ಸಮ್ಮೇಳನ: ಸಿಎಂಗೆ ರೈತ ಮೋರ್ಚಾ ಮುತ್ತಿಗೆ
ಕನ್ನಡಪ್ರಭ ವಾರ್ತೆ, ರೋಣ, ಫೆ. 14
ಕಡಲೆಗೆ ಕನಿಷ್ಠ ರು. 3500 ಬೆಂಬಲ ಬೆಲೆ ನಿಗದಿಗೆ, ಕೂಡಲೇ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಿ ಫೆ. 22ರಂದು ಪಟ್ಟಣಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯನವರಿಗೆ ತಾಲೂಕು ಮತ್ತು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಘಟಕ ಹಾಗೂ ಜಿಲ್ಲೆಯ ರೈತ ಸಮುದಾಯದ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ನವಲಗುಂದ ಎಚ್ಚರಿಸಿದರು.
ಈ ಕುರಿತು ಶುಕ್ರವಾರ ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಲೆ ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವಂತೆ ಜ. 8ರಂದು ಮತ್ತು ಜ. 28ರಂದು ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಫೆ. 1ರಂದು ಗದಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು. ಅಲ್ಲದೇ ಫೆ. 7ರಂದು ಹುಬ್ಬಳ್ಳಿಯಲ್ಲಿ ರೈಲು ರೋಖೋ ಚಳವಳಿ ನಡೆಸಲಾಯಿತು. ಆದರೆ, ಸರ್ಕಾರ ಮಾತ್ರ ರೈತರ ಸಮಸ್ಯೆಗೆ ಸ್ಪಂದಿಸುವ ದಿಸೆಯಲ್ಲಿ ಕ್ರಮ ಕೈಗೊಂಡಿಲ್ಲ. ಆದರೆ, ಈಗ ಏಕಾಏಕಿ ಕಡಲೆಗೆ ರು. 3100 ಬೆಂಬಲ ಬೆಲೆ ನಿಗದಿ ಮಾಡಿದ್ದು ಅವೈಜ್ಞಾನಿಕ ದರವಾಗಿದೆ. ಕನಿಷ್ಠ ರು. 3500ಗಳನ್ನಾದರೂ ಮಾಡಬೇಕು. ಅಂದಾಗ ರೈತರ ಶ್ರಮಕ್ಕೆ ಒಂದಿಷ್ಟು ಬೆಲೆ ಸಿಕ್ಕಂತಾಗುತ್ತದೆ ಎಂದು ಆಗ್ರಹಿಸಿದರು.
ಕಾಟಾಚಾರಕ್ಕೆ ಖರೀದಿ ಕೇಂದ್ರ ಸಲ್ಲದು: ಯಾವುದೇ ಯೋಜನೆ ಹಾಕಿಕೊಳ್ಳದೇ ಕಾಟಾಚಾರಕ್ಕೆ ಕಡಲೆಯ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ತರಾತುರಿಯಲ್ಲಿ ತೆರೆಯಲಾಗಿದೆ. ಖರೀದಿ ಕುರಿತು ಮುಂಜಾಗ್ರತೆ ಕ್ರಮ ಅನುಸರಿಸಿಲ್ಲ. ಈವರೆಗೂ ಒಂದು ಚೀಲವಾದರೂ ಖರೀದಿ ಮಾಡಿಲ್ಲ. ಸರ್ಕಾರ, ಅಧಿಕಾರಿ ಮತ್ತು ಜಿಲ್ಲಾ ಮತ್ತು ಸ್ಥಳೀಯ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸದೇ ಶೋಷಣೆ ಮಾಡುತ್ತಿರುವ ಧೋರಣೆ ತೀವ್ರ ಖಂಡನಾರ್ಹವಾಗಿದೆ. ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಿದರೆ ಸಾಲದು, ಕೂಡಲೇ ಖರೀದಿ ಪ್ರಕ್ರಿಯೆಗೆ ಮುಂದಾಗಬೇಕು. ವಿಳಂಬ ಮಾಡಿದಲ್ಲಿ ಜಿಲ್ಲೆಯಲ್ಲಿನ ಕಡಲೆ ಬೆಳೆದ ಎಲ್ಲ ರೈತರನ್ನು ಒಟ್ಟುಗೂಡಿಸಿ ಫೆ. 22ರಂದು ಪಟ್ಟಣಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಫೆ. 16ರಂದು ಬಿಜೆಪಿ ಸಮಾವೇಶ: ಬಿಜೆಪಿ ವಕ್ತಾರ ಗುರುರಾಜ ಕುಲಕರ್ಣಿ ಮಾತನಾಡಿ, ಫೆ. 16ರಂದು ಗದಗ ನಗರದ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಜರುಗಲಿರುವ ಬಿಜೆಪಿ ಜಿಲ್ಲಾ ಸಮಾವೇಶಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ರೋಣ ಕ್ಷೇತ್ರದ 258 ಬೂತ್‌ಗಳಿಂದ ಪ್ರತಿ ಬೂತಿಗೆ 40 ಜನರಂತೆ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾದ್ಯಂತ 40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ಮುಖಂಡ ಶಿವಾನಂದ ಜಿಡ್ಡಿಬಾಗೀಲ ಮುಂತಾದವರು ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

