20 ನಿಮಿಷ 20 ಸುದ್ದಿ
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಚೆ ನೌಕರರಿಂದ ಧರಣಿ
ಗದಗ: ಅಖಿಲ ಭಾರತ ಅಂಚೆ ನೌಕರರ ಗದಗ ವಿಭಾಗದ ಪಿ-3 ಹಾಗೂ ಪಿ-4 ಸಂಘಟನೆಗಳ ನೌಕರರು ನಗರದ ಪ್ರಧಾನ ಅಂಚೆ ಕಚೇರಿ ಆವರಣದಲ್ಲಿ ಬುಧವಾರ ಹಾಗೂ ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಧರಣಿ ನಡೆಸಿದರು. ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ತಕ್ಷಣ ನೇಮಿಸಬೇಕು. ಶೇ. 50 ರಷ್ಟು ತುಟ್ಟಿಭತ್ಯೆ ಮೂಲ ವೇತನದಲ್ಲಿ ವಿಲೀನಗೊಳಿಸಬೇಕು. ಅನುಕಂಪ ಆಧಾರಿತ ನೇಮಕಾತಿಯಲ್ಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು. ಎಲ್ಲ ವರ್ಗಗಳ ಸಿಬ್ಬಂದಿಗೆ 5 ಬಡ್ತಿ ನಿಗದಿಪಡಿಸಬೇಕು, ಹೊಸಪಿಂಚಣಿ ನೀತಿ ರದ್ದುಪಡಿಸಬೇಕು. ಜೆಸಿಎಂ ಸರಿಯಾಗಿಸುವುದು. ನ್ಯಾಯಮಂಡಳಿ ಅವಾರ್ಡ್ಗಳನ್ನು ಜಾರಿಗೊಳಿಸುವುದು. ಒಟಿಎ ಹಾಗೂ ರಾತ್ರಿ ಪಾಳಿ ಕೆಲಸದ ಭತ್ಯೆಯನ್ನು ರೇಲ್ವೆ ಇಲಾಖೆಯೊಂದಿಗೆ ಸಮನ್ವಯಗೊಳಿಸಿ, ಬೆಲೆ ಏರಿಕೆಗೆ ಕಡಿವಾಣ ಹಾಕಿ ಪಿಡಿಎಸ್ ವ್ಯವಸ್ಥೆ ಬಲಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಧರಣಿ ಉದ್ದೇಶಿಸಿ ಮಾತನಾಡಿದ ನೌಕರರ ಸಂಘದ ಪದಾಧಿಕಾರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ
ಲಕ್ಷ್ಮೇಶ್ವರ: ರೈತರು ಸರ್ಕಾರ ನೀಡುತ್ತಿರುವ ಸೌಲಭ್ಯ ಪಡೆದುಕೊಂಡು ತಮ್ಮ ಕೃಷಿಯನ್ನು ಉತ್ತಮ ಪಡಿಸಿಕೊಳ್ಳಬೇಕು ಹಾಗೂ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬೇಕು ಎಂದು ತಾಪಂ ಉಪಾಧ್ಯಕ್ಷೆ ಶಾರದಾ ಕವಲೂರ ಹೇಳಿದರು. ಪಟ್ಟಣದ ಪಶು ಆಸ್ಪತ್ರೆಯಲ್ಲಿ ಗುರುವಾರ ರಾಷ್ಟ್ರೀಯ ವಿಕಾಸ ಯೋಜನೆ ಅಡಿಯಲ್ಲಿ ಉಚಿತವಾಗಿ ಯಾಂತ್ರಿಕೃತ ಮೇವು ಕತ್ತರಿಸುವ 12 ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಿ ಮಾತನಾಡಿದರು. ರೈತರು ತಮಗೆ ನೀಡಿದ ಯಂತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಯಂತ್ರೋಪಕರಣಗಳು ಹೆಚ್ಚು ದಿನ ಬಾಳಿಕೆ ಬರಬಹುದಾಗಿದೆ. ಕೆಲ ರೈತರು ತಮಗೆ ನೀಡಿದ ಮೇವು ಕತ್ತರಿಸುವ ಯಂತ್ರಗಳನ್ನು ಹಣಕ್ಕಾಗಿ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಮೇವು ಕತ್ತರಿಸುವ ಯಂತ್ರಗಳನ್ನು ಸರ್ಕಾರ ಉಚಿತವಾಗಿ ವಿತರಣೆ ಮಾಡುತ್ತಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಯ್ಕೆ ಸಮಿತಿ ಕಾರ್ಯ ಮಾಡಬೇಕು ಎಂದರು. ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ವೈದ್ಯಾಧಿಕಾರಿ ಡಾ. ಎನ್.ಎ. ಹವಳದ, ಡಾ. ಎಸ್.ಎನ್. ಸಜ್ಜನರ ಇದ್ದರು.
ಕರ್ನಾಟಕದ ಪಾಲಿಗೆ ಸಿಹಿ-ಕಹಿ ರೇಲ್ವೆ ಬಜೆಟ್: ಜಿಲ್ಲಾ ಚೇಂಬರ್
ಗದಗ: ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಬುಧವಾರ ಮಂಡಿಸಿದ ರೇಲ್ವೆ ಮುಂಗಡ ಪತ್ರವು ಕರ್ನಾಟಕದ ಪಾಲಿಗೆ ಸಮಾಧಾನಕರವಾಗದಿದ್ದರೂ ನೆನೆಗುದಿಗೆ ಬಿದ್ದಿದ್ದ ಕೆಲ ಯೋಜನೆಗಳಿಗೆ ಮಂಜೂರಾತಿ ದೊರೆತಿದೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಗದಗ-ವಾಡಿ ರೇಲ್ವೆ ಯೋಜನೆಗೆ ಮುಂಗಡ ಪತ್ರದಲ್ಲಿ ಹಾಗೂ ರಾಜ್ಯದ ಪಾಲಿನ ಹಣ ಮಂಜೂರ ನೀಡಲಾಗಿದೆ. ಹುಬ್ಬಳ್ಳಿ-ಮುಂಬೈ ರೈಲು ಸಂಚಾರ ಪ್ರಾರಂಭಿಸಲಾಗಿದೆ. ಹುಬ್ಬಳ್ಳಿ ಸಿಂಕದರಾಬಾದ್ ರೈಲು ವಾರದ 7 ದಿನಗಳ ಕಾಲ ಸಂಚರಿಸುವಂತೆ ಪ್ರಕಟಿಸಬೇಕಾಗಿದೆ. ಉ.ಕ. ಭಾಗದ ಅನೇಕ ಯೋಜನೆಗೆ ಒತ್ತಾಯಿಸಲಾಗಿತ್ತು. ಅವು ಆಗಿಲ್ಲ. ಗದಗ ರೈಲು ನಿಲ್ದಾಣ ಎ. ದರ್ಜೆಗೇರಿಸಲು ಈ ಹಿಂದೆ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಇದು ಕಾರ್ಯರೂಪಕ್ಕೆ ಬಂದಿಲ್ಲ ಮತ್ತು ಗದಗ-ಲಕ್ಷ್ಮೇಶ್ವರ ಮಾರ್ಗ ರಚನೆ ಕೈಗೊಳ್ಳದೆ ಇರುವುದು. ಗದಗ-ಮುಂಡರಗಿ-ಹಡಗಲಿ ಕೊಟ್ಟೂರ ಮಾರ್ಗ ಸರ್ವೇ ಕಾರ್ಯ ಕೈಗೊಳ್ಳದೇ ಇರುವುದು ನೋವು ತಂದಿದೆ ಎಂದು ವೀರಣ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿ ಸಿಹಿ-ಕಹಿ ರೇಲ್ವೆ ಮುಂಗಡ ಪತ್ರವೆಂದು ತಿಳಿಸಿದ್ದಾರೆ.
2050ರಲ್ಲಿ ಸವಾಲು-ಸಮಸ್ಯೆಗಳ ವಿಚಾರ ಮಂಥನ
ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿಯ ಸಾಪ್ತಾಹಿಕ ಸಭೆಯು ರೋಟರಿ ಅಧ್ಯಕ್ಷ ಡಾ. ಪ್ರದೀಪ ಉಗಲಾಟ ಅಧ್ಯಕ್ಷತೆಯಲ್ಲಿ ನಗರದ ರೋಟರಿ ಐ ಕೇರ್ ಸೆಂಟರ್ನಲ್ಲಿ ಈಚೆಗೆ ಜರುಗಿತು. ಸಭೆಯಲ್ಲಿ 2050ರಲ್ಲಿ ಜಗತ್ತು ಎದುರಿಸಬೇಕಾದ ಆಹ್ವಾನಗಳು-ಸಮಸ್ಯೆ ಕುರಿತು ರವೀಂದ್ರ ಕೊಪ್ಪರ ಮಾತನಾಡಿದರು. ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎ.ಎಂ. ಗೌಡರ, ಶಾಂತಾದೇವಿ ಗೌಡರ್ ಅವರ 50ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ವಿ.ಆರ್. ಮಾಳೆಕೊಪ್ಪಮಠ, ಕುಸುಮಾದೇವಿ ಮಾಳೆಕೊಪ್ಪಮಠ, ಐ.ಐ.ಪಟ್ಟಣಶೆಟ್ಟಿ, ಈರಣ್ಣ ಕನಸಾವಿ ಹಾಗೂ ರತ್ನಾ ಕನಸಾವಿಯನ್ನು ಸನ್ಮಾನಿಸಲಾಯಿತು. ಕಸ್ತೂರಿಬಾಯಿ ಹಿರೇಗೌಡರ, ಅನ್ನಪೂರ್ಣಾ ವರವಿ, ಬಸವರಾಜ ಮಾಲಗಿತ್ತಿ, ಕವಿತಾ ದಂಡಿನ, ಬಸವರಾಜ ದಂಡಿನ, ಡಾ. ರಾಜಶೇಖರ ಬಳ್ಳಾರಿ, ಶ್ರೀಧರ ಸುಲ್ತಾನಪುರ, ಡಾ. ಪ್ರಕಾಶ ಕೊಲೋಳಗಿ, ಎಸ್.ಎಫ್. ಬೆನಕಣ್ಣವರ, ಸುಭಾಸ ಬಬಲಾದಿ, ಡಾ. ಎಸ್.ಎಲ್. ಹಕ್ಕಾಪಕ್ಕಿ, ಚನ್ನವೀರ ಹುಣಸಿಕಟ್ಟಿ, ಬಾಲಕೃಷ್ಣ ಕಾಮತ, ಡಾ. ಐ.ಐ. ಪಟ್ಟಣಶೆಟ್ಟಿ ಇದ್ದರು.
ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷರಾಗಿ ಬಳ್ಳಾರಿ
ಗದಗ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾತಿ, ಪ. ಪಂಗಡ ನೌಕರರ ಸಂಘದ ರಾಜ್ಯ ಸಮಿತಿ ಬೆಂಗಳೂರು ವತಿಯಿಂದಿ ಈಚೆಗೆ ನಡೆದ ಸಂಘದ ಸಭೆಯಲ್ಲಿ ಗದಗ ವಿಭಾಗದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಎಸ್ಸಿ, ಎಸ್ಟಿ ನೌಕರರ ಸಂಘದ ಗೌರವಾಧ್ಯಕ್ಷರನ್ನಾಗಿ ಎಸ್.ಎನ್. ಬಳ್ಳಾರಿ ಅವರನ್ನು ಆಯ್ಕೆ ಮಾಡಲಾಯಿತು. ಅದರಂತೆ ಕಾರ್ಯಾಧ್ಯಕ್ಷರಾಗಿ ಎಂ.ಆಂಜನೇಯ, ಅಧ್ಯಕ್ಷರಾಗಿ ಎಸ್.ಬಿ. ಪಡಸಾಲಿ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಸಿ. ಕೊಪ್ಪಳ, ಕೋಶಾಧ್ಯಕ್ಷರನ್ನಾಗಿ ಎಂ.ಎಸ್. ನಾಯ್ಕರ, ಮುಖ್ಯ ಉಪಾಧ್ಯಕ್ಷರನ್ನಾಗಿ ಎಂ.ಡಿ. ವಾಲ್ಮೀಕಿ, ಎಸ್.ಎಸ್. ನರಗುಂದ, ಸಹಕಾರ್ಯದರ್ಶಿಯಾಗಿ ಯಲ್ಲಪ್ಪ ತೇರದಾಳ, ಎಂ.ಎಸ್. ಬುರಡಿ, ಉಪಾಧ್ಯಕ್ಷರಾಗಿ ಪಿ.ಬಿ. ರಾಮೇನಹಳ್ಳಿ, ರಮೇಶ ಚಲವಾದಿ, ಸವಣೂರ, ದೊಡ್ಡಮನಿ, ಎಚ್.ಮ್ಯಾಟನ್ನವರ, ಮುತ್ತು ನಡುವನಕೇರಿ, ಚಂದ್ರು ಹೊಸಮನಿ, ಮೇಘರಾಜ ಲಮಾಣಿ, ಮಹಿಳಾ ಉಪಾಧ್ಯಕ್ಷರಾಗಿ ರಾಮಗಿರಿ, ಬದಾಮಿ, ವೀಣಾ ಚವ್ಹಾಣ, ಸಂಘಟನಾ ಕಾರ್ಯದರ್ಶಿಯಾಗಿ ಡಿ.ನಾಗರಾಜ, ವಿ.ಎಸ್. ಬೆಳಹೊಡ, ಎನ್.ಎಂ. ಬಾಳಮ್ಮನವರ, ಕೆಂಚಪ್ಪ, ಹೊಸಮನಿ, ಸಿ.ಪಿ. ಲೆಂಕೆಣ್ಣವರ ಆಯ್ಕೆಯಾಗಿದ್ದಾರೆ.
ಮಹಾಶರಣ ಹರಳಯ್ಯ ಚಿತ್ರ ಪ್ರದರ್ಶನ, ಮೆರವಣಿಗೆ
ಗದಗ: ಮಹಾಶರಣ ಸಮಗಾರ ಹರಳಯ್ಯ ಚಲನಚಿತ್ರ ನಗರದ ಶಾಂತಿ ಚಿತ್ರಮಂದಿರದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳುವ ಹಿನ್ನೆಲೆಯಲ್ಲಿ ನಗರದ ತೋಂಟದಾರ್ಯ ಮಠದಿಂದ ನಡೆಸಲಾದ ಹರಳಯ್ಯ ಭಾವಚಿತ್ರದ ಮೆರವಣಿಗೆಗೆ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಚಾಲನೆ ನೀಡಿದರು. ಮೆರವಣಿಗೆ ನಂತರ ಜಿಲ್ಲಾ ಸಮಗಾರ ಹರಳಯ್ಯ ಸಮಾಜದ ಪದಾಧಿಕಾರಿಗಳು ನೂರಾರು ಜನತೆ ಸೇರಿ ಚಿತ್ರ ವೀಕ್ಷಿಸಿದರು. ಮೆರವಣಿಗೆಯಲ್ಲಿ ಶಿವಮೂರ್ತೆಪ್ಪ ಅಗಸಿಮನಿ, ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ, ವೆಂಕಣ್ಣ ನರಗುಂದ, ಪರಶುರಾಮ ಅಗಸಿಮನಿ, ಪರಶುರಾಮ ನರಗುಂದ, ಹೂವಪ್ಪ ಚಂದಾವರಿ, ಬಸವರಾಜ ತೆರದಾಳ, ಗಣೇಶ ಕಾಂಬಳೆ, ಭೀಮಣ್ಣ ತೆರದಾಳ ಹುಬ್ಬಳ್ಳಿ, ಪರಶುರಾಮ ಪೂಜಾರ, ರವೀಂದ್ರ ಲಕ್ಕುಂಡಿ, ಪ್ರಕಾಶ ಕಮಡೊಳ್ಳಿ, ಪ್ರಕಾಶ ಬನ್ನಿಗಿಡದ, ಮಂಜುನಾಥ ಅಗಸಿಮನಿ, ಕಲ್ಪನಾ ಹೊನಕೇರಿ, ನೀಲಮ್ಮ ನೆಲದುರ್ಗ, ಇಂದಿರಾ ತೆರದಾಳ, ಅಕ್ಕಮ್ಮ ಮಾನೆ ಮುಂತಾದವರು ಭಾಗವಹಿಸಿದ್ದರು.
ಮೃತಪಟ್ಟವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಿ
ಗದಗ: ಈಚೆಗೆ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡಲು ಪ.ಜಾತಿ, ಪ.ಪಂಗಡದ(ದೌರ್ಜನ್ಯ ತಡೆ) ಕಾಯ್ದೆ 1989 ಮೇಲ್ವಿಚಾರಣೆ ಮತ್ತು ಬಲವರ್ಧನಾ ಸಮಿತಿಯಿಂದ ಶುಕ್ರವಾರ ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಈ ಅಪಘಾತದಲ್ಲಿ 10 ಜನ ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ಹಾಗೂ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿವ ಎಚ್.ಕೆ. ಪಾಟೀಲ ಮೃತರ ಕುಟುಂಬಕ್ಕೆ 1 ಲಕ್ಷ, ಗಾಯಾಳುಗಳಿಗೆ ತಲಾ ರು. 25 ಸಾವಿರ ಘೋಷಣೆ ಮಾಡಿದ್ದು ಇದು ಯಾವುದಕ್ಕೂ ಸಾಲದಾಗಿದೆ. ಮೃತರ ಕುಟುಂಬಕ್ಕೆ ರು. 10 ಲಕ್ಷ, ಗಾಯಾಳುಗಳಿಗೆ ರು. 5 ಲಕ್ಷ ನೀಡಬೇಕು. ಚಿಕಿತ್ಸೆ ಸರ್ಕಾರದಿಂದ ಕೊಡಿಸಬೇಕೆಂದು ಸಮಿತಿ ಒತ್ತಾಯಿಸಿದೆ.
ಗದಗ ರೋಟರಿಯಿಂದ 13 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ
ಗದಗ: ರೋಟರಿ ಕ್ಲಬ್ ಗದಗ-ಬೆಟಗೇರಿ ವೆಲ್ಫೇರ್ ಸೊಸೈಟಿ ಹಾಗೂ ರೋಟರಿ ಕ್ಲಬ್ ಗದಗ-ಬೆಟಗೇರಿಯ ಆಶ್ರಯದಲ್ಲಿ ಈಚೆಗೆ ನೇತ್ರ ಉಚಿತ ಶಸ್ತ್ರಚಿಕಿತ್ಸೆಯು ರೋಟರಿ ಐ ಕೇರ್ ಸೆಂಟರ್ನಲ್ಲಿ ಜರುಗಿತು. ಪಾರ್ವತಮ್ಮ ಗೌಡರ ಸ್ಮರಣಾರ್ಥ ಎ.ಎಂ. ಗೌಡರ ಈ ಶಸ್ತ್ರಚಿಕಿತ್ಸೆ ಶಿಬಿರದ ಪ್ರಾಯೋಜತ್ವ ವಹಿಸಿದ್ದರು. ಈ ಶಿಬಿರದಲ್ಲಿ ಒಟ್ಟು 58 ಜನರನ್ನು ತಪಾಸಣೆ ಮಾಡಿ 13 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆಯನ್ನು ಡಾ. ಬಿ.ಜಿ. ಹಿರೇಮಠ ನೆರವೇರಿಸಿದರು. ಡಾ. ಬಿ.ಎನ್. ಪಾಟೀಲ ತಪಾಸಿಸಿದರು. ನೇತ್ರ ಸಹಾಯಕ ಎಲ್.ಕೆ. ಜಂಗಣ್ಣವರ, ಮಾರ್ಥ, ರತ್ನಾ ಹಾಗೂ ಈರಣ್ಣ ಕನಸಾವಿ ಶಸ್ತ್ರಚಿಕಿತ್ಸೆ ಮಾಡಲು ಸಹಾಯ ಮಾಡಿದರು. ಡಾ. ಪ್ರದೀಪ ಉಗಲಾಟ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿ.ಪಿ. ಹುಣಸಿಕಟ್ಟಿ, ಡಾ. ಎಸ್.ಕೆ. ನಾಲವತ್ತವಾಡಮಠ, ಎಸ್.ಎಫ್. ಬೆನಕಣ್ಣವರ, ಎಚ್.ಎಸ್. ಪಾಟೀಲ, ವಿಶ್ವನಾಥ ಯಳಮಲಿ ಮುಂತಾದವರು ಇದ್ದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಧರ ಸುಲ್ತಾನಪುರ ನಿರೂಪಿಸಿ, ವಂದಿಸಿದರು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರು. 5 ಲಕ್ಷ ನೀಡಿ
ಮುಂಡರಗಿ: ತಾಲೂಕಿನ ಡಂಬಳ ಸಮೀಪದಲ್ಲಿ ಈಚೆಗೆ ಜರುಗಿದ ಮದುವೆ ಟ್ರ್ಯಾಕ್ಟರ್ ಮತ್ತು ಲಾರಿ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸರ್ಕಾರ ರು. 5 ಲಕ್ಷ ಪರಿಹಾರಧನ ನೀಡಬೇಕೆಂದು ಪಟ್ಟಣದ ಡಾ. ಅಂಬೇಡ್ಕರ್ ದಲಿತ ಸಂಘ ಮತ್ತು ಹಲವು ಕನ್ನಡ ಪರ ಸಂಘಟನೆಗಳು ಶನಿವಾರ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಘಟನೆ ಜರುಗಿದ ದಿನವೇ ಜಿಲ್ಲಾ ಉಸ್ತುವಾರಿ ಸಚಿವರು ಮೃತರ ಕುಟುಂಬಕ್ಕೆ ಸರ್ಕಾರದಿಂದ ರು. 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದು, ಅದನ್ನು ರು. 1 ಲಕ್ಷದ ಬದಲಾಗಿ ರು. 5 ಲಕ್ಷ ನೀಡಬೇಕೆಂದು ಸಂಘಟನೆಯ ಎಲ್ಲ ಸದಸ್ಯರು ಒತ್ತಾಯಿಸಿದ್ದಾರೆ. ಸಂತೋಷ ಹಿರೇಮನಿ, ಹನುಮಂತ ಅಣ್ಣಿಗೇರಿ, ಮಜೂರಪ್ಪ ಪೂಜಾರ, ಈರಪ್ಪ, ಪರುಶುರಾಮ ಜಾಲವಾಡಗಿ, ಯಲ್ಲಪ್ಪ, ಮಹೇಶ ವಡ್ಡರ, ಎಂ.ಆರ್. ಬಂಡಿವಡ್ಡರ, ಹನುಮಂತ ವಡ್ಡರ, ಉಮೇಶ ಬ್ಯಾಲವಾಡಗಿ, ಮಂಜುನಾಥ ಮುಧೋಳ, ಪವನ್ ಚೋಪ್ರಾ, ಹನುಮಂತ ಹದಗಾರ, ಕುರವತ್ತೆಪ್ಪ ಅರಿಸಿನದ, ನಾಗರಾಜ ಮುರಡಿ ಇತರರಿದ್ದರು.
ರಾಷ್ಟ್ರದ ಅಭಿವೃದ್ಧಿ ಆ ರಾಷ್ಟ್ರದ ಮತದಾರರ ಕೈಯಲ್ಲಿದೆ
ಗದಗ: ಮತದಾನ ಅತ್ಯಂತ ಪವಿತ್ರವಾದ ಹಕ್ಕಾಗಿದ್ದು ಒಂದು ರಾಷ್ಟ್ರದ ಅಭಿವೃದ್ಧಿ ಆ ರಾಷ್ಟ್ರದ ಮತದಾರರ ಕೈಯಲ್ಲಿದೆ ಎಂದು ಉಪನ್ಯಾಸಕ ಎಸ್.ಎಸ್. ಶೀಲಿಮಠ ಹೇಳಿದರು. ಅವರು ನಗರದ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಹಾಗೂ ಕಲಾ ಮಹಾವಿದ್ಯಾಲಯದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಶುಕ್ರವಾರ ಜರುಗಿದ ಮತದಾರರ ಜಾಗ್ರತ ಅಭಿಯಾನದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಅತ್ಯಂತ ಹೆಚ್ಚು ಮಹತ್ವವಿದೆ. 18 ವರ್ಷ ಮೀರಿದವರು ಕಡ್ಡಾಯವಾಗಿ ಮತದಾರರ ಯಾದಿಯಲ್ಲಿ ಹೆಸರು ನೋಂದಾಯಿಸಿ ಮತದಾನಮಾಡಿ ಪ್ರಾಮಾಣಿಕ ನಾಯಕರನ್ನು ಆಯ್ಕೆಮಾಡಿಕೊಳ್ಳಬಹುದು ಎಂದರು. ಜಿ.ಟಿ. ಹಿಡ್ಕಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಹಿಡ್ಕಿಮಠ ಅರ್ಹ ವಿದ್ಯಾರ್ಥಿಗಳಿಗೆ ಮತದಾರರ ನೋಂದಣಿ ಫಾರ್ಮ ವಿತರಿಸಿದರು. ಎಸ್.ಎಂ. ಗೌಡರ, ಪ್ರಾ. ಬಿ.ಜಿ. ಹಿರೇಮಠ, ವಿ.ಎಂ. ಗುರುಮಠ ಇದ್ದರು. ಅಕ್ಷತಾ ಬಣ್ಣದಬಾವಿ ಪ್ರಾರ್ಥಿಸಿದರು. ಡಾ. ಆರ್.ಎಸ್. ದಾನರಡ್ಡಿ ನಿರೂಪಿಸಿದರು. ಎಫ್.ಬಿ. ಅಂಗಡಿ ವಂದಿಸಿದರು
ಜನಜಾಗೃತಿ ಮೂಡಿಸಿದ ಸಂತ ಸೇವಾಲಾಲರು: ನಾಯಕ
ಗದಗ: ಸಮಗ್ರ ಮಾನದ ಕುಲದ ಒಳಿತಿಗಾಗಿ ಅಲೆಮಾರಿ ಜೀವನ ನಡೆಸುತ್ತ ಲೋಕ ಕಲ್ಯಾಣಾರ್ಥವಾಗಿ ಗೋವುಗಳೊಂದಿಗೆ ದೇಶ ಸಂಚಾರ ಮಾಡಿದ ಮಹಾನ್ ಸಂತ ಸೇವಾಲಾಲರು ಎಂದು ಡಿ.ಎಸ್. ನಾಯಕ ಹೇಳಿದರು. ಅವರು ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಸಂತ ಸೇವಾಲಾಲರ 275ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಬಂಜಾರಾ ಸಮಾಜದ ದೇವರು, ಸಮಾನತೆ, ಅಹಿಂಸೆ, ಕಾಯಕದ ಮಹತ್ವ ತಿಳಿಸಿದ ಪವಾಡ ಪುರುಷರು. ಸಮಾಜದಲ್ಲಿರುವ ವರ್ಣಭೇದವನ್ನು ತೀವ್ರವಾಗಿ ಖಂಡಿಸಿ 12ನೇ ಶತಮಾನದ ಬಸವಣ್ಣನವರು ಮಾಡಿದ ಕ್ರಾಂತಿ ಹಾದಿಯಲ್ಲಿ ನಡೆದವರು ಸಂತ ಸೇವಾಲಾಲರು ಎಂದರು. ಪ್ರಾ. ವೈ.ಆರ್. ಹಿರೇಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಧನರಾಜ ಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ಸೇವಾಲಾಲರ ಭಾವಚಿತ್ರ ಪೂಜೆ, ಪುಷ್ಪಾರ್ಪಣೆ ಜರುಗಿತು. ಶಿಕ್ಷಕ ಎಚ್.ಎಸ್. ಬ್ಯಾಳಿ ಸ್ವಾಗತಿಸಿದರು. ಶಿಕ್ಷಕ ವಿ.ಜಿ. ಕಾಂಬಳೇಕರ ನಿರೂಪಿಸಿ, ವಂದಿಸಿದರು.
ಮಕ್ಕಳಿಗೆ ಪ್ರೀತಿ ವಾತ್ಸಲ್ಯದಿಂದ ಅಕ್ಷರ ಜ್ಞಾನ ಬಿತ್ತಿ
ಗದಗ: ಮುಗ್ದ ಮಕ್ಕಳ ಬಾಳಲ್ಲಿ ಅಕ್ಷರ ಜ್ಞಾನವನ್ನು ಪ್ರೀತಿ ವಾತ್ಸಲ್ಯದೊಂದಿಗೆ ಬಿತ್ತುವ ಕಾರ್ಯ ಪೂರ್ವ ಪ್ರಾಥಮಿಕ ಶಾಲೆಯಿಂದ ಆರಂಭಗೊಳ್ಳಬೇಕು. ಶಿಕ್ಷಕಿಯರು ತಾಯಿಯಾಗಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಯಾದಂತಾಗುವುದು ಎಂದು ಗದಗ ಜೆ.ಟಿ. ಕಾಲೇಜಿನ ಉಪನ್ಯಾಸಕಿ ಡಾ. ಜ್ಯೋತಿ ಕಮತ್ ಹೇಳಿದರು. ಗುರುವಾರ ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ಪೂರ್ವ ಪ್ರಾಥಮಿಕ ಶಾಲೆಯ ಪಾಲಕರ ದಿನಾಚರಣೆ ಹಾಗೂ ಮಕ್ಕಳ ಹಬ್ಬದಲ್ಲಿ ಮಾತನಾಡಿ, ಮಕ್ಕಳನ್ನು ಸುಸಂಸಸ್ಕೃತರನ್ನಾಗಿ ಮಾಡುವಲ್ಲಿ ಶಿಕ್ಷಕರು, ಪೋಷಕರು ಶ್ರಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ರಾಜೇಶ್ವರಿ ಬಳ್ಳಾರಿ ಮಾತನಾಡಿದರು. ಮುಖ್ಯೋಪಾಧ್ಯಾಯನಿ ಸುಮಂಗಲಾ ತುಪ್ಪದ, ಡಾ. ರಾಜಶೇಖರ ಬಳ್ಳಾರಿ, ದೊಡ್ಡಪ್ಪ ಅಲ್ಲಮನವರ, ಜಯಮ್ಮ ಅಲ್ಲಮ್ಮನವರ, ಅನ್ನದಾನೇಶ್ವರ ತುಪ್ಪದ ಹಾಗೂ ಪಾಲಕರು ಇದ್ದರು.
ರೋಟರಿ ಶಿಕ್ಷಣ ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ
ಮುಂಡರಗಿ: ಪಾಲಕರು ಹಾಗೂ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.ಈಚೆಗೆ ಸ್ಥಳೀಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ. ಲಿಂಬಿಕಾಯಿ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಸರಸ್ವತಮ್ಮ ವಿ. ಲಿಂಬಿಕಾಯಿ ಪೂರ್ವ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಜ್ಞಾನದೀಪ ವಾರ್ಷಿಕ ಪತ್ರಿಕೆ ಬಿಡುಗಡೆ ಮತ್ತು ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವೈ.ಎನ್. ಗೌಡರ ಮಾತನಾಡಿದರು. ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೋಟ್ರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಅಂದಪ್ಪ ಬೆಲ್ಲದ, ಬಿಇಒ ಎಂ.ಎ. ರಡ್ಡೇರ, ಪುರಸಭ ಸದಸ್ಯ ಸುರೇಶ ಮಾಳೆಕೊಪ್ಪ, ಬಸವಪ್ರಭು ಅರಸ, ಡಾ.ಪ್ರಿಯದರ್ಶಿನಿ, ಎಸ್.ವಿ. ಲಿಂಬಿಕಾಯಿ, ಡಾ. ಅನ್ನದಾನಿ ಮೇಟಿ, ಎ.ಜಿ. ಕಡ್ಡಿ, ಮುಖ್ಯೋಪಾಧ್ಯಾಯ ಸಿ.ವಿ. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಅಕ್ಕಿಗುಂದ ತಾಂಡಾದಲ್ಲಿ ಸೇವಾಲಾಲ್ ಜಯಂತಿ
ಲಕ್ಷ್ಮೇಶ್ವರ: ಸಂತ ಸೇವಾಲಾಲ ಮಹಾರಾಜರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯರಾದ ಸೋಮಸಿಂಗ್ ದೊಡ್ಡಮನಿ ಹೇಳಿದರು. ಸಮೀಪದ ಅಕ್ಕಿಗುಂದ ತಾಂಡಾದಲ್ಲಿ ಶನಿವಾರ ಸೇವಾಲಾಲರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಂಪ್ರದಾಯಿಕ ಬೋಗ್ ಪೂಜೆ ಮಾಡುವ ಮೂಲಕ ಸೇವಾಲಾಲರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪರಮೇಶ ಲಮಾಣಿ, ತಾಪಂ ಮಾಜಿ ಸದಸ್ಯ ಜಾನು ಲಮಾಣಿ ಮಾತನಾಡಿ, ಸಮಾಜದ ಯುವಕರು ಶೈಕ್ಷಣಿಕ ಮಹತ್ವ ಅರಿತು ಉನ್ನತ ಶಿಕ್ಷಣ ಪಡೆದುಕೊಂಡು ತಮ್ಮ ಜೀವನಮಟ್ಟ ಸುಧಾರಣೆ ಮಾಡಿಕೊಳ್ಳಬೇಕು ಎಂದರು. ವೆಂಕಪ್ಪ ಕಾರಬಾರಿ, ಹಾನಪ್ಪ ಲಮಾಣಿ, ದೇವಲಪ್ಪ ಲಮಾಣಿ, ತುಕ್ಕಪ್ಪ ಲಮಾಣಿ, ಕೀರಪ್ಪ ಲಮಾಣಿ, ಮೋತೆಪ್ಪ ಲಮಾಣಿ, ಜಿಪಂ ಮಾಜಿ ಸದಸ್ಯ ದೀಪಕ ಲಮಾಣಿ, ಕೃಷ್ಣ ಲಮಾಣಿ, ಶಿವಪ್ಪ ಶಿರಬಡಗಿ, ಶೇಷಪ್ಪ ಲಮಾಣಿ, ಗೋಪಿ ನಾಯಕ ಮುಂತಾದವರು ಹಾಜರಿದ್ದರು. ಕಿರಣ ಲಮಾಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕ ಮರುಪಾವತಿ
ಗದಗ: 2013-14ನೇ ಸಾಲಿನ ಆಯವ್ಯಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳ ಶೈಕ್ಷಣಿಕ ಶುಲ್ಕವನ್ನು ಮರುಪಾವತಿಸುವ ಯೋಜನೆಯನ್ನು ಹೊಸದಾಗಿ ಆರಂಭಿಸಿದೆ. ಈ ಯೋಜನೆಯನ್ನು ಸುಸೂತ್ರವಾಗಿ ಅನುಷ್ಠಾನಗೊಳಿಸಲು ಸ್ಪಷ್ಟ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಅರ್ಹ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರುಪಾವತಿಸಬಹುದಾಗಿದೆ. ರಾಜ್ಯ ಪ್ರತಿನಿಧಿಸಿ ರಾಷ್ಟ್ರ, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ವಿಜೇತರಿಗೆ ಪ್ರೋತ್ಸಾಹ ನೀಡುವುದು. ಪ್ರವೇಶ ಶುಲ್ಕ, ಬೋಧನಾ ಶುಲ್ಕವನ್ನು ಮರುಪಾವತಿ ಮಾಡಲಾಗುವುದು. ಹೆಚ್ಚಿನ ವಿವರ, ಅರ್ಜಿಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿಯಿಂದ ಪಡೆಯಬಹುದು. ಪಿಯುಸಿಯಿಂದ ಸ್ನಾತಕೋತ್ತರ ಪದವಿ (ವೃತ್ತಿಪರ ಕೋರ್ಸ್ಗಳನ್ನೊಳಗೊಂಡಂತೆ) ವ್ಯಾಸಂಗ ಮಾಡುತ್ತಿರುವ ಕೇಂದ್ರ, ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಕ್ರೀಡಾ ವಿದ್ಯಾರ್ಥಿಗಳು ಅರ್ಹರಿರುತ್ತಾರೆ. ಜಿಮ್ನಾಸ್ಟಿಕ್ ಮತ್ತು ಈಜು ಕ್ರೀಡಾಪಟುಗಳಿಗೆ 5ನೇ ತರಗತಿಯಿಂದ ಸ್ನಾತಕೋತ್ತರ ವರೆಗೆ ವ್ಯಾಸಂಗ ಮಾಡುತ್ತಿರುವವರು ಅರ್ಹರಿರುತ್ತಾರೆ.
ಕಾಂಕ್ರೀಟ್ ರಸ್ತೆ, ಗಟಾರ ನಿರ್ಮಾಣ ಕಾಮಗಾರಿಗೆ ಚಾಲನೆ
ಗಜೇಂದ್ರಗಡ: ಸಮೀಪದ ರೋಣ ಮತಕ್ಷೇತ್ರದ ನಾಗರಸಕೊಪ್ಪ ತಾಂಡಾದಲ್ಲಿ ರು. 10 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ, ಗಟಾರ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಎಸ್. ಪಾಟೀಲ ಅವರು ಮಂಗಳವಾರ ಭೂಮಿಪೂಜೆ ನೇರವೇರಿಸಿದರು. ಬಳಿಕ ಮಾತನಾಡಿದ ಶಾಸಕರು, ಸರ್ಕಾರಿ ಕಟ್ಟಡಗಳು ಇನ್ನಿತರ ರಸ್ತೆ ಕಾಮಗಾರಿ ನಡೆಸುವ ಗುತ್ತಿಗೆದಾರರು, ಅಭಿಯಂತರು ಗುಣಮಟ್ಟ ಕಾಯ್ದುಕೊಂಡು ಉತ್ತಮ ಕಾರ್ಯ ನಿರ್ವಹಿಸಬೇಕು. ಗುತ್ತಿಗೆದಾರರು ಲಾಭಕ್ಕಾಗಿ ಕಳಪೆ ಕಾಮಗಾರಿಗೆ ಮುಂದಾದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಕಮ್ಮಾರ, ಹೊಳೆಯಪ್ಪ ದಮ್ಮೂರ, ದೇವೇಂದ್ರಪ್ಪ ಚವ್ವಾಣ, ಶಾಂತಪ್ಪ ಸೊಬರದ, ಈರಪ್ಪ ಸೊಬರದ, ವೀರಣ್ಣ ಸೊನ್ನದ, ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ವಿ.ಆರ್. ಗುಡಿಸಾಗರ, ಶ್ರೀಕಾಂತ ಅವಧೂತ, ಎಫ್.ಎಸ್. ಕರಿದುರಗನವರ, ಚಂದ್ರಶೇಖರ ಭೋಸ್ಲೆ, ಮೌನೇಶ್ವರಪ್ಪ ಭೋಸ್ಲೆ, ಶ್ರೀಧರ ಗಂಜಿಗೌಡರ, ಹಸನ ತಟಗಾರ, ರವಿ ಗಡೇದವರ, ಉಮೇಶ ರಾಠೋಡ, ಮಾರುತಿ ಕಲ್ಲೊಡ್ಡರ, ಕೋಟ್ರೇಶ ಚಿಲಕಾ ಇದ್ದರು.
ಮುಳಗುಂದ: ಅಕ್ಕಮಹಾದೇವಿ ಜಯಂತಿ ಆಚರಣೆ
ಮುಳಗುಂದ: ಅಕ್ಕಮಹಾದೇವಿಯ ಆದರ್ಶ ಅಳವಡಿಸಿಕೊಂಡಾಗ ಬದುಕು ಸಾರ್ಥಕ ಎಂದು ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು. ಅವರು ಬಾಲಲೀಲಾ ಮಹಾಂತ ಶಿವಯೋಗಿಗಳ 155ನೇ ಸ್ಮರಣೋತ್ಸವ ಹಾಗೂ ಅಕ್ಕಮಹಾದೇವಿಯ ಜಯಂತಿಯ ಆಚರಣೆಯ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಉಪನ್ಯಾಸಕಿ ಡಾ. ಶರಣಮ್ಮ ಗೋರೆಬಾಳ ಉಪನ್ಯಾಸ ನೀಡಿದರು. ಪಪಂ ಸದಸ್ಯ ಸಿ.ಬಿ. ಬಡ್ನಿ ಮಾತನಾಡಿ, ಸಮಾಜದಲ್ಲಿ ನಡೆಯುವ ಜಾತಿ ಗಲಭೆ, ಧರ್ಮ ನಿಂಧನೆಗಳು ನಿಲ್ಲಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ನವಲಗುಂದ ಗವಿಮಠದ ಬಸವಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ರೇವಣ ಸಿದ್ಧಯ್ಯ ಮರಿದೇವರಮಠರಿಂದ ವಚನ ಸಂಗೀತ, ಹುಬ್ಬಳಿಯ ಸುಜಾತಾ ರಾಜಗೋಪಾಲ ಅವರ ತಂಡದ ನೃತ್ಯ ಜರುಗಿತು. ಎಂ.ಎಂ. ಮರಿದೇವರಮಠ, ಆರ್.ಎಫ್. ಹಿರೇಮಠ, ಎಸ್.ಎಂ. ಉಜ್ಜಣ್ಣವರ ಇತರರು ಉಪಸ್ಥಿತರಿದ್ದರು. ಡಾ. ಎಸ್.ಸಿ. ಚವಡಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

