ಬಸ್ ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಲಕ್ಷ್ಮೇಶ್ವರ: ಸಮೀಪದ ಗುಲಗಂಜಿಕೊಪ್ಪ ಗ್ರಾಮದ ಕ್ರಾಸ್ನಲ್ಲಿ ಬಸ್ಗಳ ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪಾಳಾ ಬಾದಾಮಿ ರಸ್ತೆ ಸಂಚಾರ ತಡೆ ನಡೆಸಿದರು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬಸ್ ತಡೆ ಮಾಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಪಟ್ಟಣದಿಂದ ಕೇವಲ 4 ಕಿ.ಮೀ. ದೂರದಲ್ಲಿರುವ ಗುಲಗಂಜಿಕೊಪ್ಪ ಗ್ರಾಮದ ಜನರು ಯಾವುದೇ ಸ್ಥಳಕ್ಕೆ ಹೋಗಬೇಕೆಂದರೆ ಬಸ್ ಗಂಟೆಗಟ್ಟಲೆ ಕಾಯಬೇಕು. ಇಲ್ಲಿ ಯಾವುದೇ ಸರ್ಕಾರಿ ಬಸ್ ನಿಲ್ಲುವುದಿಲ್ಲ. ಪಾಳಾ ಬಾದಾಮಿ ರಾಜ್ಯ ಹೆದ್ದಾರಿಯ ಪಕ್ಕದ ಗ್ರಾಮವಾದರೂ ಇಲ್ಲಿನ ಜನತೆಗೆ ಸರ್ಕಾರಿ ಬಸ್ ಸಿಗಲ್ಲ. ಇಲ್ಲಿನ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಶಾಲಾ ಸಮಯಕ್ಕೆ ಸರಿಯಾಗಿ ಹೋಗಲಾಗದೇ ಶಿಕ್ಷಣದಿಂದ ವಂಚಿತವಾಗುವ ಹಂತಕ್ಕೆ ಬಂದಿದ್ದು, ಹಾವೇರಿ, ಸವಣೂರು, ಹಿರೇಕೆರೂರು, ಬ್ಯಾಡಗಿ, ರೋಣ, ಗಜೇಂದ್ರಗಡ ಡಿಪೋಗಳಿಗೆ ಸೇರಿದ ಬಸ್ಗಳು ಇಲ್ಲಿ ನಿಲುಗಡೆ ಮಾಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಯ ಅಸ್ತ್ರವಾಗಿ ರಸ್ತೆ ಸಂಚಾರ ತಡೆ ನಿಲುಗಡೆ ಮಾಡಬೇಕಾಗಿ ಬಂದಿದೆ ಎಂದು ರಾಮಗೇರಿ ಗ್ರಾಪಂ ಅಧ್ಯಕ್ಷ ಹಾಗೂ ಗುಲಗಂಜಿಕೊಪ್ಪ ಗ್ರಾಮದ ನಿಂಗನಗೌಡ ಪಾಟೀಲ ಹೇಳಿದರು.
ಸ್ಥಳಕ್ಕೆ ಆಗಮಿಸಿದ ಪಿಎಸ್ಐ ವಿಕಾಸ ಲಮಾಣಿ ಹಾಗೂ ಲಕ್ಷ್ಮೇಶ್ವರ ಡಿಪೋ ಮ್ಯಾನೇಜರ್ ನಿತಿನ್ ಅವರು ಸಾರ್ವಜನಿಕರ ಮನವೊಲಿಸಿ ರಸ್ತೆ ಸಂಚಾರ ತಡೆ ಮಾಡುವ ಕಾರ್ಯವನ್ನು ತೆರವುಗೊಳಿಸಿದರು. ನಮ್ಮ ಡಿಪೋದಿಂದ ಸಂಚರಿಸುವ ಎಲ್ಲ ಬಸ್ಗಳನ್ನು ಇಲ್ಲಿ ನಿಲುಗಡೆ ಮಾಡುವಂತೆ ಆದೇಶ ನೀಡಲಾಗಿದೆ. ಯಾವ ಬಸ್ಗಳು ಇಲ್ಲಿ ನಿಲುಗಡೆ ಮಾಡುತ್ತಿಲ್ಲವೆಂಬ ಬಗ್ಗೆ ನಮಗೆ ತಿಳಿಸಿದರೆ ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಚಂದ್ರು ತಳವಾರ, ನೀಲಪ್ಪಗೌಡ ಪಾಟೀಲ, ವಿಜಯೇಂದ್ರ ಬಳಗಾನೂರ, ಅಣ್ಣಪ್ಪ ರಾಮಗೇರಿ, ಬಸಪ್ಪ ಶಿವಬಸಣ್ಣವರ, ಅಡಿವೆಪ್ಪ ನಂದಿಹಳ್ಳಿ, ಚನ್ನಯ್ಯ ಗಡ್ಡದೇವರಮಠ, ರಾಮನಗೌಡ ಪಾಟೀಲ, ಚಂದ್ರಗೌಡ ಗಿರಿಯಪ್ಪಗೌಡರ, ಗಂಗಾಧರ ನಂದಿಹಳ್ಳಿ, ಅಡಿವೆಪ್ಪ ಮಾದರ, ನೀಲಪ್ಪ ತಿಮ್ಮಾಪುರ, ಯಲ್ಲಪ್ಪ ಹೊಸಮನಿ, ಅಡಿವೆಪ್ಪ ನಂದಿಹಳ್ಳಿ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

