ಕಾಂಗ್ರೆಸ್ ಮುಕ್ತ, ಸುಭದ್ರ ಭಾರತ ನಿರ್ಮಿಸಲು ಶ್ರಮಿಸಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 16
ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗಬೇಕಾದಲ್ಲಿ ಎಲ್ಲರೂ ಬಿಜೆಪಿ ಬೆಂಬಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು.
ಭಾನುವಾರ ಸಂಜೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ 'ಭಾರತ ಗೆಲ್ಲಿಸಿ' ಬೃಹತ್ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಮೃದು ಧೋರಣೆಯಿಂದ ದೇಶದಲ್ಲಿ ಭಯೋತ್ಪಾದನೆ, ನಕ್ಸಲ್ವಾದ, ಭ್ರಷ್ಟಾಚಾರ, ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಿದ್ದು, ಪ್ರತಿ ಚುನಾವಣೆ ಸಂದರ್ಭದಲ್ಲಿ ಹಳಸಲು ಗರೀಬಿ ಹಠಾವೋದಂಥ ಘೋಷಣೆಗಳೊಂದಿಗೆ ಮತದಾರನ ಮುಂದೆ ಬರುವ ಕಾಂಗ್ರೆಸ್ನ ಕುತಂತ್ರಕ್ಕೆ ಮರುಳಾಗದೇ, ದೇಶದ ಗೌರವ ಪ್ರತಿಷ್ಠೆ ಕಾಪಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಬೆಂಬಲಕ್ಕೆ ಪ್ರಾಧಾನ್ಯತೆ ನೀಡಬೇಕಿದೆ.
ರಿಂಗ್ ಮಾಸ್ಟರ್: ಕಲ್ಲಿದ್ದಲು ಹಗರಣಗಳಿಂದ ದೇಶದ ಮಾನ ಹರಾಜಾಗಿದೆ. ಕಾಂಗ್ರೆಸ್ನ ರಾಹುಲ್ ಗಾಂಧಿ ಸದ್ಯ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತುಕೊಂಡಿದ್ದು ಬಿಜೆಪಿ ಭ್ರಷ್ಟರ ಹಾಗೂ ಲೂಟಿಕೋರರ ಪಕ್ಷ ಎಂದು ಹೇಳಿಕೆ ನೀಡುತ್ತ ಸಾಗಿದ್ದಾರೆ. ದೇಶಕ್ಕೆ ಸ್ವಯಂ ನಿರ್ಧಾರ ಹಾಗೂ ದೇಶದ ಗೌರವ ಕಾಪಾಡುವ ಪ್ರಧಾನಿ ಅವಶ್ಯಕತೆ ಇದೆಯೇ ಹೊರತು ರಿಂಗ್ ಮಾಸ್ಟರ್ ಸಂಸ್ಕೃತಿಯ ಪ್ರತೀಕವಾದ ಕಾಂಗ್ರೆಸ್ ಆಡಳಿತವಲ್ಲ ಎಂದರು.
ಭವಿಷ್ಯ ಬದಲಾವಣೆ ಕಾಲ: ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ದೇಶವನ್ನು ಭಯೋತ್ಪಾದನೆ ಅಪಾರವಾಗಿ ಕಾಡುತ್ತಿದೆ. ಭವಿಷ್ಯ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಜಗತ್ತು ಭಾರತದತ್ತ ಗಮನಿಸುತ್ತಿದೆ. ಕೇವಲ ಘೋಷಣೆಗಳಿಂದ ಮತದಾರರನ್ನು ಭ್ರಮೆಯಲ್ಲಿಡುವುದು ಅಸಾಧ್ಯವೆನ್ನುವ ಮನವರಿಕೆ ಕಾಂಗ್ರೆಸ್ಸಿಗರು ಅರಿತುಕೊಳ್ಳಬೇಕಿದೆ. ಸಾಧನೆಯ ಮೂಲಕ ಜನಪ್ರಿಯತೆ ಗಳಿಸಿರುವ ನರೇಂದ್ರ ಮೋದಿ ಕಾಂಗ್ರೆಸ್ಗರ ಪಾಲಿಗೆ ಸಿಂಹಸ್ವಪ್ನವಾಗಿದ್ದು, ಭವ್ಯ ಭಾರತದ ನೂತನ ಆಶಾಕಿರಣವಾಗಿದ್ದಾರೆ ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಆರ್ಥಿಕ ತಜ್ಞ ಪ್ರಧಾನಿ ಮನಮೋಹನ್ಸಿಂಗ್ ಆಧಿಕಾರದಲ್ಲಿ ದೇಶದಲ್ಲಿ ಹಣದ್ದುಬ್ಬರ, ಬೆಲೆ ಏರಿಕೆ ಹೆಚ್ಚಾಗಿ ಸಾಮಾನ್ಯರು ಪರಿತಪಿಸುವಂತಾಗಿದೆ. ಇದು ಕಾಂಗ್ರೆಸ್ ದೇಶಕ್ಕೆ ನೀಡಿದ ಬೃಹತ್ ಕೊಡುಗೆಯಾಗಿದೆ. ರಾಷ್ಟ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದ್ದು, ಇಚ್ಚಾಶಕ್ತಿಯುಳ್ಳ ನಾಯಕರ ಅವಶ್ಯಕತೆಯನ್ನು ಮತದಾರ ಮನಗಂಡಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸಲಿದ್ದಾರೆ ಎಂದರು.
ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ ಮಾತನಾಡಿದರು. ಮಾಜಿ ಸಚಿವ ಸಿ.ಸಿ. ಪಾಟೀಲ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಸಿ.ಎಸ್. ಮುತ್ತಿನಪೆಂಡಿಮಠ, ರಾಮಣ್ಣ ಲಮಾಣಿ, ವಿಪ ಸದಸ್ಯ ನಾರಾಯಣಸಾ ಭಾಂಡಗೆ, ವಿಪ ಮಾಜಿ ಸದಸ್ಯ ಶಿವರಾಜ ಸಜ್ಜನ, ಈಶಣ್ಣ ಮುನವಳ್ಳಿ, ಜಯಶ್ರೀ ಉಗಲಾಟದ, ಎಂ.ಎಸ್. ಕರಿಗೌಡ್ರ, ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ ಮುಂತಾದವರು ಪಾಲ್ಗೊಂಡಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ಸ್ವಾಗತಿಸಿದರು. ಎಂ.ಎಂ. ಹಿರೇಮಠ ನಿರೂಪಿಸಿದರು. ಮೋಹನ ಮಾಳಶೆಟ್ಟಿ ವಂದಿಸಿದರು.ಇದೇ ಸಮಯದಲ್ಲಿ ವಿವಿಧ ಪಕ್ಷಗಳ ಮುಖಂಡರಾದ ವಿಶ್ವನಾಥ ಕಪ್ಪತನವರ, ಮೋಹನ ಅಲಮೇಲಕರ, ಶಿವಣ್ಣ ಮಹಾಂತಶೆಟ್ಟರ್ ಹಾಗೂ ಶಿರಹಟ್ಟಿ ಪಪಂ ಕೆಲ ಸದಸ್ಯರು ಸೇರಿದಂತೆ 250ಕ್ಕೂ ಹೆಚ್ಚು ಕಾರ್ಯಕರ್ತ ಬಿಜೆಪಿ ಸೇರಿದರು
ಹೈಕಮಾಂಡ್ ಕೇಳಿ ಸ್ನಾನ
ರಾಹುಲ್ ಗಾಂಧಿ ಕಾಂಗ್ರೆಸ್ನಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ ಎನ್ನುತ್ತಾರೆ. ಆದರೆ ರಾಜ್ಯದ ನಾಯಕರು ದಿನವೂ ಹೈಕಮಾಂಡ್ ಕೇಳಿಯೇ ಸ್ನಾನ ಮಾಡುತ್ತಾರೆ. ಇಂಥವರಿಗೆ ಬಿಜೆಪಿ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ಪ್ರಹ್ಲಾದ್ ಜೋಶಿ ಹೇಳಿದರು. ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೊದಲು 10 ವರ್ಷದಲ್ಲಿ ನಿಮ್ಮ ಸರ್ಕಾರ ಮಾಡಿದ ಸಾಧನೆಗಳೆಂದರೆ ಅದು ಕೋಟಿ ಕೋಟಿ ಹಗರಣಗಳು. ನಮ್ಮ ದೇಶದಲ್ಲಿನ ಭ್ರಷ್ಟಾಚಾರದ ಬಗ್ಗೆ ಜಗತ್ತೇ ಮಾತನಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕಿರುವ ನೀವು ನಿಮ್ಮ ತಟ್ಟೆಯಲ್ಲೇನಿದೆ ಎನ್ನುವುದನ್ನು ನೋಡಿಕೊಳ್ಳಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಅವರಿಂದ ಅಲ್ಲ, ನಮ್ಮಲ್ಲಿನ ಕಚ್ಚಾಟದಿಂದ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

