ಮಾರಕ ರೋಗಗಳಿಗಿಂತಲೂ ಜಾತಿ ಅಪಾಯ
ಗದಗ: ಜಾತಿ ಎಂಬುದು ಏಡ್ಸ್, ಕ್ಯಾನ್ಸರ್ನಂತಹ ಮಾರಕ ರೋಗಗಳಿಗಿಂತಲೂ ಅಪಾಯಕಾರಿ ಸಂಸ್ಕೃತಿಯಾಗಿದೆ. ಇದು ಮನುಕುಲಕ್ಕೆ ಬಂದಿರುವ ವ್ಯಾಧಿಯಾಗಿದೆ ಎಂದು ಕೋಡಿಮಠದ ಜ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದರು.
ಅವರು ಶುಕ್ರವಾರ ಸ್ಥಳೀಯ ಹುಡ್ಕೋ ನಗರದಲ್ಲಿರುವ ಅಧ್ಯಾತ್ಮ ವಿದ್ಯಾಶ್ರಮದಲ್ಲಿ ಸತ್ಸಂಗ ಸಮ್ಮೇಳನ, ಆದಿಶಕ್ತಿ ರಥೋತ್ಸವ ಹಾಗೂ ಜ. ಸದಾಶಿವಾನಂದ ಗುರುಗಳ 117ನೇ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಂಬಿಕೆ ಮತ್ತು ವಿಶ್ವಾಸದ ಮೇಲೆ ಈ ಜಗತ್ತು ನಡೆಯುತ್ತಿದೆ. ಮಾನವನಿಗೆ ನಂಬಿಕೆ ಇಲ್ಲದೇ ಹೋದಲ್ಲಿ ನಮಗೆ ಯಾವುದೇ ರೀತಿಯ ಕಾರ್ಯ, ಕೆಲಸ ಕೈಗೊಳ್ಳಲು ಅಸಾಧ್ಯವಾಗಲಿದೆ. ನಮ್ಮ ಅರಿವು ಗುರುವಾಗಬೇಕು. ಅಂದಾಗ ಮಾತ್ರ ಜೀವನದಲ್ಲೆ, ಕೆಲಸ-ಕಾರ್ಯಗಳಲ್ಲಿ ಯಶಸ್ಸು ಕಾಣಲು ಸಾಧ್ಯ. ಆದರೆ, ಇಂದು ಈ ಸಂಸ್ಕೃತಿ ಕಡಿಮೆಯಾಗುತ್ತಿದೆ. ಶರಣರ, ಮಹಾತ್ಮರ ಆದರ್ಶಗಳನ್ನು ಪಾಲಿಸುವ ಸಂಸ್ಕೃತಿ ಬೆಳೆದುಬರಬೇಕಿದೆ. ಅಂಧ ಶ್ರದ್ಧೆ ಮನುಷ್ಯನಿಗೆ ಶ್ರೇಯಸ್ಸು ನೀಡುವುದಿಲ್ಲ. ನಿಜವಾದ ಶ್ರದ್ಧೆ, ಭಕ್ತಿಯೇ ಮನುಷ್ಯನಿಗೆ ಶ್ರೇಯಸ್ಸು ಕಾಣಲು ಸಾಧ್ಯವಿದ್ದು, ಪ್ರತಿಯೊಬ್ಬರೂ ಉತ್ತಮ ನಡೆ-ನುಡಿ ಹೊಂದಿ ಸುಸಂಸ್ಕೃತ ವ್ಯಕ್ತಿಗಳಾಗಿ ಬಾಳುವಲ್ಲಿ ಶ್ರಮಿಸಿ ಎಂದರು.
ಉತ್ತಮ ನಾಗರಿಕರಾಗಿ ಬಾಳಿ: ನೋಡುವ ದೃಷ್ಟಿ, ಆಡುವ ಮಾತು, ನಡೆದುಕೊಳ್ಳುವ ರೀತಿ-ನೀತಿ ಉತ್ತಮವಾಗಿರಬೇಕು. ಯಾರಿಗೂ ನೋವಾಗದಂತೆ ನಡೆದುಕೊಳ್ಳುವುದೇ ಮಾನವ ಧರ್ಮ. ಆದರೆ, ಈ ಪದ್ಧತಿ ಇಂದು ಕ್ಷೀಣಿಸುತ್ತಿರುವುದು ನೋವಿನ ಸಂಗತಿ. ಮಾಡಿದ ತಪ್ಪಿಗೆ ಪ್ರಾಯಶ್ಚಿತ ಪಡೆದುಕೊಳ್ಳುವ ಸಂಸ್ಕೃತಿ ಬೆಳೆಸಿಕೊಳ್ಳಿ, ಪ್ರಾಯಶ್ಚಿತದ ನಂತರವೂ ತಪ್ಪು ಮಾಡಿದಲ್ಲಿ ವಿನಾಶ ಕಟ್ಟಿಟ್ಟ ಬುತ್ತಿ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಿ ಎಂದು ಶ್ರೀಗಳು ಹೇಳಿದರು.
ಶ್ರೀಗಳ ಕಾರ್ಯ ಶ್ಲಾಘನೀಯ: ಮಹಿಳೆ ಜನಿಸಿದರೆ ಪಾಪ ಎನ್ನುವ ಈ ಕಾಲದಲ್ಲಿ ಗದಗನ ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ಈ ಅಧ್ಯಾತ್ಮ ಆಶ್ರಮಕ್ಕೆ ನೀಲಮ್ಮ ತಾಯಿಯವರನ್ನು ನೇಮಿಸಿ ಜನರಿಗೆ ಮಹಿಳೆಯ ಮೇಲಿರುವ ಕೀಳರಿಮೆ ತೊರೆಯಲು ಪ್ರಯತ್ನಿಸಿರುವ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಗದಗನ ಶಿವಾನಂದ ಮಠದ ದಯಾನಂದ ಶ್ರೀಗಳು ದುರಿತ ಕರ್ಮವನೊಲ್ಲದಿರು ಪುಣ್ಯವನೇ ಮಾಡು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಮನುಷ್ಯನು ಅಂತರಂಗ ಶುದ್ಧಿ ಹೊಂದಬೇಕಾದಲ್ಲಿ ಶರಣರ, ಸಂತರ, ಪುಣ್ಯಪುರುಷರ ವಿಚಾರಧಾರೆಗಳ ಅನುಕರಣೆ ಅವಶ್ಯವಾಗಿದೆ. ಉತ್ತಮ ಕೆಲಸ, ಕಾರ್ಯಗಳನ್ನು ಮಾಡುವ ಮೂಲಕ ಅಂತಃಕರಣ ಶುದ್ಧಿಗೊಳಿಸಿಕೊಳ್ಳಲು ಸಾಧ್ಯವಿದೆ. ಧರ್ಮ ಎಂಬುದು ಕಣ್ಣಿಗೆ ಕಾಣುವುದಿಲ್ಲ. ಆದರೆ, ಧರ್ಮವನ್ನು ನಂಬಿದ ಜನರಿಗೆ ಸುಖ, ಸಂತಸ ದೊರೆಯಲಿದ್ದು, ಪ್ರತಿಯೊಬ್ಬರೂ ಧರ್ಮಪಾಲನೆಗೆ ಮುಂದಾಗಿ ಎಂದರು.
ಗದಗ ಶಿವಾನಂದ ಮಠದ ಜ. ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಇಬ್ರಾಹಿಂಪುರ ಶಿವಾನಂದ ಮಠದ ಸಂಪೂರ್ಣಾನಂದ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.
ಗೋಕಾಕ ಜಡೇಶ್ವರ ಮಠದ ಅಭಿನವ ಶಿವಾನಂದ ಶ್ರೀಗಳು, ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ ದೇವರು, ನವದೆಹಲಿ ಬಸವಾಶ್ರಮದ ಮಲ್ಲಯ್ಯ ಶ್ರೀಗಳು, ಅಧ್ಯಾತ್ಮ ವಿದ್ಯಾಶ್ರಮದ ನೀಲಮ್ಮತಾಯಿ, ಬೆಂಗಳೂರು ಕೆಐಡಿಬಿಯ ಕಾರ್ಯದರ್ಶಿ ಕೆ.ಐ. ಗುದಗಿ, ನಗರಸಭೆ ಸದಸ್ಯ ಅನಿಲ ಗರಗ, ವಿಜಯಕುಮಾರ ಹಿರೇಮಠ ಮುಂತಾದವರು ಇದ್ದರು. ಬಿ.ಬಿ. ಹೂಗಾರ ಸ್ವಾಗತಿಸಿ, ಪರಿಚಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

