ದೇಶದಲ್ಲಿ ಮೋದಿ ಪರ ಅಲೆ ಎದ್ದಿದೆ: ಸಜ್ಜನರ
ಲಕ್ಷ್ಮೇಶ್ವರ: ದೇಶದ ಮತದಾರರು ಮೋದಿಯನ್ನು ಪ್ರಧಾನಿಯನ್ನಾಗಿ ಮಾಡುವದರಲ್ಲಿ ಅನುಮಾನವಿಲ್ಲ ಎಂದು ವಿಪ ಮಾಜಿ ಸದಸ್ಯ ಶಿವರಾಜ ಸಜ್ಜನರ ಹೇಳಿದರು. ಅವರು ಶುಕ್ರವಾರ ಪಟ್ಟಣದ ಶಿವಣ್ಣ ಮಹಾಂತಶೆಟ್ಟರ್ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ. 16ರಂದು ಗದಗದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಲಾಗುತ್ತಿದ್ದು, ಆ ಸಮಾವೇಶದಲ್ಲಿ ರಾಜ್ಯದ ಬಹುತೇಕ ಬಿಜೆಪಿ ನಾಯಕರು ಉಪಸ್ಥಿತರಿರುತ್ತಾರೆ. ಸಾಮೂಹಿಕ ನಾಯಕತ್ವದೊಂದಿಗೆ ಮುಂದಿನ ಸಂಸತ್ ಚುನಾವಣೆಯನ್ನು ಎದುರಿಸುವ ತಂತ್ರವನ್ನು ಮಾಡಲಾಗುತ್ತದೆ. ದೇಶದಲ್ಲಿ ಮೋದಿಯ ಅಲೆ ವೇಗವಾಗಿ ಬೀಸುತ್ತಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮಲ್ಲಿ ಈಗ ಇರುವ ಅಲ್ಪಸ್ವಲ್ಪ ಭಿನ್ನಾಭಿಪ್ರಾಯ ಹಾಗೂ ವೈಮನಸ್ಸುಗಳನ್ನು ಸರಿಪಡಿಸಿಕೊಂಡು ಎಲ್ಲರೂ ಸೇರಿ ಮುಂಬರುವ ಚುನಾವಣೆಯನ್ನು ಎದುರಿಸುತ್ತೇವೆ. ಅಲ್ಲದೇ ಗದಗದಲ್ಲಿ ನಡೆಯುವ ಸಮಾವೇಶವನ್ನು ಯಶಸ್ವಿಗೊಳಿಸುತ್ತೇವೆ ಎಂದರು. ಸಂಸದ ಶಿವಕುಮಾರ ಉದಾಸಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತೇವೆ ಹಾಗೂ ಅದರಲ್ಲಿ ಗೆಲವನ್ನು ಪಡೆಯುತ್ತೇವೆ ಎಂದರು.
ಆಸ್ಪತ್ರೆಗೆ ಭೇಟಿ, ಆರೋಗ್ಯ ವಿಚಾರಣೆ
ಗದಗ: ಈಚೆಗೆ ಮುಂಡರಗಿ ತಾಲೂಕಿನ ಮೇವುಂಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಹಾಗೂ ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಮಾಜಿ ಸಚಿವ ಸಿ.ಎಂ. ಉದಾಸಿ ಶುಕ್ರವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ರಾಜು ಕುರಡಗಿ, ಬಂಗಾರಶೆಟ್ರ ಮುಂತಾದವರು ಉಪಸ್ಥಿತರಿದ್ದರು.
ಪೇಜಾವರ ಶ್ರೀಗಳಿಂದ ಸೋಮೇಶ್ವರ ದೇವಸ್ಥಾನ ವೀಕ್ಷಣೆ
ಲಕ್ಷ್ಮೇಶ್ವರ: ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇವಸ್ಥಾನಕ್ಕೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಶುಕ್ರವಾರ ಭೇಟಿ ನೀಡಿ ವೃಷಭಾರೂಢ ಸೋಮೇಶ್ವರನ ದರ್ಶನ ಪಡೆದರು. ಪಟ್ಟಣದಲ್ಲಿ ಈಚೆಗೆ ಪುನರುಜ್ಜೀವನಗೊಂಡಿರುವ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಮೂರ್ತಿಗಳ ಪ್ರಾಣ ಪ್ರತಿಷ್ಠಾನ ಹಾಗೂ ಕಳಸಾರೋಹಣ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸೋಮೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಕೈಹಾಕಿರುವ ಇನ್ಫೋಸಿಸ್ ಫೌಂಡೇಶನ್ದ ಸುಧಾ ಮೂರ್ತಿಯವರ ಕಾರ್ಯವನ್ನು ಶ್ಲಾಘಿಸಿದರು. ನಮ್ಮ ಸಂಸ್ಕೃತಿಯ ಕೊಂಡಿಗಳಾಗಿರುವ ದೇವಾಲಯಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಸುಧಾಮೂರ್ತಿ ಅವರು ಸುಮಾರು ರು. 4 ಕೋಟಿ ವೆಚ್ಚದಲ್ಲಿ ಸೋಮನಾಥ ದೇವಸ್ಥಾನದ ಪುನರುಜ್ಜೀವನ ಕಾರ್ಯ ಕೈಗೊಂಡಿದ್ದು ಗಮನಾರ್ಹ ಸಂಗತಿಯಾಗಿದೆ. ಸರ್ಕಾರವು ಕೂಡ ಇಂತಹ ದೇವಸ್ಥಾನಗಳ ರಕ್ಷಣೆ ಮಾಡಬೇಕಾಗಿದೆ ಎಂದರು. ಚಂಬಣ್ಣ ಬಾಳಿಕಾಯಿ, ಗುರುರಾಜ ಪಾಟೀಲ ಕುಲಕರ್ಣಿ, ಪ್ರಭಾಕರ ಪಾಟೀಲ ಕುಲಕರ್ಣಿ, ದಿಗಂಬರ ಪೂಜಾರ, ಬಸವಣ್ಣೆಪ್ಪ ರೊಳ್ಳಿ, ಕೃಷ್ಣಾ ಕುಲಕರ್ಣಿ, ರಮೇಶ ತೊರಗಲ್ ಮುಂತಾದವರು ಹಾಜರಿದ್ದರು.
ಪೇಜಾವರ ಶ್ರೀಗಳಿಂದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರ ಉಡುಪಿ ಕ್ಷೇತ್ರದ ಪೇಜಾವರ ಶ್ರೀಪಾದಂಗಳವರು ಆಗಮಿಸಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಪಟ್ಟಣದ ಲಕ್ಷ್ಮಿವೆಂಕಟೇಶ ದೇವಸ್ಥಾನದ ಲಕ್ಷ್ಮಿವೆಂಕಟೇಶ ಹಾಗೂ ಭೂವರಾಹಸ್ವಾಮಿಯ ದೇವತಾ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ದೇವಸ್ಥಾನಗಳನ್ನು ಜೀರ್ಣೋದ್ಧಾಗೊಳಿಸುವಂತಹ ದೊಡ್ಡ ಕಾರ್ಯವನ್ನು ಕೈಗೊಂಡಿರುವುದು ಸ್ತುತ್ಯಾರ್ಹವಾಗಿದ್ದು, ನಮ್ಮ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ದೇವಸ್ಥಾನದ ಜೀರ್ಣೋದ್ಧಾರದ ಕಾಮಗಾರಿಗಳನ್ನು ಕುರಿತು ಮಾಹಿತಿ ಪಡೆದ ಶ್ರೀಗಳು ದೇವಸ್ಥಾನವನ್ನು ಸುಂದರವಾಗಿ ಸಿದ್ಧಪಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನದ ಅರ್ಚಕ ಗುರುರಾಜಾಚಾರ್ಯ ಗುಡಿ, ವೆಂಕಟೇಶ ಗುಡಿ, ಶ್ರೀನಿವಾಸ ಗುಡಿ, ವೈದ್ಯಬಾಬುರಾವ್ ಕುಲಕರ್ಣಿ, ತಮ್ಮಣ್ಣಸ್ವಾಮಿಗಳು ಹೆಬ್ಬಳ್ಳಿ, ವಿ.ಎಲ್. ಪೂಜಾರ, ಎನ್.ಜಿ. ಹೊಂಬಳ, ಗೋಪಾಲ ಪಡ್ನೀಸ್, ಅನಿಲ ಕುಲಕರ್ಣಿ, ಎ.ಎಸ್. ಹೆಬ್ಬಳ್ಳಿ, ಕೆ.ಎಸ್. ಕುಲಕರ್ಣಿ, ಕೃಷ್ಣ ಕುಲಕರ್ಣಿ, ಪಾಂಡುರಂಗಾಚಾರ್ಯ ರಾಯಚೂರ, ನಾರಾಯಣಭಟ್ ಪುರಾಣಿಕ ಸೇರಿದಂತೆ ನೂರಾರು ಜನರು ಹಾಜರಿದ್ದರು.
ನಾಳೆ ನೃತ್ಯಸ್ಪರ್ಧೆ
ಗಜೇಂದ್ರಗಡ: ಸ್ಥಳೀಯ ದರ್ಶನ್ ಅಭಿಮಾನಿಗಳ ಸೇವಾ ಸಂಘ ವತಿಯಿಂದ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 37ನೇ ಜನ್ಮದಿನದ ಪ್ರಯುಕ್ತ ಫೆ. 16ರಂದು ಸಂಜೆ 6ಕ್ಕೆ ರಾಜವಾಡೆ ಬಯ ಲು ಜಾಗೆಯಲ್ಲಿ ನೃತ್ಯ ಸ್ಪರ್ಧೆ ನಡೆಯಲಿದೆ. ಹಾಗೂ ಇದೇ ಬಳಗ ವತಿಯಿಂದ ಫೆ. 17ರಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಹಾವೇರಿ ಲೋಕಸಭಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಿಥುನ್ ಪಾಟೀಲ, ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಭಗವಾನ್ ಮಹಾವೀರ ಸೇವಾ ಸಮಿತಿ ಕಾರ್ಯದರ್ಶಿ ಅಜೀತ ಬಾಗಮಾರ, ಕೀರ್ತಿಮಾಲಿನಿ ಘೋರ್ಪಡೆ, ಎಸ್.ಎಂ. ಆರಗಿದ್ದಿ, ಶ್ರೀಧರ ಗಂಜಿಗೌಡ್ರ, ಶ್ರೀಕಾಂತ ಅವಧೂತ್, ಎಂ.ಎಚ್. ಕೂಲಕಾರ, ಹನಮಂತಪ್ಪ ಕಲ್ಲೋಡ್ಡರ, ಮುರ್ತುಜಾ ಡಾಲಾಯತ್ ಮುಂತಾದವರು ಪಾಲ್ಗೊಳ್ಳುವರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

