ್ತಲೇ ಇದೆ ಎಂದು ಮುಂಡರಗಿ ಸಂಸ್ಥಾನ ಮಠದ ನಾಡೋಜ, ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಬುಧವಾರ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ 28 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಈ ಭಾಗದಲ್ಲಿ ಎನ್‌ಕೆಜಿಯಿಂದ ಪಿಜಿ ವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿ ಅದರಲ್ಲೂ ಮುಖ್ಯವಾಗಿ ಮುಂಡರಗಿ ಭಾಗದಲ್ಲಿನ ಎಲ್ಲ ಮಕ್ಕಳಿಗೂ ಕಲಿಯಲು ಅನುಕೂಲ ಮಾಡಿಕೊಡಲಾಗಿದೆ. ಆದರೆ, ಸರ್ಕಾರಗಳು ಮಾತ್ರ ಶ್ರೀಮಠದತ್ತ ತಿರುಗಿ ನೋಡುತ್ತಿಲ್ಲ. ಶ್ರೀಮಠದಿಂದ ಪಟ್ಟಣದ ಅನೇಕ ಸರ್ಕಾರಿ ಕಚೇರಿಗಳ ಕಟ್ಟಡಗಳಿಗೆ, ಸರ್ಕಾರಿ ನೌಕರರ ಭವನಕ್ಕೆ ಶ್ರೀಮಠದ ಸ್ವಂತದ ಜಾಗೆ ದಾನ ಮಾಡಿದ್ದು, ಅವುಗಳಿಗಾದರೂ ಶ್ರೀಮಠದ ಅಥವಾ ಶ್ರೀಗಳ ಹೆಸರಿಡಬೇಕು ಎಂದು ಶ್ರೀಗಳು ಹೇಳಿದರು.
ನವದಂಪತಿಗಳು ಕುಟುಂಬದ ಹಾಗೂ ಗ್ರಾಮದ ಹೆಸರನ್ನು ಉಳಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿ, ಪ್ರತಿ ಜೋಡಿಯು ಮದುವೆಯ ನೆನಪಿಗಾಗಿ ಎರಡೆರಡು ಮರಗಳನ್ನು ನೆಡುವಂತೆ ತಿಳಿಸಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಈ ಭಾಗದಲ್ಲಿ ಶಿಕ್ಷಣ ಕ್ರಾಂತಿಯಲ್ಲಿ ಅನ್ನದಾನಶ್ರೀಗಳ ಪಾತ್ರ ಪ್ರಮುಖವಾಗಿದೆ. ಇಂತಹ ಮಠಗಳ ಅಭಿವೃದ್ಧಿಗೆ ಎಲ್ಲ ಜನಪ್ರತಿನಿಧಿಗಳು ಶ್ರಮಿಸಬೇಕಾಗಿರುವುದು ಅವಶ್ಯವಾಗಿದೆ ಎಂದರು. ಜಾತ್ರಾ ಕಮಿಟಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳ ಪ್ರಾಯೋಜಕತ್ವ ವಹಿಸಿದ್ದ ವಿಜಯನಗರ ಶುಗರ್ಸ್‌ನ ಜಿ.ಎಂ. ರಾಜಗೋಪಾಲ, ಎ.ಜಿ.ಎಂ.ಕೆ. ಧರ್ಮೇಂದ್ರ ಅವರನ್ನು ಸನ್ಮಾನಿಸಲಾಯಿತು.
ಚನ್ನಬಸವ ಶ್ರೀಗಳು, ಪ್ರಭುಲಿಂಗ ದೇವರು, ಗುಡ್ಡದ ಅನ್ವೇರಿ ಶ್ರೀಗಳು, ಮರೇಗುದ್ದಿ ಶ್ರೀಗಳು, ಹಿರೇಸಿಂಧೋಗಿ ಶ್ರೀಗಳು, ಸಿದ್ದರಾಮ ದೇವರು, ಕರಬಸಪ್ಪ ಹಂಚಿನಾಳ, ಕಾಂತರಾಜ ಹಿರೇಮಠ, ಶಂಕ್ರಪ್ಪ ಬಾರಿಕಾಯಿ, ಎಸ್.ಬಿ. ಹಿರೇಮಠ, ದೇವಪ್ಪ ರಾಮೇನಹಳ್ಳಿ, ಮಂಜುನಾಥ ಇಟಗಿ, ಮಂಜುನಾಥ ಗೋಡಿ, ಮಂಜುನಾಥ ಮುದೋಳ, ದೇವಪ್ಪ ಇಟಗಿ, ಪವನ್‌ಚೋಪ್ರಾ, ಶಿವು ನಾಡಗೌಡ್ರ ಸೇರಿದಂತೆ ಜಾತ್ರಾ ಕಮಿಟಿಯ ಸದಸ್ಯರು ಇದ್ದರು. ಎಸ್.ಆರ್. ರಿತ್ತಿ ಸ್ವಾಗತಿಸಿ, ಎಸ್.ಎಸ್. ಇನಾಮತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

