ಜಿಲ್ಲೆ ಜನತೆಗಿದ್ದ ಭರವಸೆ ಠುಸ್...
ಕನ್ನಡಪ್ರಭ ವಾರ್ತೆ, ಗದಗ, ಫೆ. 14
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್ನಲ್ಲಿ ಹಲವಾರು ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿರುವುದಂತೂ ನಿಜ. ಇದು ಕೇವಲ ಮುಂಬರುವ ಲೋಕಸಭೆಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಿದಂತೆ ಕಾಣುತ್ತಿದ್ದು, ಇದು ಜಿಲ್ಲೆಯ ಜನರಿಗೆ ಸಿಹಿಗಿಂತ ಕಹಿಯೇ ಜಾಸ್ತಿಯಾಗಿದೆ.
ಜಿಲ್ಲೆಯ ಪ್ರಮುಖ ಬೇಡಿಕೆಗಳಾಗಿದ್ದ ಸಿಂಗಟಾಲೂರು ಏತ ನೀರಾವರಿ ಯೋಜನೆ ಹಣ ಬಿಡುಗಡೆ, ಗಜೇಂದ್ರಗಡ ಮತ್ತು ಲಕ್ಷ್ಮೇಶ್ವರ ತಾಲೂಕು ಘೋಷಣೆ, ಜಿಲ್ಲೆಯ ರೇಲ್ವೆ ಯೋಜನೆಗಳಿಗೆ ತನ್ನ ಪಾಲಿನ ವಂತಿಗೆ ನೀಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡದಿರುವುದು ಜನತೆಯಲ್ಲಿ ಕಹಿ ಮೂಡಿಸಿದೆ. ಗದಗನಲ್ಲಿ ಗಾಳಿ ಮತ್ತು ಸೌರಶಕ್ತಿಯ ವೃತ್ತಿ ಘಟಕಗಳ ಪ್ರಾರಂಭ, ಸ್ವಯಂ ಚಾಲನಾ ಪರೀಕ್ಷಾ ಪಥ, ಪ್ರಸೂತಿ ಆರೈಕೆ ಮತ್ತು ಮಡಿಲು ಕಿಟ್ ಯೋಜನೆಯ ಮಿತಿ ಜಿಲ್ಲೆಗೆ ವಿಸ್ತರಣೆ ಸೇರಿದಂತೆ ಇನ್ನಿತರ ಕೆಲವು ಯೋಜನೆಗಳ ಘೋಷಿಸಿರುವುದು ತುಸು ಸಿಹಿ ಮೂಡಿಸಿದೆ.
ಜಿಲ್ಲೆಗೆ ಸಿಹಿ: ಮಹದಾಯಿ ನ್ಯಾಯಾಧೀಕರಣ ಅಸ್ತಿತ್ವಕ್ಕೆ ಬಂದಿದ್ದು, ನ್ಯಾಯಾಧೀಕರಣದ ಸದಸ್ಯರಿಂದ ರಾಜ್ಯದ ಮಹದಾಯಿ ಜಲಾನಯನ ಪ್ರದೇಶದ ಪರಿವೀಕ್ಷಣೆ, ಸರ್ವಪಕ್ಷಗಳ ಸಹಮತಿಯಂತೆ ನಮ್ಮ ರಾಜ್ಯದ ಪಾಲಿನ ಪಡೆಯಲು ನ್ಯಾಯಸಮ್ಮತ ಹೋರಾಟದ ಮುಂದುವರಿಕೆ ಕುರಿತು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದು, ಇದರಿಂದಾಗಿ ಕಳಸಾ-ಬಂಡೂರಿ ಯೋಜನೆಗೆ ಸಹಕಾರಿಯಾಗುವ ನಿರೀಕ್ಷೆ ಹೊಂದಲಾಗಿದೆ. ಜಿಲ್ಲೆಯ ಸಿಂಗಟಾಲೂರು ಯೋಜನೆಯಲ್ಲಿನ ಕಾಲುವೆಗಳಲ್ಲಿ ನೀರಿನ ಹರಿವನ್ನು ಅಳೆಯುವ ಮತ್ತು ಮಾಹಿತಿಯನ್ನು ಕೇಂದ್ರೀಕರಿಸುವ ಆಧುನಿಕ ಟೆಲೆಮೆಟ್ರಿಕ್ ತಂತ್ರಜ್ಞಾನವನ್ನು ಏಷಿಯನ್ ಅಭಿವೃದ್ಧಿ ಬ್ಯಾಂಕ್ ಸಹಯೋಗದೊಂದಿಗೆ ಅಳವಡಿಸಲು ಉದ್ದೇಶಿಸಲಾಗಿದೆ.
ರಾಜ್ಯದಲ್ಲಿ ಅಂತರ್ಜಲ ಕುಸಿದಿರುವ ಜಿಲ್ಲೆಗಳಲ್ಲಿ ವಿಶೇಷವಾಗಿ ಗದಗ ಜಿಲ್ಲೆಯಲ್ಲಿ ನೈಸರ್ಗಿಕ ನದಿಕೊಳ್ಳಗಳಿಗೆ ಅಡ್ಡಲಾಗಿ ಸರಣಿಯಲ್ಲಿ ಪಿಕಪ್ಗಳನ್ನು ನಿರ್ಮಿಸಲು ಉದ್ದೇಶಲಾಗಿರುವುದು ಸಮಾಧಾನ ತಂದಿದೆ. ಪ್ರಸೂತಿ ಆರೈಕೆ ಮತ್ತು ಮಡಿಲು ಕಿಟ್ ಯೋಜನೆಯ ಮಿತಿಯನ್ನು ಈಗಿರುವ ಗರಿಷ್ಠ 2 ಮಕ್ಕಳು ಮತ್ತು ಕನಿಷ್ಠ 19 ವರ್ಷ ವಯೋವುತಿಯ ನಿಬಂಧನೆಯನ್ನು ಸಡಿಲಿಸಿ ಗದಗ ಒಳಗೊಂಡಂತೆ ರಾಜ್ಯದ 10 ಜಿಲ್ಲೆಗಳ ಎಲ್ಲಾ ಫಲಾನುಭವಿಗಳಿಗೆ ಸೌಲಭ್ಯ ವಿಸ್ತರಿಸಲಾಗಿದ್ದು, ಇದಕ್ಕಾಗಿ ರು. 52 ಕೋಟಿ ಒದಗಿಸಲಾಗಿದೆ. ರಾಜ್ಯದ ಗದಗ ಸೇರಿದಂತೆ 3 ಜಿಲ್ಲೆಗಳಲ್ಲಿ ಗಾಳಿ ಮತ್ತು ಸೌರಶಕ್ತಿಯ ವೃತ್ತಿ, ಘಟಕಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿರುವುದು ಹಾಗೂ ಈ ಕೇಂದ್ರದ ಮೂಲಕ ಪ್ರಸಕ್ತ ವರ್ಷ ಸಾವಿರ ಅಭ್ಯರ್ಥಿಗಳಿಗೆ ತರಬೇತಿ ನೀಡುವದು ಸ್ವಾಗತಾರ್ಹವಾಗಿದೆ. ರಾಜ್ಯದ ಗದಗ ಸೇರಿದಂತೆ 3 ಜಿಲ್ಲೆಗಳಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥ ಸ್ಥಾಪಿಸಲು ಉದ್ದೇಶಿಸಲಾಗಿದೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

