ಗದಗ

ಇಂದು ರಾಜ್ಯ ಬಜೆಟ್: ಜಿಲ್ಲೆಗೆ ಸಿಕ್ಕೀತೇ ಸಿದ್ದು ಪ್ರೀತಿ

Published On :

ಕನ್ನಡಪ್ರಭ ವಾರ್ತೆ, ಗದಗ, ಫೆ. 13
ಪ್ರೇಮಿಗಳ ದಿನದಂದೇ ರಾಜ್ಯದ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಗದಗ ಜಿಲ್ಲೆಯ ಜನತೆಯ ನಿರೀಕ್ಷೆಗಳಿಗೆ ನೀರೆರೆಯುತ್ತಾರಾ ಎನ್ನುವ ಪ್ರಶ್ನೆ ಜಿಲ್ಲಾದ್ಯಂತ ಬಲು ಜೋರಾಗಿ ಚರ್ಚಿತ. ಈ ಹಿಂದಿನ ಸರ್ಕಾರ ಅವರ ಕೊನೆಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ನೂತನ ತಾಲೂಕುಗಳಿಗೆ, ನಂತರ ಬಂದ ಕಾಂಗ್ರೆಸ್ ಸರ್ಕಾರ ಪ್ರಾರಂಭದಲ್ಲಿ ಪ್ರಾಧಾನ್ಯ ನೀಡಲಿಲ್ಲ. ಈಗ ಮತ್ತೊಂದು ಬಜೆಟ್ ಮಂಡನೆ ಮಾಡುತ್ತಿದ್ದು, ಈ ಬಾರಿಯಾದರೂ ನೂತನ ತಾಲೂಕುಗಳು ಘೋಷಣೆಯಾಗುತ್ತವೆ ಎನ್ನುವ ಪ್ರಶ್ನೆಗಳು ಎಲ್ಲರಲ್ಲಿ ಒಡಮೂಡಿವೆ.
ತಾಲೂಕು ರಚನೆ ಅಂತಿಮವಾಗಲಿ: ಜಿಲ್ಲೆಯ ಗಜೇಂದ್ರಗಡ, ಲಕ್ಷ್ಮೇಶ್ವರ ಪಟ್ಟಣಗಳು ತಾಲೂಕು ಕೇಂದ್ರಗಳಾಗಬೇಕು ಎನ್ನುವ ಕೂಗು ಬಹಳ ವರ್ಷಗಳದ್ದು. ಈಗಾಗಲೇ ಅಲ್ಲಿ ವಿಶೇಷ ತಹಸೀಲ್ದಾರ್ ಕಚೇರಿಗಳು ಪ್ರಾರಂಭವಾಗಿ ಹಲವಾರು ವರ್ಷಗಳೇ ಕಳೆದಿವೆ. ಈ ಬಾರಿಯ ಬಜೆಟ್‌ನಲ್ಲಾದರೂ ಸಿಎಂ ಸಿದ್ದರಾಮಯ್ಯ ಇದಕ್ಕೆ ಅಂತಿಮ ಸ್ವರೂಪ ನೀಡಿದಲ್ಲಿ ಗದಗ ಜಿಲ್ಲೆ ಆಡಳಿತಾತ್ಮಕವಾಗಿ ಮತ್ತಷ್ಟು ಚುರುಕುಗೊಳ್ಳುವ ಜತೆಗೆ ಆಯಾ ಭಾಗದ ಜನರ ಬಹು ವರ್ಷದ ಬೇಡಿಕೆ ಈಡೇರಿದಂತಾಗುತ್ತದೆ.
ಅನುದಾನಕ್ಕಾಗಿ ಕಾಯುತ್ತಿವೆ: ಪಶುವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ 2ನೇ ಕಂತಿನ ಹಣ ನೀಡಬೇಕಿದೆ. ಇನ್ನು ಜಿಲ್ಲೆಯಲ್ಲಿ ಸ್ಥಾಪನೆಯಾಗಲಿರುವ ವೈದ್ಯಕೀಯ ಕಾಲೇಜಿಗೆ ಈಗಾಗಲೇ ಬಿಡುಗಡೆಯಾಗಿರುವ ಅನುದಾನ ಹೊರತುಪಡಿಸಿ ಹೆಚ್ಚುವರಿ ಅನುದಾನ ನೀಡಬೇಕಿದೆ. ದಶಕಗಳಿಂದ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಗದಗ, ಬೆಟಗೇರಿ ಅವಳಿ ನಗರಕ್ಕೆ ಶಾಶ್ವತ ಕುಡಿವ ನೀರು ಪೂರೈಕೆಗೆ ಅನುಕೂಲವಾಗುವ ದೃಷ್ಟಿಯಿಂದ ಈ ಹಿಂದಿನ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದಂತೆ ಅನುದಾನ ನೀಡಬೇಕಿದೆ. ಇನ್ನು ಜಿಲ್ಲೆಯ ಮುಖ್ಯ ನೀರಾವರಿ ಯೋಜನೆಗಳಾದ ಕಳಸಾ-ಬಂಡೂರಿ ಹಾಗೂ ಸಿಂಗಟಾಲೂರು ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕಿದೆ.
ಆಗಬೇಕಾಗಿವೆ: ಈರುಳ್ಳಿ ಬೆಳೆಯುವಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿರುವ ಗದಗ ಜಿಲ್ಲೆ. ಮಹಾರಾಷ್ಟ್ರದ ಮಾದರಿಯಲ್ಲಿ ಜಿಲ್ಲೆಯಲ್ಲಿ ಅತ್ಯುತ್ತಮವಾದ ಈರುಳ್ಳಿ ಶೈತ್ಯಾಗಾರ ನಿರ್ಮಿಸಬೇಕಿದೆ. ಇನ್ನು ಗದಗ ತಾಲೂಕು ಹಾಗೂ ರೋಣ ತಾಲೂಕಿನ ಹಲವಾರು ಗ್ರಾಮಗಳ ರೈತರು ಪುಷ್ಪೋದ್ಯಮ ನಂಬಿದೆ. ಅವರ ಅನುಕೂಲಕ್ಕಾಗಿಯೂ ಗುಣಮಟ್ಟದ ಪುಷ್ಪ ಸಂಗ್ರಹಾಗಾರ ಮತ್ತು ಮೆಣಸಿನಕಾಯಿ ಸಂಗ್ರಹಕ್ಕೂ ಗೋದಾಮುಗಳ ನಿರ್ಮಾಣವಾಗಬೇಕಿದೆ.
ಕೃಷಿಯನ್ನೇ ಆರ್ಥಿಕ ಹಿನ್ನೆಲೆಯನ್ನಾಗಿ ಹೊಂದಿರುವ ಗದಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸ್ಥಾಪನೆಗೆ ಸಿಎಂ ಗಮನ ನೀಡಬೇಕಿದೆ.
ಶೈಕ್ಷಣಿಕತೆ ಒತ್ತು ಸಿಗಲಿ: ಕಳೆದ ಬಜೆಟ್‌ನಲ್ಲಿ ಕವಿವಿ ಸ್ನಾತಕೋತ್ತರ ಕೇಂದ್ರವನ್ನು ಮಂಜೂರಾಗಿದೆ. ಆದರೆ, ಗದಗ ಜಿಲ್ಲೆ ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ದೃಷ್ಟಿಕೋನದಿಂದ ಅವಲೋಕಿಸಿದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಿಂದಿದೆ. ಉನ್ನತ ಶಿಕ್ಷಣಕ್ಕಾಗಿ ಇಂದಿಗೂ ಜಿಲ್ಲೆಯ ವಿದ್ಯಾರ್ಥಿಗಳು ಧಾರವಾಡವನ್ನೆ ಆಶ್ರಯಿಸಿದ್ದು, ಗದಗ ನಗರದಲ್ಲಿಯೂ ಉನ್ನತ ಶಿಕ್ಷಣ ಕೇಂದ್ರಗಳು ಸ್ಥಾಪನೆಯಾಗಬೇಕು. ಮುಖ್ಯವಾಗಿ ಸರ್ಕಾರವೇ ಇದಕ್ಕೆ ಹೆಚ್ಚಿನ ಗಮನ ನೀಡಿದಲ್ಲಿ ಬಹುತೇಕ ಬಡ ಮತ್ತು ಮಧ್ಯಮ ವರ್ಗದವವೇ ವಾಸಿಸುವ ಜಿಲ್ಲೆಗೆ ಹೆಚ್ಚಿನ ಅನುಕೂಲವಾಗಲಿದೆ.
ಕುಡಿವ ನೀರಿಗೆ ಆದ್ಯತೆ ನೀಡಬೇಕಿದೆ
ಗದಗ ಜಿಲ್ಲೆಯ ಎಲ್ಲಾ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳು ಪ್ರತಿ ಬೇಸಿಗೆಯಲ್ಲಿಯೂ ತೀವ್ರವಾದ ಕುಡಿವ ನೀರಿನ ಸಮಸ್ಯೆ ಎದುರಿಸುತ್ತವೆ. ಆದರೆ, ವಿಪರ್ಯಾಸವೆಂದರೆ ಜಿಲ್ಲಾ ಕೇಂದ್ರವಾದ ಗದಗ-ಬೆಟಗೇರಿ ನಗರದ ಕುಡಿವ ನೀರಿನ ಸಮಸ್ಯೆಯ ಬಗ್ಗೆ ಮಾತ್ರ ಹೆಚ್ಚಿನ ಗಮನ ನೀಡಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕುಡಿವ ನೀರಿನ ಮೂಲಗಳಾದ ಕೊಳವೆಬಾವಿಗಳ ಪುನರುಜ್ಜೀವನ ಹಾಗೂ ಅಂತರ್ಜಲ ಮಟ್ಟದ ಹೆಚ್ಚಳಕ್ಕೆ ವಿಶೇಷ ಪ್ಯಾಕೇಜ್ ಮಾದರಿ ಯೋಜನೆ ಘೋಷಣೆ ಮಾಡಬೇಕಿದೆ.
ನಿರೀಕ್ಷೆ ಅಪಾರ
ಈ ಬಾರಿಯ ಬಜೆಟ್ ಮೇಲೆ ಜಿಲ್ಲೆಯ ಜನತೆಯ ನಿರೀಕ್ಷೆ ಅಪಾರವಾಗಿದೆ. ಇದೆ ಮುಖ್ಯ ಕಾರಣ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ರಾಜ್ಯ   ಸಚಿವ ಸಂಪುಟದಲ್ಲಿಯೇ ಅತ್ಯಂತ ಪ್ರಭಾವಿ ಹಾಗೂ ಹಿರಿಯ ಸಚಿವರು.  (ಸಿಎಂ ಅಭ್ಯರ್ಥಿಯಾಗಿದ್ದವರು)  ಅವರು ಪ್ರತಿನಿಧಿಸುವ ಗದಗ ಜಿಲ್ಲೆಗೆ ಸರ್ಕಾರ ಮತ್ತು ಸಿಎಂ ಮೇಲೆ ಹೆಚ್ಚಿನ ಒತ್ತಡ ತಂದು, ಹೆಚ್ಚಿನ ಯೋಜನೆಗಳನ್ನು ತರುತ್ತಾರೆ ಎನ್ನುವ ನಿರೀಕ್ಷೆ ಜನತೆ ಹೊಂದಿದ್ದಾರೆ.


-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.